ಫೋನ್ ಪಾಸ್‍ವರ್ಡ್ ನೀಡಲು ನಿರಾಕರಿಸಿದ ಲಿವ್-ಇನ್ ಪಾರ್ಟ್ನರ್‌ನ ಕೊಂದೇ ಬಿಟ್ಟ!

ನವದೆಹಲಿ: ಲಿವ್-ಇನ್-ರಿಲೇಷನ್‍ಶಿಪ್ ನಲ್ಲಿದ್ದ ಮಹಿಳೆಯನ್ನು ಕೊಲೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ 39 ವರ್ಷದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಈ ಘಟನೆ ಪೂರ್ವ ದೆಹಲಿಯ ವಿನೋದ್ ನಗರ ಎಂಬಲ್ಲಿ ಕಳೆದ ಮಂಗಳವಾರ ನಡೆದಿದ್ದು, ಆರೋಪಿಯನ್ನು ಶನಿವಾರ ಬಂಧಿಸಲಾಗಿದೆ.

ಮೃತ ದುರ್ದೈವಿ ಮಹಿಳೆಯನ್ನು ಮಮತಾ ಶರ್ಮಾ ಎಂದು ಗುರುತಿಸಲಾಗಿದ್ದು, ಈಕೆ ಖಾಸಗಿ ಕಂಪನಿಯಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದಳು. ಮಂಗಳವಾರ ಸಂಜೆ ಆಕೆಯ 17 ವರ್ಷದ ಮಗ ಮನೆಗೆ ಬಂದು ನೋಡಿದಾಗ ತಾಯಿ ರಕ್ತದ ಮಡುವಿನಲ್ಲಿ ಬಿದ್ದಿದ್ದು, ತಲೆ ಜಜ್ಜಿ ಹೋಗಿತ್ತು. ತಾಯಿಯ ಮೃತದೇಹದ ಪಕ್ಕದಲ್ಲಿಯೇ ಸುತ್ತಿಗೆ ಕೂಡ ಬಿದ್ದಿತ್ತು. ಕೂಡಲೇ ಆತ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.

ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಮಹಿಳೆಯ ಲಿವ್-ಇನ್ ಪಾರ್ಟ್ನರ್ ಬ್ರಹ್ಮಪಾಲ್ ಸಿಂಗ್ ಕೊಲೆ ಮಾಡಿರಬಹುದು ಎಂಬ ಶಂಕೆ ವ್ಯಕ್ತಪಡಿಸಿದರು. ಇದಕ್ಕೆ ಪುಷ್ಠಿ ಎಂಬಂತೆ ಮಹಿಳೆಯ ಸಾವಿನ ಬಳಿಕ ಆತ ಕೂಡ ತಲೆಮರೆಸಿಕೊಂಡಿದ್ದನು. ಈ ಮಧ್ಯೆ ಕೆಲವರು ಸಿಂಗ್ ಇರುವ ಸ್ಥಳದ ಲೊಕೇಶನ್ ಪೊಲೀಸರಿಗೆ ನೀಡಿದ್ದಾರೆ. ಇದರ ಆಧಾರದ ಮೇಲೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ತನಿಖೆ ನಡೆಸಿದಾಗ ಸಿಂಗ್ ಕೊಲೆ ಮಾಡಿರುವ ಸತ್ಯ ಒಪ್ಪಿಕೊಂಡಿದ್ದಾನೆ.

ಮೃತ ಮಹಿಳೆ ಮೂರು ವರ್ಷಗಳ ಹಿಂದೆ ಪತಿಗೆ ವಿಚ್ಛೇದನ ನೀಡಿದ್ದಳು. 2 ವರ್ಷಗಳ ಹಿಂದೆ ಮಹಿಳೆ ಮೂರು ಮಕ್ಕಳ ತಂದೆ ಸಿಂಗ್ ನನ್ನು ಭೇಟಿಯಾಗಿದ್ದಳು. ಆ ಬಳಿಕದಿಂದ ಇಬ್ಬರು ಸಂಬಂಧದಲ್ಲಿದ್ದರು. ಸಿಂಗ್ ಪೂರ್ವ ದೆಹಲಿಯ ಖಿಕ್ರಿಪುರದಲ್ಲಿ ತಮ್ಮ ಕಟ್ಟಡವನ್ನು ಬಾಡಿಗೆಗೆ ನೀಡಿ ಜೀವನ ಸಾಗಿಸುತ್ತಿದ್ದನು ಎಂದು ಉಪ ಪೊಲೀಸ್ ಆಯುಕ್ತ ರಾಕೇಶ್ ಪಾವೇರಿಯಾ ತಿಳಿಸಿದ್ದಾರೆ.

ಎರಡು ತಿಂಗಳ ಹಿಂದೆಯಷ್ಟೇ ವಿನೋದ್ ನಗರದಲ್ಲಿ ಬಾಡಿಗೆ ಫ್ಲ್ಯಾಟ್ ನಲ್ಲಿ ಇಬ್ಬರು ಜೊತೆಯಾಗಿ ವಾಸಿಸಲು ಆರಂಭಿಸಿದ್ದರು. ಇವರಿಬ್ಬರ ಜೊತೆಗೆ ಶರ್ಮಾಳ 17 ವರ್ಷದ ಮಗ ಕೂಡ ವಾಸವಾಗಿದ್ದನು. ದಿನಗಳೆದಂತೆ ಸಿಂಗ್ ಪತ್ನಿ ಸೇರಿದಂತೆ ಕುಟುಂಬದ ಸದಸ್ಯರು ಗಲಾಟೆ ಮಾಡಲು ಆರಂಭಿಸಿದ್ದರು. ಈ ಹಿನ್ನೆಲೆಯಲ್ಲಿ ಶರ್ಮಾ ಸಂಬಂಧ ಮುಂದುವರಿಸಲು ನಿರಾಕರಿಸಿದ್ದಳು. ಆದರೆ ಶರ್ಮಾ ಜೊತೆಗಿನ ಸಂಬಂಧವನ್ನು ಕಡಿದುಕೊಳ್ಳಲು ಸಿಂಗ್ ಗೆ ಇಷ್ಟವಿರಲಿಲ್ಲ.

ಇತ್ತ ಶರ್ಮಾ ಸಂಬಂಧ ಕೊನೆಗೊಳಿಸಲು ಯತ್ನಿಸಿದ್ದರೆ, ಅತ್ತ ಸಿಂಗ್, ಶರ್ಮಾ ಬೇರೋಬ್ಬನ ಜೊತೆ ಸಂಬಂಧ ಬೆಳೆಸಲು ಮುಂದಾಗುತ್ತಿದ್ದಾಳೆ ಎಂದು ಸಂಶಯ ಪಟ್ಟಿದ್ದಾನೆ. ಅಲ್ಲದೆ ಆಕೆ ಬೇರೊಬ್ಬನ ಜೊತೆ ಮಾತನಾಡುತ್ತಿದ್ದಾಳೆ ಎಂದು ಅನುಮಾನ ವ್ಯಕ್ತಪಡಿಸಿದ್ದಾನೆ. ಅಂತೆಯೇ ಮಂಗಳವಾರ ಸಂಜೆ ಶರ್ಮಾ ಯಾರ ಜೊತೆನೋ ಫೋನಿನಲ್ಲಿ ಮಾತನಾಡುತ್ತಿರುವುದು ಸಿಂಗ್ ಗಮನಕ್ಕೆ ಬಂದಿದೆ. ಹೀಗಾಗಿ ಆಕೆ ಫೋನ್ ಇಟ್ಟ ಬಳಿಕ ಪಾಸ್‍ವರ್ಡ್ ಕೇಳಿದ್ದಾನೆ. ಆದರೆ ಶರ್ಮಾ, ಸಿಂಗ್ ಗೆ ತನ್ನ ಮೊಬೈಲ್ ಪಾಸ್ ವರ್ಡ್ ನೀಡಲು ನಿರಾಕರಿಸಿದ್ದಾಳೆ. ಇದರಿಂದ ಸಿಟ್ಟಿಗೆದ್ದ ಸಿಂಗ್ ಆಕೆಯ ತಲೆಗೆ ಸುತ್ತಿಗೆಯಿಂದ ಹೊಡೆದು ಬರ್ಬರವಾಗಿ ಕೊಲೆ ಮಾಡಿ ಪರಾರಿಯಾಗಿದ್ದಾನೆ ಎಂದು ಡಿಸಿಪಿ ವಿವರಿಸಿದ್ದಾರೆ.

Comments

Leave a Reply

Your email address will not be published. Required fields are marked *