ಫೋಟೋ ತೆಗೆಯುತ್ತಿದ್ದಂತೆ ಉಸಿರಾಡಿದ ಸತ್ತಿದ್ದ ವ್ಯಕ್ತಿ – ಕೇರಳದಲ್ಲೊಂದು ವಿಚಿತ್ರ ಘಟನೆ

ತಿರುವನಂತಪುರಂ: ಫೋಟೋ ತೆಗೆಯುತ್ತಿದ್ದಂತೆ ಸತ್ತಿದ್ದಾನೆ ಎಂದು ಭಾವಿಸಿದ್ದ ವ್ಯಕ್ತಿಯೊಬ್ಬ ಉಸಿರಾಡಿರುವ ವಿಚಿತ್ರ ಘಟನೆ ಕೇರಳದ ಎರ್ನಾಕುಲಂ ಜಿಲ್ಲೆಯಲ್ಲಿ ನಡೆದಿದೆ.

ಕಳೆದ ಭಾನುವಾರ ಎರ್ನಾಕುಲಂನ ಫೋಟೋಗ್ರಾಫರ್ ಟಾಮಿ ಥೋಮಸ್ ಅವರಿಗೆ ಕರೆ ಮಾಡಿದ ಎಡಥಾಲಾ ಪೊಲೀಸರು, ಓರ್ವ ವ್ಯಕ್ತಿ ತನ್ನ ಮನೆಯಲ್ಲೇ ಸಾವನ್ನಪ್ಪಿದ್ದಾನೆ. ಹೀಗಾಗಿ ವಿಚಾರಣಾ ವರದಿಯನ್ನು ತಯಾರು ಮಾಡಲು ಅವನ ಶವದ ಫೋಟೋ ಬೇಕು. ಫೋಟೋ ತೆಗೆದುಕೊಡಿ ಎಂದು ಹೇಳಿದ್ದಾರೆ. ಅದರಂತೆ ಟಾಮಿ ಕೂಡ ಸ್ಥಳಕ್ಕೆ ಹೋಗಿದ್ದಾರೆ.

ಪೊಲೀಸರ ಮಾತಿನಂತೆ ಮೃತ ವ್ಯಕ್ತಿಯ ಮನೆಗೆ ಹೋದ ಟಾಮಿ, ಮೃತದೇಹದ ಫೋಟೋ ತೆಗೆಲು ಆರಂಭ ಮಾಡಿದ್ದಾರೆ. ಈ ವೇಳೆ ಅವರಿಗೆ ಒಂದು ರೀತಿಯ ಧ್ವನಿ ಕೇಳಿಸಿದೆ. ಆದರೆ ಅದರ ಬಗ್ಗೆ ಗಮನ ಕೊಡದ ಟಾಮಿ ಫೋಟೋ ತೆಗೆಯುವಲ್ಲಿ ಬ್ಯುಸಿಯಾಗಿದ್ದಾರೆ. ಈ ವೇಳೆ ಅವರಿಗೆ ಮತ್ತೊಮ್ಮೆ ಜೋರಾಗಿ ಧ್ವನಿ ಕೇಳಿಸಿದೆ. ನಂತರ ಅವರು ಧ್ವನಿ ಎಲ್ಲಿಂದ ಬರುತ್ತಿದೆ ಎಂದು ಗಮನಿಸಿದಾಗ, ಸತ್ತಂತೆ ಬಿದ್ದಿದ್ದ ವ್ಯಕ್ತಿಯ ದೇಹದಿಂದ ಶಬ್ದ ಬರುತ್ತಿರುವುದು ಅವರಿಗೆ ಗೊತ್ತಾಗಿದೆ.

ದೇಹದಲ್ಲಿ ಶಬ್ದ ಬರುತ್ತಿದೆ ಎಂದರೇ ಈತ ಬದುಕಿದ್ದಾನೆ ಎಂದು ತಿಳಿದ ಫೋಟೋಗ್ರಾಫರ್ ಟಾಮಿ, ಈ ವಿಚಾರವನ್ನು ಪೊಲೀಸರಿಗೆ ತಿಳಿಸಿದ್ದಾರೆ. ವಿಷಯ ತಿಳಿದು ತಕ್ಷಣ ಸ್ಥಳಕ್ಕೆ ಬಂದ ಪೊಲೀಸ್ ಅಧಿಕಾರಿಗಳು ಆತನನ್ನು ತ್ರಿಶೂರ್ ನಲ್ಲಿರುವ ಜುಬಿಲಿ ಮಿಷನ್ ಆಸ್ಪತ್ರೆಗೆ ಸೇರಿಸಿದ್ದಾರೆ. ಆಸ್ಪತ್ರೆಯಲ್ಲಿ ಆತನನ್ನು ಐಸಿಯುನಲಿಟ್ಟು ಚಿಕಿತ್ಸೆ ಮಾಡಿದ್ದಾರೆ. ಈಗ ಆತ ಬದುಕುಳಿದಿದ್ದಾನೆ ಎಂದು ಪೊಲೀಸ್ ಆಧಿಕಾರಿಗಳು ಮಾಹಿತಿ ನೀಡಿದ್ದಾರೆ.

ವರದಿಯ ಪ್ರಕಾರ, ಪಾಲಕ್ಕಾಡ್ ಮೂಲದ ಶಿವದಾಸನ್ ಮನಾಲಿಮುಕ್ಕುವಿನ ಬಾಡಿಗೆ ವಸತಿಗೃಹದಲ್ಲಿ ಏಕಾಂಗಿಯಾಗಿ ವಾಸವಿದ್ದರು. ಶಿವದಾಸನ್ ತಲೆಗೆ ಪೆಟ್ಟಾಗಿ ಮನೆಯಲ್ಲೇ ಪ್ರಜ್ಞಾಹೀನರಾಗಿ ಬಿದ್ದಿದ್ದಾರೆ. ಈ ವೇಳೆ ಅವರ ಮನೆಗೆ ಬಂದ ಶಿವದಾಸನ್ ಅವರ ಪರಿಚಯಸ್ಥನೊಬ್ಬ, ಅವರು ಬಿದ್ದಿರುವುದನ್ನು ನೋಡಿ ಭಯದಿಂದ ಶಿವದಾಸನ್ ಸಾವನ್ನಪ್ಪಿದ್ದಾರೆ ಎಂದು ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಆದರೆ ಆತನನ್ನು ನೋಡಲು ಹೋಗದ ಪೊಲೀಸರು ಶವದ ಫೋಟೋ ತೆಗೆಸಲು ಫೋಟೋಗ್ರಾಫರ್ ಅನ್ನು ಕರೆದುಕೊಂಡು ಬಂದಿದ್ದಾರೆ.

ಈ ವಿಚಾರದ ಬಗ್ಗೆ ಮಾತನಾಡಿರುವ ಫೋಟೋಗ್ರಾಫರ್ ಟಾಮಿ, ನಾನು ಮನೆಗೆ ಹೋದಾಗ ಅವರು ಹಿಂಬದಿಯಾಗಿ ಬಿದ್ದಿದ್ದರು. ಅವರು ಏನೋ ಕೆಲಸ ಮಾಡಲು ಹೋಗಿ ಅವರ ಮಂಚಕ್ಕೆ ತಲೆಯನ್ನು ಬಡಿದುಕೊಂಡಿದ್ದಾರೆ. ಇದರಿಂದ ಪ್ರಜ್ಞೆತಪ್ಪಿದ್ದಾರೆ. ನಂತರ ನಾನು ಸ್ಥಳಕ್ಕೆ ಹೋದಾಗ ಫೋಟೋ ತೆಗೆಯಲು ಕತ್ತಲಿದೆ ಎಂದು ಲೈಟ್ ಆನ್ ಮಾಡಿದೆ. ಆಗ ಆತನ ಮೇಲೆ ಬೆಳಕು ಬಿದ್ದು ಆತನಿಗೆ ಎಚ್ಚರವಾಗಿದೆ. ನಾನು ಫೋಟೋ ಕ್ಲಿಕ್ ಮಾಡುವಾಗ ಆತ ಶಬ್ದ ಮಾಡಿದ. ಆಗ ನನಗೆ ಆತ ಬದುಕಿದ್ದಾನೆ ಎಂದು ಗೊತ್ತಾಯ್ತು ಎಂದು ಹೇಳಿದ್ದಾರೆ.

Comments

Leave a Reply

Your email address will not be published. Required fields are marked *