ಪ್ರೇಮಿಗಳ ದಿನದಂದು ನಂದಿಹಿಲ್ಸ್ ನಲ್ಲಿ ಹೈ ಅಲರ್ಟ್

– ಸಾಮಾನ್ಯ ದಿನಗಳಿಗಿಂತಲೂ ಹೆಚ್ಚಿನ ಪೊಲೀಸರು

ಚಿಕ್ಕಬಳ್ಳಾಪುರ: ಪ್ರೇಮಿಗಳ ಪಾಲಿನ ಸ್ವರ್ಗಧಾಮ, ಪ್ರೇಮಧಾಮವಾಗಿರುವ ವಿಶ್ವವಿಖ್ಯಾತ ನಂದಿಗಿರಿಧಾಮ ಪ್ರೇಮಿಗಳನ್ನ ಬರ ಮಾಡಿಕೊಳ್ಳೊಕೆ ಕಾತುರದಿಂದ ಕಾಯ್ತಿದೆ. ಹೀಗಾಗಿ ವ್ಯಾಲೆಂಟೈನ್ಸ್ ಡೇ ಗಾಗಿ ಲವರ್ಸ್ ಲವ್ಲಿ ಹಿಲ್ಸ್ ನಂದಿ ಹಿಲ್ಸ್ ನಲ್ಲಿ ಸಜ್ಜಾಗುತ್ತಿದ್ದು ಪ್ರೇಮಿಗಳ ರಕ್ಷಣೆಗೆ ಎಂದು ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್ ಇಲಾಖೆ ಹೈ ಅಲರ್ಟ್ ಆಗಿದೆ.

 

ಪ್ರೇಮಿಗಳ ಪ್ರೇಮ ನಿವೇದನಗೆ ಲವ್ಲಿ ಪ್ಲೇಸ್ ಹಾಗೂ ಲವರ್ಸ್ ಹಾಟ್ ಫೇವರೆಟ್ ಸ್ಪಾಟ್ ನಂದಿಗಿರಿಧಾಮವಾಗಿದೆ. ವಿಶ್ವವಿಖ್ಯಾತ ನಂದಿಗಿರಿಧಾಮ ಪ್ರೇಮಿಗಳ ಪಾಲಿನ ಅಚ್ಚು ಮೆಚ್ಚಿನ ತಾಣಗಳಲ್ಲಿ ಒಂದಾಗಿದೆ. ಯುವಕ-ಯುವತಿಯರಿಗೆ ಅತ್ಯಾಕರ್ಷಿಣೀಯ ತಾಣವಾಗಿದೆ. ಇಂತಹ ಬ್ಯುಟಿಪುಲ್ ನಂದಿಬೆಟ್ಟದಲ್ಲಿ ವ್ಯಾಲೆಂಟೈನ್ಸ್ ಡೇ ದಿನದಂದು ತಮ್ಮ ಪ್ರೀತಿಯ ಗೆಳಯ ಗೆಳತಿ ಜೊತೆಗೆ ದಿನ ಕಳೆಯಬೇಕು ಅನ್ನೋದು ಹಲವರ ಕನಸು ಆಗಿರುತ್ತದೆ.

ನಂದಿಬೆಟ್ಟಕ್ಕೆ ಬರೋ ಪ್ರವಾಸಿಗರಲ್ಲಿ ಹದಿಹರೆಯದ ಯುವಕ-ಯುವತಿ ಪ್ರೇಮಿಗಳ ಪಾಲೇ ಹೆಚ್ಚು. ಹೀಗಾಗಿ ಈ ಬಾರಿಯ ವ್ಯಾಲೆಂಟೈನ್ಸ್ ಡೇ ಗೆ ನಂದಿಬೆಟ್ಟಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರೇಮಿಗಳ ಬರುವ ಸಾಧ್ಯತೆ ಹಿನ್ನೆಲೆ ಹೆಚ್ಚಿನ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡುವಂತೆ ನಂದಿಗಿರಿಧಾಮ ವಿಶೇಷಾಧಿಕಾರಿ ಗೋಪಾಲ್ ಪೊಲೀಸ್ ಇಲಾಖೆಗೆ ಮನವಿ ಮಾಡಿಕೊಂಡಿದ್ದಾರೆ.

ವಿಕೇಂಡ್ ದಿನಗಳಾದ ಶನಿವಾರ-ಭಾನುವಾರ ನಂದಿಬೆಟ್ಟ ಪ್ರವಾಸಿಗರಿಂದ ತುಂಬಿ ತುಳುಕತ್ತದೆ. ಟ್ರಾಫಿಕ್ ಜಾಮ್ ಉಂಟಾಗಿ ಬೆಟ್ಟವೇ ಹೌಸ್ ಪುಲ್ ಎಂಬಂತಾಗುತ್ತೆ. ಈ ಬಾರಿ ವ್ಯಾಲೆಂಟೈನ್ಸ್ ಡೇ ಸಹ ಭಾನುವಾರ ಬಂದಿರುವ ಕಾರಣ ನಂದಿಬೆಟ್ಟಕ್ಕೆ ನೀರಿಕ್ಷೆ ಮೀರಿ ಪ್ರವಾಸಿಗರು-ಪ್ರೇಮಿಗಳು ಬರುವ ಸಾಧ್ಯತೆ ಹೆಚ್ಚಾಗಿದೆ. ಇದರಿಂದ ಮುನ್ನೆಚ್ಚರಿಕೆಯಾಗಿ ಪೊಲೀಸ್ ಇಲಾಖೆ ಕೂಡ ಪ್ರವಾಸಿಗರ ಹಾಗೂ ಪ್ರೇಮಿಗಳ ರಕ್ಷಣೆಗೆ ಹೆಚ್ಚಿನ ಪೊಲೀಸರನ್ನ ನಿಯೋಜನೆ ಮಾಡಲು ನಿರ್ಧಾರ ಮಾಡಿದೆ.

ಬೆಟ್ಟದ ಮೂಲೆ ಮೂಲೆಯಲ್ಲೂ ಪೊಲೀಸರನ್ನ ನಿಯೋಜನೆ ಮಾಡುವ ಮೂಲಕ ಪ್ರೇಮಿಗಳಿಗೆ ಕೆಲ ಪುಂಡ ಪೋಕರಿಗಳ ಕಾಟ ತಪ್ಪಿಸಿ ಪ್ರೇಮಿಗಳಿಗೆ ರಕ್ಷಣೆ ನೀಡಲಿದೆ. ನಾಳೆ ನಂದಿಗಿರಿಧಾಮಕ್ಕೆ ಯಾವುದೇ ಭಯ ಅಳಕು ಅಂಜಿಕೆಯಿಲ್ಲದೆ ಪ್ರೇಮಿಗಳ ಬಂದು ಹೋಗಬಹುದಾಗಿದೆ.

ವಾಹನಗಳಲ್ಲಿ ಬರುವರು ಸಂಚಾರಿ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಪೊಲೀಸ್ ಇಲಾಖೆ ಹೇಳಿದೆ. ಇತ್ತ ನಂದಿಗಿರಿಧಾಮದ ಅಧಿಕಾರಿಗಳು ಸಹ ನಂದಿಬೆಟ್ಟಕ್ಕೆ ಬರೋ ಪ್ರೇಮಿಗಳು ಅಸಭ್ಯ ವರ್ತನೆ ತೋರದೆ ಸಭ್ಯರಾಗಿ ವರ್ತಿಸುವಂತೆ ಮನವಿ ಮಾಡಿಕೊಂಡಿದ್ದಾರೆ.

Comments

Leave a Reply

Your email address will not be published. Required fields are marked *