ಪ್ರಭಾಸ್ ಸಿನಿಮಾದಲ್ಲಿ ಬಿಗ್ ಬಿ, ದೀಪಿಕಾ- ಟಾಲಿವುಡ್‍ನಲ್ಲಿ ಮತ್ತೊಂದು ಬಿಗ್ ಫಿಲ್ಮ್

ಹೈದರಾಬಾದ್: ಲಾಕ್‍ಡೌನ್ ಬಳಿಕ ಟಾಲಿವುಡ್ ಯಂಗ್ ರೆಬೆಲ್ ಸ್ಟಾರ್ ಪ್ರಭಾಸ್ ಮತ್ತೆ ಶೂಟಿಂಗ್‍ನಲ್ಲಿ ತೊಡಗಿದ್ದಾರೆ. ಈ ಬೆನ್ನಲ್ಲೇ ಇದೀಗ ಅವರಿಗೆ ಹಲವು ಆಫರ್‍ಗಳು ಬರುತ್ತಿದ್ದು, ಈಗಾಗಲೇ ಕೆಲ ಸಿನಿಮಾಗಳು ಅವರ ಕೈಯಲ್ಲಿವೆ. ಇದೀಗ ಮತ್ತೊಂದು ಸಿನಿಮಾ ಅವರನ್ನು ಅರಸಿ ಬಂದಿದ್ದು, ಇನ್ನೂ ವಿಶೇಷ ಎಂಬಂತೆ ಈ ಚಿತ್ರದಲ್ಲಿ ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಸಹ ಕಾಣಿಸಿಕೊಳ್ಳುತ್ತಿದ್ದಾರೆ.

ಬಾಹುಬಲಿ ಖ್ಯಾತಿಯ ನಟ ಪ್ರಭಾಸ್ ಅವರ ಮುಂದಿನ ಸಿನಿಮಾ ಕುರಿತು ಇದೀಗ ಸಾಕಷ್ಟು ಚರ್ಚೆ ನಡೆಯುತ್ತಿದ್ದು, ಡಾರ್ಲಿಂಗ್ ಈಗಾಗಲೇ ರಾಧೆ ಶಾಮ್ ಹಾಗೂ ಆದಿಪುರುಷ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇದೇ ವೇಳೆ ಮತ್ತೊಂದು ಸರ್ಪ್ರೈಸ್ ಹೊರ ಬಿದ್ದಿದ್ದು, ಪ್ರಭಾಸ್ ಮುಂದಿನ ಸಿನಿಮಾದಲ್ಲಿ ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ನಟಿಸುತ್ತಿದ್ದಾರೆ. ಈ ಸಂತಸದ ಸುದ್ದಿಯನ್ನು ಸ್ವತಃ ಪ್ರಭಾಸ್ ಹಾಗೂ ಅಮಿತಾಬ್ ಬಚ್ಚನ್ ಸಹ ಸಾಮಾಜಿಕ ಜಾಲತಾಣಗಳ ಮೂಲಕ ಖಚಿತಪಡಿಸಿದ್ದಾರೆ.

ಪ್ರಭಾಸ್ ಅಭಿನಯದ ‘ಬಾಹುಬಲಿ’ ಸಿನಿಮಾ ಮೂಲಕ ವಿದೇಶದಲ್ಲೂ ಸದ್ದು ಮಾಡಿದ್ದು ತಿಳಿದೇ ಇದೆ. ಇದಾದ ಬಳಿಕ ‘ಸಾಹೋ’ ಸಿನಿಮಾ ಮೂಲಕ ಅಬ್ಬರಿಸಿದ್ದರು. ನಂತರ ಲಾಕ್‍ಡೌನ್ ವೇಳೆ ‘ರಾಧೆ ಶ್ಯಾಮ್’ ಸಿನಿಮಾ ಪೋಸ್ಟರ್ ರಿಲೀಸ್ ಮಾಡಿದ್ದರು. ಅಲ್ಲದೆ ಇತ್ತೀಚೆಗೆ ‘ಆದಿಪುರುಷ’ ಸಿನಿಮಾ ಪೋಸ್ಟರ್ ಬಿಡುಗಡೆ ಮಾಡಿ ಮತ್ತೊಂದು ಸಿನಿಮಾದ ಘೋಷಣೆ ಮಾಡಿದ್ದರು. ಇದೀಗ ಇನ್ನೊಂದು ಸಿನಿಮಾ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ. ಇನ್ನೂ ವಿಶೇಷ ಎಂಬಂತೆ ಇದರಲ್ಲಿ ಅಮಿತಾಬ್ ಬಚ್ಚನ್ ನಟಿಸುತ್ತಿದ್ದಾರೆ. ಈ ಕುರಿತು ಚಿಕ್ಕ ವಿಡಿಯೋ ಬಿಡುಗಡೆ ಮಾಡುವ ಮೂಲಕ ಖಚಿತಪಡಿಸಲಾಗಿದೆ.

ಈ ವಿಡಿಯೋದಲ್ಲಿ ಲೆಜೆಂಡ್ ಇಲ್ಲದೆ ಲೆಂಜೆಡರಿ ಸಿನಿಮಾ ಮಾಡಲು ಹೇಗೆ ಸಾಧ್ಯ ಎಂದು ಬಿಗ್ ಬಿಯ ಹಳೆಯ ಸಿನಿಮಾಗಳ ಫೋಟೋಗಳನ್ನು ತೋರಿಸುವ ಮೂಲಕ ಪರಿಚಯಿಸಿದ್ದಾರೆ. ಅಂದಹಾಗೆ ಈ ಸಿನಿಮಾವನ್ನು ನಾಗ್ ಅಶ್ವಿನ್ ನಿರ್ದೇಶಿಸುತ್ತಿದ್ದು, ವೈಜಯಂತಿ ಮೂವೀಸ್ ಸಂಸ್ಥೆ ನಿರ್ಮಿಸುತ್ತಿದೆ. ವೈಜಯಂತಿ ಮೂವೀಸ್‍ನ 50ನೇ ಚಿತ್ರ ಇದಾಗಿದ್ದು, ಹೀಗಾಗಿ ಬಿಗ್ ಬಜೆಟ್‍ನಲ್ಲಿ ಭರ್ಜರಿಯಾಗಿಯೇ ಸಿನಿಮಾ ಮಾಡಲಾಗುತ್ತಿದೆ.

ಇನ್ನೂ ವಿಶೇಷ ಎಂಬಂತೆ ಪ್ರಭಾಸ್ ಜೊತೆ ಬಾಲಿವುಡ್ ಬ್ಯೂಟಿ ದೀಪಿಕಾ ಪಡುಕೋಣೆ ರೊಮ್ಯಾನ್ಸ್ ಮಾಡಲಿದ್ದಾರೆ. ಈ ಮೂಲಕ ಸಿನಿಮಾಗೆ ಇಬ್ಬರು ಬಾಲಿವುಡ್ ಸೆಲೆಬ್ರೆಟಿಗಳು ಬಂದಂತಾಗಿದೆ. ಹೀಗಾಗಿ ಸಿನಿಮಾ ಕುರಿತ ಕುತೂಹಲ ಹೆಚ್ಚಿದೆ.

ಸಿನಿಮಾ ಪೌರಾಣಿಕ ಥ್ರಿಲ್ಲರ್ ಕಥೆ ಹೊಂದಿದ್ದು, ಅಮಿತಾಬ್ ಬಚ್ಚನ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಾಗಿದೆ. ಬಿಗ್ ಬಿ ತೆಲುಗು ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ಮನಂ ಹಾಗೂ ಸೈರಾ ನರಸಿಂಹ ರೆಡ್ಡಿ ಚಿತ್ರಗಳಲ್ಲಿ ಸಹ ತೆರೆ ಹಂಚಿಕೊಂಡಿದ್ದಾರೆ. ಇದೀಗ ಪ್ರಭಾಸ್ ಜೊತೆ ನಟಿಸುತ್ತಿದ್ದಾರೆ. ಚಿತ್ರ ಯಾವ ರೀತಿಯ ಕಥೆ ಹೊಂದಿದೆ, ಅಮಿತಾಬ್ ಬಚ್ಚನ್ ಯಾವ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬುದು ಅಭಿಮಾನಿಗಳ ಕುತೂಹಲವಾಗಿದೆ.

Comments

Leave a Reply

Your email address will not be published. Required fields are marked *