ಫೋನ್ ಕರೆ ಸ್ವೀಕರಿಸಲು ಗೆಳತಿ ನಕಾರ- ಮನನೊಂದು ಯುವಕ ಆತ್ಮಹತ್ಯೆಗೆ ಯತ್ನ

ಚೆನ್ನೈ: ಪ್ರಿಯತಮೆ ತನ್ನ ಕಾಲ್ ಸ್ವೀಕರಿಸುತ್ತಿಲ್ಲ ಎಂದು ಮನನೊಂದು 22 ವರ್ಷದ ಆಟೋ ಚಾಲಕನೊಬ್ಬ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಚೆನ್ನೈನಲ್ಲಿ ನಡೆದಿದೆ.

ಆತ್ಮಹತ್ಮೆಗೆ ಯತ್ನಿಸಿದವನನ್ನು ದುರೈ ಎಂದು ಗುರುತಿಸಲಾಗಿದ್ದು, ಈತ ಉತ್ತರ ಚೆನ್ನೈನ ಕೊರಕ್ಕುಪೇಟೆ ನೆರೆಹೊರೆಯ ಪಟ್ಟಾಭಿಷೇಕ ನಗರ ನಿವಾಸಿ.

ಕೊರೊನಾ ಲಾಕ್ ಡೌನ್ ಆದ ಬಳಿಕ ದುರೈ ಹಾಗೂ ಆತನ ಪ್ರಿಯತಮೆ ಭೇಟಿಯಾಗಿರಲಿಲ್ಲ. ಆದರೆ ಫೋನ್ ಕಾಲ್ ಹಾಗೂ ಮೆಸೇಜ್ ಮೂಲಕ ಇಬ್ಬರೂ ನಿರಂತರ ಸಂಪರ್ಕದಲ್ಲಿದ್ದರು. ಇತ್ತೀಚೆಗೆ ಗೆಳತಿ ಫೋನ್, ಮೆಸೇಜ್ ಮಾಡದೆ ಈತನನ್ನು ನಿರ್ಲಕ್ಷ್ಯಿಸುತ್ತಿದ್ದಳು. ಇದರಿಂದ ದುರೈ ಮಾನಸಿಕವಾಗಿ ನೊಂದಿದ್ದಾನೆ. ಈ ಹಿನ್ನೆಲೆಯಲ್ಲಿ ಗುರುವಾರ ತಾನು ವಾಸವಿದ್ದ ಕಟ್ಟಡದ ಮೂರನೇ ಮಹಡಿಯಿಂದ ಕೆಳಕ್ಕೆ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ್ದಾನೆ.

ಕಟ್ಟಡದಿಂದ ಜಿಗಿದಿದ್ದರಿಂದ ದುರೈ ಕಾಲಿನ ಮೂಳೆಗಳು ಹಾಗೂ ದೇಹದ ಇತರೆ ಭಾಗಗಳಿಗೆ ಗಂಭೀರವಾಗಿ ಗಾಯಗಳಾಗಿವೆ. ನೋವಿನಿಂದ ಚೀರಾಡಿದ್ದನು ಕೇಳಿಸಿಕೊಂಡ ಸ್ಥಳೀಯರು ಕೂಡಲೇ ಆತನ ರಕ್ಷಣೇಗೆ ಧಾವಿಸಿದ್ದಾರೆ. ಬಳಿಕ ಆತನನ್ನು ಜಿಎಸ್‍ಎಂಸಿಎಚ್ ಗೆ ದಾಖಲಿಸಿ ಐಸಿಯುವಿನಲ್ಲಿ ಚಿಕಿತ್ಸೆ ಕೊಡಿಲಾಗುತ್ತಿದೆ. ಸದ್ಯ ಯುವಕ ಪ್ರಜ್ಞಾಹೀನನಾಗಿದ್ದು, ವೈದ್ಯರು ನಿಗಾ ಇಟ್ಟಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ಘಟನೆ ಸಂಬಂಧ ಆರ್‍ಕೆ ನಗರ ಪೊಲೀಸರು ತನಿಖೆ ಆರಂಭಿಸಿದ್ದಾರೆ. ದುರೈ ಮೊಬೈಲ್ ಫೋನ್ ವಶಕ್ಕೆ ಪಡೆದುಕೊಂಡಿದ್ದಾರೆ. ಅಲ್ಲದೆ ದುರೈ ಆರೋಗ್ಯ ಸುಧಾರಿಸಿದ ಬಳಿಕ ಆತನ ಬಳಿಯಿಂದ ಹೇಳಿಕೆ ಪಡೆದುಕೊಳ್ಳಲಾಗುವುದು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪೊಲೀಸರ ಪ್ರಕಾರ, ದುರೈ ತನ್ನ ಹೆತ್ತವರೊಂದಿಗೆ ಕೊರಕ್ಕುಪೇಟೆ ವಸತಿ ಸಮುಚ್ಚಯದ ಮೂರನೇ ಮಹಡಿಯಲ್ಲಿರುವ ಅಪಾರ್ಟ್ ಮೆಂಟ್ ನಲ್ಲಿ ವಾಸಿಸುತ್ತಿದ್ದು, ಗೆಳತಿ ಕೂಡ ನೆರೆಹೊರೆಯ ನಿವಾಸಿ ಎಂದು ತಿಳಿದುಬಂದಿದೆ.

Comments

Leave a Reply

Your email address will not be published. Required fields are marked *