ಫುಡ್ ಪಾಯ್ಸನ್ ಶಂಕೆ- ಒಂದೇ ಗ್ರಾಮದ 50ಕ್ಕೂ ಹೆಚ್ಚು ಮಂದಿ ಅಸ್ವಸ್ಥ

ಚಿಕ್ಕಬಳ್ಳಾಪುರ: ಒಂದೇ ಗ್ರಾಮದ ಐವತ್ತಕ್ಕೂ ಹೆಚ್ಚು ಮಂದಿ ವಾಂತಿ ಹಾಗೂ ಬೇಧಿಯಿಂದ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ. ತಾಲೂಕಿನ ರೆಡ್ಡಿಗೊಲ್ಲವಾರಹಳ್ಳಿಯ ಐವತ್ತಕ್ಕೂ ಹೆಚ್ಚು ಮಂದಿ ಚಿಕ್ಕಬಳ್ಳಾಪುರ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಭಾನುವಾರ ರೆಡ್ಡಿಗೊಲ್ಲವಾರಹಳ್ಳಿಗೆ ಹೊಂದಿಕೊಂಡಿರುವ ಬಯಪ್ಪನಹಳ್ಳಿ ಗ್ರಾಮದ ಗುರುಪ್ರಸಾದ್ ಎಂಬವರ ಮನೆಯಲ್ಲಿ ನಾಮಕರಣ ಮಹೋತ್ಸವ ನಡೆದಿತ್ತು. ಕಾರ್ಯಕ್ರಮ ಮುಗಿದ ನಂತರ ಸಂಜೆ ಉಳಿದಿದ್ದ ಊಟವನ್ನು ರೆಡ್ಡಿಗೊಲ್ಲವಾರಹಳ್ಳಿಯ ಜನ ತೆಗೆದುಕೊಂಡು ಬಂದು ಊಟ ಮಾಡಿದ್ದರು. ಇಂದು ಬೆಳಗ್ಗೆಯಿಂದ ತಡರಾತ್ರಿ ಊಟ ಮಾಡಿದ ಹಲವರಿಗೆ ವಾಂತಿ-ಬೇಧಿ ಆಗಿದ್ದು, ಆಯಾಸದಿಂದ ಎಲ್ಲಂದರಲ್ಲಿ ಕುಸಿದು ಬಿದ್ದಿದ್ದಾರೆ. ಮಾಹಿತಿ ತಿಳಿದು ಗ್ರಾಮಕ್ಕೆ ಭೇಟಿ ನೀಡಿದ ಆಶಾ ಕಾರ್ಯಕರ್ತೆ ಮಂಜುಳ 108 ಅಂಬುಲೆನ್ಸ್ ಗಳಿಗೆ ಕರೆ ಮಾಡಿ ಕೂಡಲೇ ಅಸ್ವಸ್ಥರನ್ನು ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ದಾಖಲು ಮಾಡಿದ್ದಾರೆ.

ಮಕ್ಕಳು, ವಯಸ್ಕರು, ವೃದ್ಧರು ಸೇರಿದಂತೆ 50ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ನಾಮಕರಣ ಮಹೋತ್ಸವದಲ್ಲಿ ಬೆಳಗ್ಗೆ ಊಟ ಮಾಡಿದವರಿಗೆ ಯಾವುದೇ ತೊಂದರೆ ಆಗಿಲ್ಲವಂತೆ. ಕೆಲವರಿಗೆ ಸಣ್ಣ ಪ್ರಮಾಣದ ಹೊಟ್ಟೆ ನೋವು ಕಾಣಿಸಿಕೊಂಡಿತ್ತು ಸರಿ ಹೋಗಿದೆ ಅಂತ ನಾಮಕರಣ ಮಹೋತ್ಸವ ನಡೆಸಿರುವ ಕುಟುಂಬಸ್ಥರು ಆಶಾಕಾರ್ಯಕರ್ತೆಗೆ ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ. ಸಂಜೆ ಊಟ ಮಾಡಿದವರಿಗೆ ಮಾತ್ರ ಈ ರೀತಿ ಆಗಿದ್ದು, ಪುಡ್ ಪಾಯಿಸನ್ ಶಂಕೆ ವ್ಯಕ್ತವಾಗಿದೆ.

Comments

Leave a Reply

Your email address will not be published. Required fields are marked *