ಪ್ರೀತಿಯ ನಾಟಕವಾಡಿ ಸಾವಿಗೆ ಕಾರಣನಾದ ಯುವಕ ಬಂಧನ

ಹಾಸನ: ಅಪ್ರಾಪ್ತೆಯ ಜೊತೆ ಪ್ರೀತಿ ನಾಟಕವಾಡಿ ಆಕೆಯ ಸಾವಿಗೆ ಕಾರಣನಾಗಿದ್ದ ಯುವಕನನ್ನು ಹಾಸನ ಪೊಲೀಸರು ಬಂಧಿಸಿದ್ದಾರೆ.

ಯೋಗೇಶ್ (23) ಬಂಧಿತ ಆರೋಪಿಯಾಗಿದ್ದಾನೆ. ಪ್ರೀತಿಯ ಮೋಸದ ಬಲೆಗೆ ಸಿಲುಕಿ ಪ್ರಾಣ ಕಳೆದುಕೊಂಡ ಅಪ್ರಾಪ್ತೆ 16 ವರ್ಷದವಳಾಗಿದ್ದಾಳೆ. ಈಕೆ ಹಾಸನ ಜಿಲ್ಲೆ ಹೊಳೆನರಸೀಪುರ ತಾಲ್ಲೂಕಿನವಳಾಗಿದ್ದಾಳೆ.

ಯೋಗೇಶ್ ಪ್ರೀತಿಸುವುದಾಗಿ ನಂಬಿಸಿದ್ದನು. ಆತ ಮಾಡಿದ ಒಂದೇ ಒಂದು ಫೋನ್ ಕರೆಗೆ ಬಾಲಕಿ ಜನವರಿ 26 ರಂದು ರಾತ್ರಿ ಮನೆಬಿಟ್ಟು ಹೋಗಿದ್ದಳು. ಆದರೆ ಆಕೆಯ ಮೃತದೇಹ ಜನವರಿ 26 ರಂದು ಕೆರೆಯಲ್ಲಿ ಪತ್ತೆಯಾಗಿದ್ದು, ಪೋಷಕರು ಅತ್ಯಾಚಾರ ಮಾಡಿ ಕೊಲೆ ಮಾಡಿರುವುದಾಗಿ ಆರೋಪ ಮಾಡಿದ್ದರು. ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದರು.

ಇದೀಗ ಆರೋಪಿ ಯೋಗೇಶ್ ಪೊಲೀಸರ ಅತಿಥಿಯಾಗಿದ್ದಾನೆ. ಬಾಲಕಿಯನ್ನು ತಡರಾತ್ರಿ ಕರೆಸಿಕೊಂಡಿದ್ದ ಯೋಗೇಶ್ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಬಾಲಕಿ ನೀನು ಮದುವೆಯಾಗದ ಹೊರತು ನಾನು ಮನೆಗೆ ಹೋಗುವುದಿಲ್ಲ ಎಂದು ಪಟ್ಟು ಹಿಡಿದಿದ್ದಾಳೆ. ಆದರೆ ಇದಕ್ಕೆ ಒಪ್ಪದ ಯೋಗೇಶ್ ಬಾಲಕಿಯನ್ನು ಆಕೆಯ ಗೆಳತಿ ಮನೆ ಬಳಿ ಬಿಟ್ಟು ಹೋಗಿದ್ದ. ಈ ವಿಚಾರವಾಗಿ ಮನನೊಂದ ಬಾಲಕಿ ಕೆರೆಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಳು.

ಇದೀಗ ಆರೋಪಿ ಯೋಗೇಶ್‍ನನ್ನ ಪೋಕ್ಸೋ ಕಾಯ್ದೆಯಡಿ ಬಂಧಿಸಲಾಗಿದೆ. ಯುವಕನ ಮಾತಿಗೆ ಮರುಳಾದ ಬಾಲಕಿ ಅನ್ಯಾಯವಾಗಿ ಪ್ರಾಣ ಕಳೆದುಕೊಂಡಿದ್ದಾಳೆ. ಘಟನೆ ಸಂಬಂಧ ಹೊಳೆನರಸೀಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments

Leave a Reply

Your email address will not be published. Required fields are marked *