ಬಂಡೀಪುರ, ಬಿಆರ್‌ಟಿಯಲ್ಲಿ ಹೊಸ ವರ್ಷದ ಮೋಜು, ಮಸ್ತಿಗೆ ಬ್ರೇಕ್

– ಡಿ.31, ಜ.1ರಂದು ವಾಸ್ತವ್ಯಕ್ಕೆ ನಿರ್ಬಂಧ

ಚಾಮರಾಜನಗರ: ಜಿಲ್ಲೆ ಪ್ರವಾಸಿಗರ ನೆಚ್ಚಿನ ತಾಣವಾಗಿದ್ದು, ದೇಶ, ವಿದೇಶದಿಂದ ಹಲವರು ಪ್ರವಾಸಕ್ಕೆ ಆಗಮಿಸುತ್ತಾರೆ. ಎರಡು ಹುಲಿ ಸಂರಕ್ಷಿತಾರಣ್ಯ ಹೊಂದಿರುವ ಜಿಲ್ಲೆ ಎಂಬ ಹೆಗ್ಗಳಿಕೆ ಕೂಡ ಚಾಮರಾಜನಗರಕ್ಕಿದೆ. ಬಂಡೀಪುರ, ಬಿಳಿಗಿರಿರಂಗನ ಬೆಟ್ಟ ಹುಲಿ ಸಂರಕ್ಷಿತಾರಣ್ಯದಲ್ಲಿ ಈ ಬಾರಿ ಹೊಸ ವರ್ಷಾಚರಣೆಗೆ ಬ್ರೇಕ್ ಬಿದ್ದಿದೆ. ಕೊರೊನಾ ಹಿನ್ನೆಲೆ ಮೋಜು, ಮಸ್ತಿಗೆ ಕಡಿವಾಣ ಹಾಕಲಾಗಿದೆ.

ಬಂಡೀಪುರ, ಬಿಳಿಗಿರಿರಂಗನ ಬೆಟ್ಟ ಹುಲಿ ಸಂರಕ್ಷಿತಾರಣ್ಯದಲ್ಲಿ ಹೊಸ ವರ್ಷಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಗುತ್ತದೆ. ಆದರೆ ಈ ಬಾರಿ ಇದಕ್ಕೆ ಬ್ರೇಕ್ ಬಿದ್ದಿದೆ. ಡಿಸೆಂಬರ್ 31 ಹಾಗೂ ಜನವರಿ 1ರಂದು ಬಂಡೀಪುರದಲ್ಲಿ ಪ್ರವಾಸಿಗರ ವಾಸ್ತವ್ಯಕ್ಕೆ ನಿಷೇಧ ಹೇರಲಾಗಿದೆ. ಪ್ರತಿವರ್ಷದ ಕೊನೆ ದಿನ ಇಲ್ಲಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಿದ್ದರು. ಆದರೆ ಈ ವರ್ಷ ಕೊರೊನಾ ಹಿನ್ನೆಲೆ ಅರಣ್ಯ ಇಲಾಖೆ ಪ್ರವಾಸಿಗರ ವಾಸ್ತವ್ಯಕ್ಕೆ ನಿರ್ಬಂಧ ಹೇರಿದೆ.

ಹೊಸ ವರ್ಷಾಚರಣೆಗೆ ಕೆಲದಿನಗಳ ಮುಂಚೆಯೇ ಇಲ್ಲಿನ ಕಾಟೇಜ್ ಹಾಗೂ ಡಾರ್ಮೆಟರಿಗಳನ್ನು ಪ್ರವಾಸಿಗರು ಆನ್‍ಲೈನ್ ಮೂಲಕ ಬುಕ್ ಮಾಡುತ್ತಿದ್ದರು. ಆದರೆ ಈ ಬಾರಿ ಡಿಸೆಂಬರ್ 31 ಹಾಗೂ ಜನವರಿ 1ಕ್ಕೆ ಆನ್‍ಲೈನ್ ಮೂಲಕ ಬುಕ್ ಮಾಡುವುದನ್ನು ಬ್ಲಾಕ್ ಮಾಡಲಾಗಿದೆ. ಎಂದಿನಂತೆ ಬೆಳಗ್ಗೆ ಹಾಗೂ ಸಂಜೆ ಸಫಾರಿ ಇರಲಿದೆ. ಪ್ರವಾಸಿಗರು ಪ್ರಾಣಿಗಳನ್ನು ಕಣ್ತುಂಬಿಕೊಳ್ಳಬಹುದಾಗಿದೆ. ಆದರೆ ವಾಸ್ತವ್ಯ ಮಾಡುವಂತಿಲ್ಲ ಎಂದು ಬಂಡೀಪುರ ಹುಲಿ ಯೋಜನೆ ನಿರ್ದೇಶಕ ನಟೇಶ್ ತಿಳಿಸಿದ್ದಾರೆ.

ಬಿಳಿಗಿರಿ ರಂಗನ ಬೆಟ್ಟದ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯಲ್ಲಿಯೂ ಕಾಟೇಜಸ್ ಹಾಗೂ ಡಾರ್ಮೇಟರಿಗಳಿಗೆ ಡಿ.31 ಮತ್ತು ಜ.1 ರಂದು ನಿಷೇಧಿಸಿದೆ ಎಂದು ಬಿ.ಆರ್.ಟಿ ಯ ಸಿಎಫ್ ಸಂತೋಷ್ ಮಾಹಿತಿ ನೀಡಿದ್ದಾರೆ. ಈ ಮೂಲಕ ಹೊಸ ವರ್ಷ ಸಂಭ್ರಮಾಚರಣೆಯ ಖುಷಿಯಲ್ಲಿದ್ದ ಪ್ರವಾಸಿಗರ ಆಸೆಗೆ ತಣ್ಣೀರೆರಚಿದಂತಾಗಿದೆ. ಅಲ್ಲದೆ ಬಂಡೀಪುರದಲ್ಲಿ ಕೊರೊನಾ ಮುಂಜಾಗೃತಾ ಕ್ರಮವಾಗಿ ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ಶೇ.50ರಷ್ಟು ಮಾತ್ರ ಕಾಟೇಜ್, ಡಾರ್ಮೇಟರಿಗಳ ಬುಕ್ಕಿಂಗ್ ವ್ಯವಸ್ಥೆ ಕಲ್ಪಿಸುತ್ತಿದೆ. ಹೊಸ ವರ್ಷಕ್ಕೆ ಸಂಪೂರ್ಣ ನಿಷೇಧ ಹೇರಿರುವುದು ಪ್ರವಾಸಿಗರಲ್ಲಿ ಬೇಸರ ಮೂಡಿಸಿದೆ.

Comments

Leave a Reply

Your email address will not be published. Required fields are marked *