ಪ್ರಾಣಿಗಳೊಂದಿಗೆ ಹೇಡಿತನದ ಕೃತ್ಯಕ್ಕೆ ಅಂತ್ಯ ಹಾಡೋಣ- ವಿರಾಟ್ ಕರೆ

ಮುಂಬೈ: ಪೈನಾಪಲ್‍ನಲ್ಲಿ ಪಟಾಕಿ ಇಟ್ಟು 15 ವರ್ಷದ ಗರ್ಭಿಣಿ ಆನೆಯನ್ನು ಕೊಲೆಗೈದ ಹೀನ ಕೃತ್ಯವನ್ನು ಕ್ರೀಡಾಪಟುಗಳು ಖಂಡಿಸಿ, ಅಸಮಾಧಾನ ಹೊರಹಾಕಿದ್ದಾರೆ. ಪ್ರಾಣಿಗಳನ್ನು ಪ್ರೀತಿಯಿಂದ ನೋಡಿಕೊಳ್ಳಬೇಕೆಂದು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಜನರಿಗೆ ಮನವಿ ಮಾಡಿಕೊಂಡಿದ್ದಾರೆ.

ಆನೆ ಹಾಗೂ ಅದರ ಗರ್ಭದಲ್ಲಿ ಮರಿಯಾನೆ ಇರುವ ಕಾರ್ಟೂನ್ ಫೋಟೋವನ್ನು ಟ್ವೀಟ್ ಮಾಡಿರುವ ವಿರಾಟ್ ಕೊಹ್ಲಿ, “ಕೇರಳದ ಘಟನೆಯ ಬಗ್ಗೆ ಕೇಳಿ ತುಂಬಾ ಆಘಾತವಾಯಿತು. ಪ್ರಾಣಿಗಳನ್ನು ಪ್ರೀತಿಯಿಂದ ಕಾಣಬೇಕು, ಅವುಗಳ ಬಗ್ಗೆ ಕಾಳಜಿ ವಹಿಸಬೇಕು ಎಂದು ಮನವಿ ಮಾಡುತ್ತೇನೆ. ಇಂತಹ ಹೇಡಿತನ ಕೃತ್ಯಗಳಿಗೆ ಅಂತ್ಯ ಹಾಡೋಣ” ಎಂದು ಕರೆ ನೀಡಿದ್ದಾರೆ.

ಟೀಂ ಇಂಡಿಯಾ ಸ್ಪಿನ್ನರ್ ಹರ್ಭಜನ್ ಸಿಂಗ್, “ಪೈನಾಪಲ್‍ನಲ್ಲಿ ಪಟಾಕಿ ತುಂಬಿ ಗರ್ಭಿಣಿ ಆನೆಯನ್ನು ಕೊಂದವರಿಗೆ ಶಿಕ್ಷೆಯಾಗಬೇಕು. ಮುಗ್ಧ ಆನೆ ಮೇಲೆ ಇಂತಹ ಕ್ರೌರ್ಯ ಎಸೆಗಿದ್ದು ಎಷ್ಟು ಸರಿ” ಎಂದು ಪ್ರಶ್ನಿಸಿದ್ದಾರೆ. ಭಾರತೀಯ ಮಹಿಳಾ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಟ್ವಿಟ್ ಮಾಡಿ, ಇದು ತುಂಬಾ ದುಃಖಕರ ಘಟನೆ ಎಂದು ಹೇಳಿದ್ದಾರೆ.

ಭಾರತೀಯ ಫುಟ್ಬಾಲ್ ತಂಡದ ನಾಯಕ ಸುನಿಲ್ ಛೆಟ್ರಿ, “ಅವಳು ಮುಗ್ಧ ಗರ್ಭಿಣಿ ಆನೆ. ರಾಕ್ಷಸರೇ ನೀವು ಶಿಕ್ಷೆ ಅನುಭವಿಸುತ್ತೀರಾ ಎಂದು ಭಾವಿಸುತ್ತೇನೆ. ನಾವು ಪ್ರಕೃತಿಯನ್ನು ಮತ್ತೆ ಮತ್ತೆ ವಿಫಲಗೊಳಿಸುತ್ತಲೇ ಇರುತ್ತೇವೆ. ಹಾಗಾಗಿ ನಾವು ಹೆಚ್ಚು ವಿಕಸನಗೊಂಡಿರುವ ಪ್ರಭೇದ ಎನ್ನುವುದನ್ನು ನನಗೆ ತಿಳಿಸಿಕೊಡಿ” ಎಂದು ಟ್ವಿಟ್ ಮಾಡಿದ್ದಾರೆ.

ಏನಿದು ಪ್ರಕರಣ?:
ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿ ಸ್ಥಳೀಯರು ಬುಧವಾರ ಪಟಾಕಿ ತುಂಬಿದ ಪೈನಾಪಲ್ ಹಣ್ಣನ್ನು ಗರ್ಭಿಣಿ ಆನೆಗೆ ತಿನ್ನಿಸಿದ್ದರು. ನಂತರ ಆನೆಯ ಬಾಯಿಯಲ್ಲಿ ಪಟಾಕಿ ಬ್ಲಾಸ್ಟ್ ಆಗಿ ಗಂಭೀರವಾಗಿ ಗಾಯಗೊಂಡಿತ್ತು. ಗರ್ಭಿಣಿ ಆನೆ ಯಾವೊಬ್ಬ ಗ್ರಾಮಸ್ಥರಿಗೂ ತೊಂದರೆ ನೀಡಿರಲಿಲ್ಲ. ಬಾಯಿಯಲ್ಲಿ ಪಟಾಕಿ ಸಿಡಿಯುತ್ತಿದ್ದಂತೆ ನೋವಿನಲ್ಲಿ ರಸ್ತೆ ತುಂಬಾ ಓಡಾಡಿತ್ತು. ಬಳಿಕ ವೆಲ್ಲಿಯಾರ್ ನದಿಯಲ್ಲಿ ಮುಳುಗಿತ್ತು. ಈ ಸುದ್ದಿ ತಿಳಿಯುತ್ತಿದ್ದಂತೆ ಆನೆಯನ್ನು ಮೇಲೆತ್ತಲು ಅರಣ್ಯ ಇಲಾಖೆ ಅಧಿಕಾರಿಗಳು ನೀಲಕಂಠನ್ ಹಾಗೂ ಸುರೇಂದ್ರನ್ ಎಂಬ ಎರಡು ಆನೆಗಳನ್ನು ಕರೆ ತಂದಿದ್ದು, ಅಷ್ಟೊತ್ತಿಗಾಗಲೇ ಸಂಜೆ 4ರ ಸುಮಾರಿಗೆ ಆನೆ ನದಿಯಲ್ಲೇ ಸಾವನ್ನಪ್ಪಿತ್ತು.

ಮಲಪ್ಪುರಂ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುವ ಅರಣ್ಯಾಧಿಕಾರಿಯೊಬ್ಬರು ಆನೆ ನೋವಿನ ದೃಶ್ಯವನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಅಪ್‍ಲೋಡ್ ಮಾಡಿದ್ದರು.

Comments

Leave a Reply

Your email address will not be published. Required fields are marked *