ಪ್ಲೀಸ್ ನನ್ನನ್ನು ಗಲ್ಲಿಗೇರಿಸಿ – ಲಿವ್ ಇನ್ ಪಾರ್ಟ್ನರ್ ಗರ್ಭಿಣಿಯನ್ನ ಕೊಂದು ಪೊಲೀಸರಿಗೆ ಶರಣು

– ಪೊಲೀಸ್ ಠಾಣೆಗೆ ಬಂದು ಪೆನ್, ಪೇಪರ್ ಕೇಳಿದ ಯುವಕ

ಮುಂಬೈ: 27 ವರ್ಷದ ಯುವಕನೊಬ್ಬ ತನ್ನ ಲಿವ್-ಇನ್ ಪಾರ್ಟ್ನರ್ ಗರ್ಭಿಣಿಯನ್ನು ಕೊಂದು ಪೊಲೀಸರಿಗೆ ಶರಣಾಗಿರುವ ಘಟನೆ ಮಹಾರಾಷ್ಟ್ರದ ಪುಣೆ ಜಿಲ್ಲೆಯಲ್ಲಿ ನಡೆದಿದೆ.

ಈ ಘಟನೆ ರಂಜನ್‍ಗಾಂವ್ ಪೊಲೀಸ್ ಠಾಣೆ ವ್ಯಾಪ್ತಿಯ ಕೊರೆಗಾಂವ್ ಗ್ರಾಮದಲ್ಲಿ ನಡೆದಿದೆ. ಮೃತ ಗರ್ಭಿಣಿಯನ್ನ ಸೋನಮಣಿ ಸೊರೆನ್ ಎಂದು ಗುರುತಿಸಲಾಗಿದೆ. ಆರೋಪಿ ಕಿರಣ್ ಫಂಡೆ ಲಿವ್ ಇನ್ ಸಂಗಾತಿಯನ್ನು ಕೊಂದು ಪೊಲೀಸರಿಗೆ ಶರಣಾಗಿದ್ದಾನೆ.

ಏನಿದು ಪ್ರಕರಣ?
ಮೃತ ಸೋನಮಣಿ ಮತ್ತು ಕಿರಣ್ ಕೆಲವು ತಿಂಗಳಿಂದ ಲಿವ್-ಇನ್ ರಿಲೀಷನ್‍ಶಿಪ್‍ನಲ್ಲಿದ್ದಾರೆ. ಇಬ್ಬರೂ ಬೇರೆ ಬೇರೆ ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದು, ಗ್ರಾಮದಲ್ಲಿ ಬಾಡಿಗೆ ಮನೆ ಮಾಡಿಕೊಂಡು ವಾಸ ಮಾಡುತ್ತಿದ್ದರು. ಶನಿವಾರ ಇಬ್ಬರ ನಡುವೆ ವಾಗ್ವಾದ ನಡೆದಿದೆ. ಈ ವೇಳೆ ಕೋಪಕೊಂಡ ಆರೋಪಿ ಗರ್ಭಿಣಿಯನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಸೊರೆನ್ ಗರ್ಭಿಣಿಯಾದ ನಂತರ ಇಬ್ಬರ ನಡುವಿನ ಜಗಳಕ್ಕೆ ಕಾರಣವಾಗಿದೆ ಎಂದು ಆರೋಪಿ ಪೊಲೀಸರಿಗೆ ತಿಳಿಸಿದ್ದಾನೆ. ಸೊರೆನ್‍ನನ್ನು ಕೊಲೆ ಮಾಡಿದ ನಂತರ ಆರೋಪಿ ಭಯಗೊಂಡು ರಂಜನ್‍ಗಾಂವ್ ಪೊಲೀಸ್ ಠಾಣೆಗೆ ಬಂದಿದ್ದಾನೆ. ನಂತರ ಪೊಲೀಸರ ಬಳಿ ತನಗೆ ಪೆನ್ ಮತ್ತು ಪೇಪರ್ ನೀಡುವಂತೆ ಕೇಳಿಕೊಂಡಿದ್ದಾನೆ. ಅದರಲ್ಲಿ “ನಾನು ಖಿನ್ನತೆಯಿಂದ ಬಳಲುತ್ತಿದ್ದೇನೆ ಮತ್ತು ಕೊಲೆ ಮಾಡಿದ್ದೇನೆ. ದಯವಿಟ್ಟು ನನ್ನನ್ನು ಗಲ್ಲಿಗೇರಿಸಿ” ಎಂದು ಬರೆದಿದ್ದಾನೆ.

ಪೊಲೀಸ್ ಅಧಿಕಾರಿಗೆ ಆ ಪೇಪರ್ ನೀಡಿದ್ದಾನೆ. ಜೊತೆಗೆ ತನ್ನ ಮನೆ ವಿಳಾಸ ಮತ್ತು ಕೀಲಿಯನ್ನು ಪೊಲೀಸರಿಗೆ ನೀಡಿದ್ದಾನೆ. ತಕ್ಷಣ ಪೊಲೀಸರ ತಂಡ ಆತ ನೀಡಿದ್ದ ವಿಳಾಸಕ್ಕೆ ಹೋಗಿ ನೋಡಿದ್ದಾರೆ. ಅಲ್ಲಿ ರೂಮಿನಲ್ಲಿ ಸೊರೆನ್ ಶವವಾಗಿ ಪತ್ತೆಯಾಗಿದ್ದಳು.

ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆಂದು ಆಸ್ಪತ್ರೆಗೆ ರವಾನಿಸಲಾಗಿದೆ. ಸದ್ಯಕ್ಕೆ ಆರೋಪಿಯನ್ನು ಬಂಧಿಸಿದ್ದು, ಆತನ ವಿರುದ್ಧ ಐಪಿಸಿ ಸೆಕ್ಷನ್ ಅಡಿಯಲ್ಲಿ ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಸಬ್ ಇನ್ಸ್‌ಪೆಕ್ಟರ್ ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *