ಪ್ರಧಾನಿ ವಿಮಾನ ಕೊಳ್ಳಬಹುದು, ನಾವು ಸೋಫಾ ಮೇಲೆ ಪ್ರತಿಭಟಿಸಬಾರದೆ- ರಾಗಾ ಪ್ರಶ್ನೆ

ನವದೆಹಲಿ: ಕೃಷಿ ಮಸೂದೆ ವಿರೋಧಿಸಿ ಪ್ರತಿಭಟನೆ ನಡೆಸುವ ವೇಳೆ ಟ್ರ್ಯಾಕ್ಟರ್ ಮೇಲೆ ಕುಷನ್ ಸೀಟ್ ಹಾಕಿಸಿಕೊಂಡು ಕುಳಿತದ್ದಕ್ಕೆ ಟ್ರೋಲ್ ಮಾಡಲಾಗುತ್ತಿದ್ದು, ಇದಕ್ಕೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತಿರುಗೇಟು ನೀಡಿದ್ದಾರೆ.

ಪಂಜಾಬ್‍ನಲ್ಲಿ ನಡೆದ ಟ್ರ್ಯಾಕ್ಟರ್ ರ್ಯಾಲಿ ವೇಳೆ ರಾಹುಲ್ ಗಾಂಧಿ ಕುಷನ್ ಸೀಟ್ ಹಾಕಿಸಿಕೊಂಡು ಟ್ರ್ಯಾಕ್ಟರ್ ಮೇಲೆ ಕುಳಿತಿದ್ದರು. ಈ ಕುರಿತು ಸಖತ್ ಟ್ರೋಲ್ ಆಗಿತ್ತು. ಇದಕ್ಕೆ ರಾಹುಲ್ ಗಾಂಧಿ ತಿರುಗೇಟು ನೀಡಿದ್ದು, ಪ್ರಧಾನಿ ನರೇಂದ್ರ ಮೋದಿಯವರು ಎರಡು ಕಸ್ಟಮ್ ಮೇಡ್ ಬೋಯಿಂಗ್ ಪ್ಲೇನ್‍ಗಳನ್ನು ಖರೀದಿಸುವ ಮೂಲಕ ಸಾವಿರಾರು ಕೋಟಿ ರೂ.ಗಳನ್ನು ವ್ಯರ್ಥ ಮಾಡುತ್ತಿದ್ದಾರೆ. ಇದರಲ್ಲಿ ಕುಷನ್ ಸೀಟ್ ಮಾತ್ರ ಇಲ್ಲ. ಅವರ ಆರಾಮಕ್ಕಾಗಿ ಐಷಾರಾಮಿ ಬೆಡ್‍ಗಳನ್ನು ಸಹ ಹಾಕಲಾಗಿದೆ ಎಂದು ಆರೋಪಿಸಿದ್ದಾರೆ.

ಚೀನಾ ನಮ್ಮ ಗಡಿಯಲ್ಲಿ ಉಪಟಳ ಮಾಡುತ್ತಿದೆ. ಸರ್ಕಾರ ಶಸ್ತ್ರಾಸ್ತ್ರ, ಮದ್ದುಗುಂಡು, ಇಂಧನ, ಆಹಾರ ಹಾಗೂ ಚಳಿಗಾಲದ ಅಗತ್ಯ ವಸ್ತುಗಳನ್ನು ಪೂರ್ವ ಲಡಾಖ್‍ಗೆ ಕಳುಹಿಸುತ್ತಿದೆ. ದಶಕಗಳಲ್ಲೇ ಇದು ಅತಿ ದೊಡ್ಡ ಕಾರ್ಯಾಚರಣೆಯಾಗಿದೆ. ಈ ಸಂದರ್ಭದಲ್ಲಿ ಇಷ್ಟೊಂದು ಬೃಹತ್ ಪ್ರಮಾಣದ ಹಣವನ್ನು ವ್ಯಯಿಸುವ ಅಗತ್ಯವಿತ್ತೆ ಎಂದು ಅವರು ಪ್ರಶ್ನಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರ ಸ್ನೇಹಿತ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರತ್ಯೇಕ ವಿಮಾನ ಹೊಂದಿದ ಹಿನ್ನೆಲೆ ಇವರೂ ಸಹ ವಿಮಾನ ಖರೀದಿಸಿದ್ದಾರೆ. ಯಾಕೆ ಈ ಕುರಿತು ನೀವು ಅವರನ್ನು ಪ್ರಶ್ನಿಸುವುದಿಲ್ಲ? ಅಷ್ಟೊಂದು ಬೃಹತ್ ಮೊತ್ತದ ಬೋಯಿಂಗ್ 777 ಖರೀದಿಸಿದ ಕುರಿತು ಯಾರೂ ಕೇಳಲಿಲ್ಲ. ಆದರೆ ಕುಷನ್ ಕುರಿತು ಎಲ್ಲರೂ ಬಹುಬೇಗ ಪ್ರತಿಕ್ರಿಯಿಸುತ್ತಿದ್ದಾರೆ ಎಂದು ಪಂಜಾಬ್‍ನಲ್ಲಿ ನಡೆಯುತ್ತಿರುವ ಎರಡನೇ ದಿನದ ರ್ಯಾಲಿ ವೇಳೆ ರಾಹುಲ್ ಗಾಂಧಿ ಸುದ್ದಿಗಾರರನ್ನು ಪ್ರಶ್ನಿಸಿದ್ದಾರೆ.

ವಿಮಾನ ಖರೀದಿ ಕುರಿತು ಸರ್ಕಾರದ ಮೂಲಗಳು ಸಹ ಪ್ರತಿಕ್ರಿಯಿಸಿದ್ದು, ಭಾರತೀಯ ವಾಯುಪಡೆಗೆ ಸೇರಿದ ವಿಮಾನಗಳು ಪ್ರಧಾನ ಮಂತ್ರಿಗಳ ವಿಮಾನಗಳಲ್ಲ. ವಿವಿಐಪಿಗಳ ಬಳಕೆಗಾಗಿ ಇವೆ ಎಂದು ಸ್ಪಷ್ಟಪಡಿಸಿವೆ.

Comments

Leave a Reply

Your email address will not be published. Required fields are marked *