ಪ್ರೀತಿಸಿ ಮದ್ವೆಯಾದ 5 ದಿನಕ್ಕೆ ನವವಿವಾಹಿತೆ ನೇಣಿ ಶರಣು

– ಪತಿ ಸಂಬಂಧಿಕರ ಜೊತೆ ಮಾತಾಡ್ತಿದ್ದಂತೆ ಬಾಗಿಲು ಲಾಕ್
– ಪೋಷಕರ ಮನೆಗೆ ಊಟಕ್ಕೆ ಹೋಗಿದ್ದಾಗ ಸೂಸೈಡ್

ಹೈದರಾಬಾದ್: ಪ್ರೀತಿಸಿ ಮದುವೆಯಾದ ಐದನೇ ದಿನಕ್ಕೆ ನವವಿವಾಹಿತೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಆಂಧ್ರ ಪ್ರದೇಶದ ತಾರಾಪುರಂನಲ್ಲಿ ನಡೆದಿದೆ.

ತಾರಾಪುರಂನ ಮಾರುತಿ ನಗರ ನಿವಾಸಿ ದೇವಿ (20) ಆತ್ಮಹತ್ಯೆ ಮಾಡಿಕೊಂಡ ನವವಿವಾಹಿತೆ. ಮೃತ ದೇವಿ ತಮ್ಮ ಸಂಬಂಧಿಯಾದ ಸೆಲ್ವರಾಜ್‍ನನ್ನು ಪ್ರೀತಿಸುತ್ತಿದ್ದಳು. ನಂತರ ಎರಡು ಮನೆಯವರು ಇವರ ಪ್ರೀತಿಗೆ ಒಪ್ಪಿಗೆ ಸೂಚಿಸಿದ್ದರು. ಅದರಂತೆಯೇ ಗುರು-ಹಿರಿಯರ ಸಮ್ಮುಖದಲ್ಲಿ ಈ ಜೋಡಿ ಇದೇ ತಿಂಗಳ 8 ರಂದು ವಿವಾಹವಾದರು.

ಇತ್ತೀಚೆಗೆ ಈ ಜೋಡಿ ದೇವಿಯ ಪೋಷಕರ ಮನೆಗೆ ಊಟಕ್ಕೆ ಹೋಗಿದ್ದು, ಅಲ್ಲಿ ಸಂತೋಷದಿಂದ ಕಾಲಕಳೆದಿದ್ದಾರೆ. ಮರುದಿನ ಸೆಲ್ವರಾಜ್ ಮನೆಯ ಹೊರಗೆ ಸಂಬಂಧಿಕರೊಂದಿಗೆ ಮಾತನಾಡುತ್ತಿದ್ದನು. ಆದರೆ ಈ ಮಧ್ಯೆ ದೇವಿ ಮನೆಯೊಳಗೆ ಹೋಗಿ ಬಾಗಿಲು ಹಾಕಿಕೊಂಡಿದ್ದಾಳೆ.

ತುಂಬಾ ಸಮಯವಾದರೂ ದೇವಿ ಮನೆಯಿಂದ ಹೊರಗೆ ಬಾರದ ಕಾರಣ ಸಂಬಂಧಿಕರು ಅನುಮಾನದಿಂದ ಬಾಗಿಲು ಬಡಿದಿದ್ದಾರೆ. ಆದರೆ ದೇವಿ ಮಾತ್ರ ಬಾಗಿಲು ತೆರೆಯಲಿಲ್ಲ. ಕೊನೆಗೆ ಬಾಗಿಲು ಒಡೆದು ಒಳಗೆ ಹೋಗಿ ನೋಡಿದ್ದಾರೆ. ಆಗ ದೇವಿ ಮನೆಯಲ್ಲಿ ಸೀರೆಯಿಂದ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ತಕ್ಷಣ ಆಕೆಯನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಅಷ್ಟರಲ್ಲಿಯೇ ದೇವಿ ಮೃತಪಟ್ಟಿದ್ದಳು ಎಂದು ಆಕೆಯನ್ನು ಪರೀಕ್ಷಿಸಿದ ವೈದ್ಯರು ಹೇಳಿದ್ದಾರೆ.

ಮದುವೆಯಾದ ಐದು ದಿನಗಳ ನಂತರ ದೇವಿ ಆತ್ಮಹತ್ಯೆ ಮಾಡಿಕೊಂಡಿದ್ದರಿಂದ ಸೆಲ್ವರಾಜ್ ಮತ್ತು ದೇವಿಯ ಪೋಷಕರಿಗೆ ಆಘಾತವಾಗಿದೆ. ಮತ್ತೊಂದೆಡೆ ಪೊಲೀಸರು ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಸದ್ಯಕ್ಕೆ ದೇವಿಯ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಅಲ್ಲದೇ ದಂಪತಿಯ ನಡುವೆ ಜಗಳ ನಡೆದಿದೆಯೇ ಎಂದು ಪೊಲೀಸರು ಸೆಲ್ವರಾಜ್‍ನನ್ನು ವಿಚಾರಣೆ ಮಾಡುತ್ತಿದ್ದಾರೆ.

Comments

Leave a Reply

Your email address will not be published. Required fields are marked *