ಫೆಬ್ರವರಿ 23ರಂದು ಖಾಸಗಿ ಶಿಕ್ಷಣ ಸಂಸ್ಥೆಗಳ ಪ್ರತಿಭಟನೆ

ಬೆಂಗಳೂರು: ಸರ್ಕಾರ ಹಾಗೂ ಶಿಕ್ಷಣ ಇಲಾಖೆ ವಿರುದ್ಧ ಖಾಸಗಿ ಶಾಲೆಗಳ ಸಮರ ಮುಂದುವರಿದಿದೆ. ಸರ್ಕಾರದ ಆದೇಶ ಮರು ಪರಿಶೀಲನೆ ಮಾಡಬೇಕು, ಇಲ್ಲದಿದ್ರೆ ಫೆಬ್ರವರಿ 23ಕ್ಕೆ ಬೃಹತ್ ಪ್ರತಿಭಟನೆ ನಡೆಸಲು ಖಾಸಗಿ ಶಾಲೆಗಳು ಸಜ್ಜಾಗಿವೆ.

ಇಂದು ಬೆಂಗಳೂರಿನ ಕೊಂಡಜ್ಜಿ ಸಭಾಂಗಣದಲ್ಲಿ ಸಭೆ ಸೇರಿದ್ದ ಖಾಸಗಿ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರು ಈ ನಿರ್ಧಾರಕ್ಕೆ ಬಂದಿದ್ದಾರೆ. ಇಷ್ಟು ದಿನ ಸರ್ಕಾರದ ಶುಲ್ಕವನ್ನ ಒಳಗೊಳಗೆ ವಿರೋಧಿಸುತ್ತಿದ್ದ ಖಾಸಗಿ ಶಿಕ್ಷಣ ಸಂಸ್ಥೆಗಳು ಇಂದು ಬಹಿರಂಗವಾಗಿ ಅಸಮಾಧಾನ ಹೊರಹಾಕಿವೆ. ರಾಜ್ಯ ಸರ್ಕಾರ ಶೇ.30 ಶುಲ್ಕ ಕಡಿತಗೊಳಿಸಿರುವುದು ಅವೈಜ್ಞಾನಿಕವಾಗಿದ್ದು, ಒಟ್ಟು ಶುಲ್ಕದಲ್ಲಿ ಶೇ.60 ರಿಂದ 70ರಷ್ಟು ಕಡಿತವಾಗುತ್ತಿದೆ. ಈ ಆದೇಶವನ್ನ ಸರ್ಕಾರ ಹಿಂಪಡೆದು ಮರುಪರಿಶೀಲನೆ ಮಾಡಬೇಕೆಂದು ಒತ್ತಾಯಿಸಿದ್ದಾರೆ.

ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ರಾಜ್ಯ ಸರ್ಕಾರ ಕೋವಿಡ್ ಸಮಯದಲ್ಲಿ ಯಾವುದೇ ಕೊಡುಗೆಗಳನ್ನ ನೀಡಿಲ್ಲ. ಪೋಷಕರಿಗೂ ಸಹ ಯಾವುದೇ ರೀತಿಯ ಸಹಾಯ ಮಾಡಿಲ್ಲ. ಸರ್ಕಾರದ ನಿರ್ಧಾರದಿಂದ ಶಿಕ್ಷಣ ಸಂಸ್ಥೆಗಳು ಮತ್ತು ಶಿಕ್ಷಕರಿಗೆ ಸಾಕಷ್ಟು ಸಮಸ್ಯೆ ಆಗ್ತಿದೆ. ಸರ್ಕಾರ ಯಾವ ಅಧಿಕಾರದ ಮೇಲೆ ಶುಲ್ಕ ಕಡಿತ ಮಾಡಿದೆ ಅಂತ ಮಾಜಿ ಸಂಸದ ಎಲ್.ಆರ್ ಶಿವರಾಮೇಗೌಡ ಶಿಕ್ಷಣ ಸಚಿವ ಸುರೇಶ್ ಕುಮಾರ್ ವಿರುದ್ಧ ಕಿಡಿಕಾರಿದ್ದಾರೆ.

ಖಾಸಗಿ ಶಿಕ್ಷಣ ಸಂಸ್ಥೆಗಳು ಇದೇ ತಿಂಗಳ 23ರಂದು ಬೆಂಗಳೂರಿನ ಸಂಗೊಳ್ಳಿರಾಯಣ್ಣ ರೈಲ್ವೆ ನಿಲ್ದಾಣದಿಂದ ಫ್ರೀಡಂ ಪಾರ್ಕ್ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲು ನಿರ್ಧಾರ ಮಾಡಿವೆ.

ಖಾಸಗಿ ಶಾಲೆಗಳ ಬೇಡಿಕೆಗಳು:
1. ರಾಜ್ಯ ಸರ್ಕಾರ ಆದೇಶ ಮಾಡಿರುವ ಶೇ.30ರಷ್ಟು ಶುಲ್ಕ ಕಡಿತದ ಆದೇಶವನ್ನ ಪುನರ್ ಪರಿಶೀಲನೆ ಮಾಡಬೇಕು.
2. ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಮತ್ತು ಶಿಕ್ಷಕರು ಮತ್ತು ಶಿಕ್ಷಕೇತರ ಸಿಬ್ಬಂದಿಗೆ ಅನುದಾನ ನೀಡಿ.
3. ಕಟ್ಟಡ ಸುರಕ್ಷಿತ ಪ್ರಮಾಣ ಪತ್ರಗಳನ್ನ ಹಿಂದಿನ ಶಾಲೆಗಳಿಗೆ ಕೈ ಬಿಡುವಂತೆ ಒತ್ತಾಯ.
4. 1 ರಿಂದ 5 ನೇ ತರಗತಿಗಳನ್ನ ಆರಂಭ ಮಾಡಬೇಕು.
5. ಬಿಇಓ ಡಿಡಿಪಿಐಗಳ ಭ್ರಷ್ಟಾಚಾರ ನಿಯಂತ್ರಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು.

ಖಾಸಗಿ ಶಿಕ್ಷಣ ಸಂಸ್ಥೆಗಳ ಪರವಾಗಿ ಎಂಎಲ್‍ಸಿ ಪುಟ್ಟಣ್ಣ ಸಹ ಸರ್ಕಾರದ ಕ್ರಮವನ್ನ ವಿರೋಧಿಸಿದ್ದಾರೆ. ಇದೇ 23ಕ್ಕೆ ಬೃಹತ್ ಪ್ರತಿಭಟನೆಯನ್ನ ಮಾಡುತ್ತೇವೆ. ನಮ್ಮ ಹೋರಾಟ ಅಂದಿಗೆ ಕೊನೆಯಾಗಲ್ಲ. ಸರ್ಕಾರ ನಮ್ಮ ಬೇಡಿಕೆ ಈಡೇರಸದಿದ್ರೆ ಶಿಕ್ಷಣ ಸಚಿವರ ಕಚೇರಿಗೆ ಬೀಗ ಹಾಕಿ ನಿರಂತರವಾಗಿ ಹೋರಾಟ ಮಾಡಬೇಕಾಗುತ್ತೆ ಎಂದು ಎಂಎಲ್‍ಸಿ ಪುಟ್ಟಣ್ಣ ಎಚ್ಚರಿಕೆ ನೀಡಿದ್ದಾರೆ.

Comments

Leave a Reply

Your email address will not be published. Required fields are marked *