ಪ್ರಭಾಸ್ ಜೊತೆ ಪ್ರಶಾಂತ್ ನೀಲ್ ಸಿನಿಮಾ- ಟ್ವಿಟ್ಟರ್‌ನಲ್ಲಿ ಟ್ರೆಂಡ್

ಬೆಂಗಳೂರು: ಕೆಜಿಎಫ್ ಸಿನಿಮಾ ಮೂಲಕ ದೇಶ, ವಿದೇಶಗಳಲ್ಲಿ ಜನಪ್ರಿಯತೆ ಗಳಿಸಿರುವ ನಿರ್ದೇಶಕ ಪ್ರಶಾಂತ್ ನೀಲ್, ಕೆಜಿಎಫ್-2 ಬಳಿಕ ಯಾವ ಪ್ರಾಜೆಕ್ಟ್ ನಲ್ಲಿ ತೊಡಗಿಕೊಳ್ಳುತ್ತಾರೆ ಎಂಬುದು ಅಭಿಮಾನಿಗಳ ಪ್ರಶ್ನೆಯಾಗಿದೆ. ಈ ಕುರಿತು ಇದೀಗ ಸುಳಿವು ಸಿಕ್ಕಿದ್ದು, ಬಾಹುಬಲಿ ಖ್ಯಾತಿಯ ಪ್ರಭಾಸ್ ಜೊತೆ ಬಿಗ್ ಸಿನಿಮಾ ಮಾಡಲಿದ್ದಾರೆ ಎಂಬ ಸುದ್ದಿ ವೈರಲ್ ಆಗಿದೆ. ಮಾತ್ರವಲ್ಲ ಟ್ವಿಟ್ಟರ್ ನಲ್ಲಿ ಟ್ರೆಂಡ್ ಸೃಷ್ಟಿಸಲಾಗಿದೆ.

ಯಶ್ ಅಭಿನಯದ ಕೆಜಿಎಫ್ ಅಭೂತಪೂರ್ವ ಗೆಲುವಿನ ಬಳಿಕ ಪ್ರಶಾಂತ್ ನೀಲ್ ಅವರು ಮತ್ತೊಂದು ಸೀಕ್ವೆಲ್ ಮಾಡುತ್ತಿದ್ದು, ಕೆಜಿಎಫ್-2 ಸಹ ಭಾರೀ ನಿರೀಕ್ಷೆ ಹುಟ್ಟಿಸಿದೆ. ಈಗಾಗಲೇ ಚಿತ್ರೀಕರಣ ಅಂತಿಮ ಹಂತ ತಲುಪಿದ್ದು, ಇನ್ನೇನು ಬಿಡುಗಡೆಗೆ ತಯಾರಾಗುತ್ತಿದೆ. ಇದೇ ಸಂದರ್ಭದಲ್ಲಿ ಅಭಿಮಾನಿಗಳು ನಿರ್ದೇಶಕ ಪ್ರಶಾಂತ್ ನೀಲ್ ಅವರ ಮುಂದಿನ ಪ್ರಾಜೆಕ್ಟ್ ಯಾವುದು ಎಂಬ ಪ್ರಶ್ನೆಯನ್ನು ಕೇಳುತ್ತಿದ್ದಾರೆ. ಈ ಕುರಿತು ಇದೀಗ ಹೊಂಬಾಳೆ ಫಿಲಂಸ್ ಸುಳಿವು ನೀಡಿದೆ.

ಕಳೆದ ಕೆಲವು ದಿನಗಳಿಂದ ಪ್ರಶಾಂತ್ ನೀಲ್ ಅವರು ಟ್ವಿಟ್ಟರ್ ನಲ್ಲಿ ಟ್ರೆಂಡಿಂಗ್‍ನಲ್ಲಿದ್ದು, ಪ್ರಭಾಸ್ ಜೊತೆ ಸಿನಿಮಾ ಮಾಡಲಿದ್ದಾರೆ ಎಂಬ ಸುದ್ದಿ ಸಖತ್ ವೈರಲ್ ಆಗಿದೆ. ಇದರ ಬೆನ್ನಲ್ಲೇ ಇಂದು ಹೊಂಬಾಳೆ ಫಿಲಂಸ್ ತನ್ನ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟರ್‍ವೊಂದನ್ನು ಬಿಡುಗಡೆ ಮಾಡಿದ್ದು, ಇದಕ್ಕೆ ಪುಷ್ಠಿ ಸಿಕ್ಕಂತಾಗಿದೆ. ಹೀಗಾಗಿ ಅಭಿಮಾನಿಗಳು ಈ ಕುರಿತು ಸಾಕಷ್ಟು ಚರ್ಚೆ ನಡೆಸುತ್ತಿದ್ದಾರೆ.

ಆತ್ಮೀಯ ಕಲಾಭಿಮಾನಿಗಳೇ, ನೀವು ನಮ್ಮ ಸಿನಿಮಾಗಳನ್ನು ನಮಗಿಂತಲೂ ಹೆಚ್ಚು ಪ್ರೀತಿಸುತ್ತೀರಿ. ಈ ಪ್ರೀತಿ ಸದಾ ನಮ್ಮ ಮೇಲೆ ಇರಲಿ, ನಾವು ಮತ್ತೊಂದು ‘ಇಂಡಿಯನ್ ಸಿನಿಮಾ’ ಮೂಲಕ ನಿಮ್ಮ ಮುಂದೆ ಬರಲಿದ್ದೇವೆ. ಡಿಸೆಂಬರ್ 2ರಂದು ಮಧ್ಯಾಹ್ನ 2.09ಕ್ಕೆ ಹೊರ ಬೀಳಲಿರುವ ಘೋಷಣೆಗಾಗಿ ಹೃದಯವನ್ನು ತೆರೆದಿಟ್ಟುಕೊಂಡಿರಿ ಎಂದು ಹೊಂಬಾಳೆ ಫಿಲಂಸ್‍ನ ಟ್ವೀಟ್‍ನಲ್ಲಿ ಬರೆಯಲಾಗಿದೆ. ಈ ಕುರಿತು ಪೋಟೋವನ್ನು ಸಹ ಹಂಚಿಕೊಳ್ಳಲಾಗಿದೆ.

ಹೊಂಬಾಳೆ ಫಿಲಂಸ್‍ನ ಪೋಸ್ಟರ್ ಇದೀಗ ಟ್ವಿಟ್ಟರ್ ನಲ್ಲಿ ವೈರಲ್ ಆಗಿದ್ದು, ಪ್ರಶಾಂತ್ ನೀಲ್ ಅವರು ಕೆಜಿಎಫ್-2 ಬಳಿಕ ಪ್ರಭಾಸ್ ಹಾಗೂ ಜೂ.ಎನ್‍ಟಿಆರ್ ಜೊತೆ ಸಿನಿಮಾ ಮಾಡಲಿದ್ದಾರೆ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ. ಹೊಂಬಾಳೆ ಫಿಲಂಸ್ ಟ್ವೀಟ್ ಕುರಿತು ಸಾಕಷ್ಟು ಚರ್ಚೆ ನಡೆಯುತ್ತಿದ್ದರೂ, ಈ ಕುರಿತು ಪ್ರಶಾಂತ್ ನೀಲ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಹೀಗಾಗಿ ಅಭಿಮಾನಿಗಳು ಫುಲ್ ಕನ್ಫ್ಯೂಸ್ ಆಗಿದ್ದಾರೆ. ಒಟ್ನಲ್ಲಿ ಈ ಕುರಿತು ಟ್ವಿಟ್ಟರ್ ನಲ್ಲಿ ಸಾಕಷ್ಟು ಚರ್ಚೆ ನಡೆಯುತ್ತಿದೆ.

ಕೆಜಿಎಫ್ ಚಾಪ್ಟರ್-2 ಚಿತ್ರೀಕರಣಕ್ಕಾಗಿ ಬಾಲಿವುಡ್ ಹಿರಿಯ ನಟ ಸಂಜಯ್ ದತ್ ಅವರು ಹೈದಾರಾಬಾದ್‍ಗೆ ಲ್ಯಾಂಡ್ ಆಗಿದ್ದು, ಶೂಟಿಂಗ್ ಆರಂಭಿಸಿದ್ದಾರೆ. ಅಧೀರನ ಪಾತ್ರ ನಿರ್ವಹಿಸುತ್ತಿರುವ ಸಂಜು ಬಾಬಾ ಕ್ಯಾನ್ಸರ್‍ಗೆ ಚಿಕಿತ್ಸೆ ಪಡೆದು ಮರಳಿದ ಬಳಿಕ ಉತ್ಸಾಹದಿಂದಲೇ ಶೂಟಿಂಗ್‍ಗೆ ಆಗಮಿಸಿದ್ದಾರೆ. ಲಾಕ್‍ಡೌನ್ ಬಳಿಕ ಇತ್ತೀಚೆಗಷ್ಟೇ ಯಶ್ ಭಾಗದ ಚಿತ್ರೀಕರಣವನ್ನು ಉಡುಪಿಯಲ್ಲಿ ನಡೆಸಲಾಗಿತ್ತು. ಇದೆಲ್ಲದರ ನಡುವೆ ಇದೀಗ ಪ್ರಭಾಸ್ ಜೊತೆ ಪ್ರಶಾಂತ್ ನೀಲ್ ಸಿನಿಮಾ ಮಾಡಲಿದ್ದಾರೆ ಎಂಬ ಸುದ್ದಿ ವೈರಲ್ ಆಗಿದೆ.

Comments

Leave a Reply

Your email address will not be published. Required fields are marked *