ಪ್ರೀತಿಯ ಮಳೆ ಸುರಿಸಿದ ನಿಮಗೆ ಒಳ್ಳೆಯದಾಗಲಿ – ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ ಅಲ್ಲು ಅರ್ಜುನ್

ಹೈದರಾಬಾದ್: ಟಾಲಿವುಡ್ ನಟ ಸ್ಟೈಲಿಷ್ ಸ್ಟಾರ್ ಅಲ್ಲು ಅರ್ಜುನ್ ಚಿತ್ರರಂಗಕ್ಕೆ ಪ್ರವೇಶಿ ಇಂದಿಗೆ 18 ವರ್ಷ ಪೂರ್ಣಗೊಂಡಿದೆ. ಈ ಹಿನ್ನೆಲೆ ಅಲ್ಲು ಅರ್ಜುನ್ ಟ್ವೀಟ್ ಮಾಡುವ ಮೂಲಕ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದಾರೆ.

2003ರಲ್ಲಿ ಗಂಗೋತ್ರಿ ಸಿನಿಮಾದ ಮೂಲಕ ತೆಲುಗು ಚಿತ್ರರಂಗಕ್ಕೆ ಪ್ರವೇಶಿಸಿದ ಹಲವಾರು ಹಿಟ್ ಸಿನಿಮಾಗಳನ್ನು ನೀಡುವ ಮೂಲಕ ಅಭಿಮಾನಿಗಳಗೆ ಮನರಂಜನೆ ನೀಡಿದ್ದಾರೆ. ಈ ಕುರಿತಂತೆ ಅಲ್ಲು ಅರ್ಜುನ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಭಾವನಾತ್ಮಕವಾಗಿ ಟ್ವೀಟ್ ಮಾಡಿದ್ದಾರೆ.

ಇಷ್ಟು ವರ್ಷ ಅಭಿಮಾನಿಗಳು ನೀಡಿದ ಪ್ರೀತಿ ಹಾಗೂ ಬೆಂಬಲಕ್ಕೆ ನಾನು ಧನ್ಯವಾದ ತಿಳಿಸುತ್ತೇನೆ. ಇಂದಿಗೆ ನನ್ನ ಮೊದಲ ಸಿನಿಮಾ ಗಂಗೋತ್ರಿ ಬಿಡುಗಡೆಯಾಗಿ 18 ವರ್ಷ ಕಳೆದಿದೆ. ನನ್ನ ಈ ಸಿನಿ ಜರ್ನಿಯಲ್ಲಿ ಭಾಗಿಯಾಗಿದ್ದ ಪ್ರತಿಯೊಬ್ಬರಿಗೂ ನಾನು ಧನ್ಯವಾದ ಹೇಳಲು ಬಯಸುತ್ತೇನೆ. ನನ್ನ ಹೃದಯವು ಕೃತಜ್ಞತೆಗಳಿಂದ ತುಂಬಿದೆ. ಇಷ್ಟು ವರ್ಷ ನನಗೆ ಪ್ರೀತಿಯ ಮಳೆ ಸುರಿಸಿದ ಎಲ್ಲರಿಗೂ ನಿಜವಾಗಿಯೂ ಒಳ್ಳೆಯದಾಗಲಿ ಎಂದು ಬಯಸುತ್ತೇನೆ. ನಿಮ್ಮೆಲ್ಲರ ಆಶೀರ್ವಾದಗಳಿಗೆ ಧನ್ಯವಾದ ಎಂದು ಕ್ಯಾಪ್ಷನ್ ಹಾಕಿಕೊಂಡಿದ್ದಾರೆ.

ಗಂಗೋತ್ರಿ ಸಿನಿಮಾದ ಬಳಿಕ, 2004ರಲ್ಲಿ ನಿರ್ದೇಶಕ ಸುಕುಮಾರನ್ ಆ್ಯಕ್ಷನ್ ಕಟ್ ಹೇಳಿದ್ದ ಆರ್ಯ ಸಿನಿಮಾದಲ್ಲಿ ಅಭಿನಯಿಸಿದ್ದರು. 2005ರಲ್ಲಿ ಬನ್ನಿ, 2006ರಲ್ಲಿ ಹ್ಯಾಪಿ, 2007ರಲ್ಲಿ ದೇಸಮದುರು ಸಿನಿಮಾದಲ್ಲಿ ಅಭಿನಯಿಸಿದರು. ಇತ್ತೀಚೆಗೆ ಅಲಾ ವೈಕುಂಠಪುರಂಲೋ ಸಿನಿಮಾದಲ್ಲಿ ನಟಿಸಿ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದಿದ್ದರು. ಇನ್ನೂ ಈ ಸಿನಿಮಾದಲ್ಲಿ ಅಲ್ಲು ಅರ್ಜುನ್‍ಗೆ ಜೋಡಿಯಾಗಿ ಪೂಜಾ ಹೆಗ್ಡೆ ಡ್ಯೂಯೆಟ್ ಹಾಡಿದ್ದರು. ಸಿನಿಮಾಕ್ಕೆ ತ್ರಿವಿಕ್ರಮ್ ಶ್ರೀನಿವಾಸ್ ಆ್ಯಕ್ಷನ್ ಕಟ್ ಹೇಳಿದ್ದರು.

ಸದ್ಯ ಅಲ್ಲು ಅರ್ಜುನ್ ಪುಷ್ಪ ಸಿನಿಮಾದಲ್ಲಿ ಬ್ಯುಸಿಯಾಗಿದ್ದು, ಈ ಸಿನಿಮಾದಲ್ಲಿ ಸ್ಟೈಲಿಷ್ ಸ್ಟಾರ್‍ಗೆ ಜೊತೆಯಾಗಿ ಕನ್ನಡದ ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ನಟಿಸಿದ್ದಾರೆ. ನಿರ್ದೇಶಕ ಸುಕುಮಾರನ್ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದು, ದೇವಿ ಶ್ರೀ ಪ್ರಸಾದ್ ಸಂಗೀತಾ ಸಂಯೋಜಿಸಿದ್ದಾರೆ. ಈ ಸಿನಿಮಾ 5 ಭಾಷೆಗಳಲ್ಲಿ ಬಿಡುಗಡೆಗೊಳ್ಳಲಿದೆ.

Comments

Leave a Reply

Your email address will not be published. Required fields are marked *