ಪ್ರವಾಸಿಗರಿಗೆ ಕಾಫಿನಾಡು ಮುಕ್ತ- ಷರತ್ತು ಬದ್ಧ ಅನುಮತಿ

ಚಿಕ್ಕಮಗಳೂರು: ಕೊರೊನಾ ಹರಡುವಿಕೆ ಹಿನ್ನೆಲೆ ಜಿಲ್ಲೆಯ ಎಲ್ಲ ಪ್ರವಾಸಿ ತಾಣಗಳಿಗೆ ಜಿಲ್ಲಾಡಳಿತ ನಿಷೇಧ ಹೇರಿತ್ತು. ಇದೀಗ ಪ್ರವಾಸಿಸಗರಿಗೆ ಷರತ್ತು ಬದ್ಧ ಅನುಮತಿ ನೀಡಿ, ಜಿಲ್ಲಾಡಳಿತ ನಿರ್ಬಂಧವನ್ನು ತೆರವುಗೊಳಿಸಿದೆ.

ಪ್ರವಾಸಿಗರು ಕಾರು, ಬೈಕ್, ಜೀಪ್‍ನಲ್ಲಿ ಜಿಲ್ಲೆಯ ಪ್ರವಾಸಿ ತಾಣಗಳಿಗೆ ಭೇಟಿ ನೀಡಬಹುದಾಗಿದ್ದು, ದೊಡ್ಡ ವಾಹನಗಳು, ಖಾಸಗಿ ಬಸ್‍ಗಳಲ್ಲಿ ಬರುವುದನ್ನು ನಿರ್ಬಂಧಿಸಲಾಗಿದೆ. ಜಿಲ್ಲೆಯ ಪ್ರವಾಸಿ ತಾಣಗಳಿಗೆ ಬರುವ ಪ್ರವಾಸಿಗರು ಕಡ್ಡಾಯವಾಗಿ ಮುಖಕ್ಕೆ ಮಾಸ್ಕ್ ಧರಿಸಬೇಕು. ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಪ್ರವಾಸಿ ತಾಣಗಳಲ್ಲಿ ಗುಂಪಾಗಿ ಸೇರುವಂತಿಲ್ಲ. ಹೆಚ್ಚಿನ ಅಂತರ ಕಾಯ್ದುಕೊಳ್ಳುವಂತೆ ಜಿಲ್ಲಾಡಳಿತ ಸೂಚಿಸಿದೆ.

ಪ್ರವಾಸಿ ತಾಣಗಳಲ್ಲಿ ಬಳಸಿದ ಯಾವುದೇ ರೀತಿಯ ವಸ್ತುಗಳನ್ನು ಎಲ್ಲೆಂದರಲ್ಲಿ ಬಿಸಾಡುವುದನ್ನು ಸಂಪೂರ್ಣವಾಗಿ ನಿಷೇಧಿಸಿದೆ. ಜಿಲ್ಲೆಯ ಹೋಮ್ ಸ್ಟೇ, ರೆಸಾರ್ಟ್, ಹೊಟೇಲ್ ಮಾಲೀಕರಿಗೂ ಜಿಲ್ಲಾಡಳಿತ ಸೂಚನೆ ನೀಡಿದ್ದು, ಸೂಕ್ತ ಕ್ರಮ ಕೈಗೊಳ್ಳುವಂತೆ ಆದೇಶಿಸಿದೆ. ಪ್ರವಾಸಿಗರು ಗುಂಪಾಗಿ ಸೇರಲು ಅವಕಾಶ ನೀಡಬಾರದು. ಪ್ರತಿ ಪ್ರವಾಸಿಗರಿಗೂ ಸ್ಕ್ರೀನಿಂಗ್, ಸ್ಯಾನಿಟೈಸರ್ ಬಳಸುವುದನ್ನು ಕಡ್ಡಾಯಗೊಳಿಸಿದೆ. ಪ್ರವಾಸಿಗರು ತಂಗುವ ಕೊಠಡಿಯನ್ನು ಆಗಾಗ ಸ್ಯಾನಿಟೈಸ್ ಮಾಡುವಂತೆ ಆದೇಶಿಸಿದೆ. ಸಿಬ್ಬಂದಿಗಾಗಲಿ ಅಥವಾ ಪ್ರವಾಸಿಗರಿಗಾಗಲಿ ಕೊರೋನಾ ಗುಣಲಕ್ಷಣ ಇದೆಯಾ ಎಂದು ಖಚಿತಪಡಿಸಿಕೊಳ್ಳಬೇಕು. ಲಕ್ಷಣಗಳು ಕಂಡುಬಂದರೆ ಕೂಡಲೇ ವೈದ್ಯಕೀಯ ಸಿಬ್ಬಂದಿಗೆ ತಿಳಿಸಬೇಕೆಂದು ಸೂಚಿಸಿದೆ.

ಲಾಕ್‍ಡೌನ್ ಸಡಿಲಗೊಂಡ ಬಳಿಕ ಕಳೆದ ಒಂದೂವರೆ ತಿಂಗಳಿನಿಂದ ಜಿಲ್ಲೆಯ ಪ್ರವಾಸಿ ತಾಣಗಳಿಗೆ ಬರುತ್ತಿದ್ದ ಪ್ರವಾಸಿಗರ ಸಂಖ್ಯೆ ಹೇರಳವಾಗಿತ್ತು. ಈ ಹಿನ್ನೆಲೆ ಜಿಲ್ಲೆಯ ಜನ ಪ್ರವಾಸಿಗರಿಗೆ ನಿರ್ಬಂಧ ಹೇರುವಂತೆ ಮನವಿ ಮಾಡಿದ್ದರು. ಕೊರೊನಾ ನಿಯಂತ್ರಿಸುವ ಸಲುವಾಗಿ ಜಿಲ್ಲಾಡಳಿತ ಕಳೆದ ಒಂದೂವರೆ ತಿಂಗಳಿಂದ ಜಿಲ್ಲೆಯ ಎಲ್ಲ ಪ್ರವಾಸಿ ತಾಣಗಳಿಗೆ ನಿರ್ಬಂಧ ಹೇರಿತ್ತು. ಇಂದು ನಿರ್ಬಂಧವನ್ನು ತೆರವುಗೊಳಿಸಿ, ಷರತ್ತು ಬದ್ಧ ಅನುಮತಿ ನಿಡಿದೆ.

Comments

Leave a Reply

Your email address will not be published. Required fields are marked *