ಪ್ರಧಾನಿ ಮೋದಿ ದೊಡ್ಡ ದಂಗೆಕೋರ- ಮಮತಾ ಬ್ಯಾನರ್ಜಿ ವಾಗ್ದಾಳಿ

ಕೋಲ್ಕತ್ತಾ: ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ ಹತ್ತಿರಬರುತ್ತಿದ್ದಂತೆ ರಾಜಕೀಯ ಗರಿಗೆದರಿದ್ದು, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹರಿಹಾಯ್ದಿದ್ದಾರೆ.

ಹೂಗ್ಲಿಯಲ್ಲಿ ರ‍್ಯಾಲಿ ಉದ್ದೇಶಿಸಿ ಮಾತನಾಡಿದ ಅವರು, ಕೇಂದ್ರದ ಏಜೆನ್ಸಿಗಳನ್ನು ಬಳಸಿಕೊಂಡು ತಮ್ಮ ಅಳಿಯನ ಪತ್ನಿ ರುಜಿರಾ ಬ್ಯಾನರ್ಜಿ ಹಾಗೂ ಟಿಎಂಸಿ ಸಂಸದ ಅಭಿಷೇಕ್ ಬ್ಯಾನರ್ಜಿ ಮನೆ ಮೇಲೆ ದಾಳಿ ನಡೆಸಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ದೊಡ್ಡ ದಂಗೆಕೋರ. ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್‍ಗಿಂತ ಕೆಟ್ಟದಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ದೇಶದ ಅತಿ ದೊಡ್ಡ ದಂಗೆಕೋರ, ಟ್ರಂಪ್‍ಗೆ ಆದ ರೀತಿಯಲ್ಲೇ, ಅದಕ್ಕಿಂತ ದುರದೃಷ್ಟಕರವಾಗಿದ್ದಾರೆ. ಹಿಂಸೆಯಿಂದ ಏನೂ ಪಡೆಯಲು ಸಾಧ್ಯವಿಲ್ಲ ಎಂದು ಗುಡುಗಿದ್ದಾರೆ.

ಒಬ್ಬರು ರಾಕ್ಷಸ, ಮತ್ತೊಬ್ಬರು ರಾವಣ ಇಬ್ಬರೂ ದೇಶವನ್ನು ನಡೆಸುತ್ತಿದ್ದಾರೆ. ಮೋದಿ ನೀವು ರಾಕ್ಷಸನ ಸ್ನೇಹಿತರು. ಇನ್ನೆರಡು ತಿಂಗಳು ಎಷ್ಟು ಮಾತನಾಡುತ್ತೀರೋ ಮಾತನಾಡಿ, ಏಕೆಂದರೆ ಬಳಿಕ ನಾವು ಮಾತನಾಡುತ್ತೇವೆ. ಬಂಗಾಳವನ್ನು ಗೆಲ್ಲುವುದು ಅಷ್ಟು ಸುಲಭವಲ್ಲ, ಈ ನೆಲದಲ್ಲಿ ಬಿಜೆಪಿಗೆ ಸಮಾಧಿಯನ್ನು ನಾನು ಖಚಿತಪಡಿಸುತ್ತೇನೆ ಎಂದು ಹರಿಹಾಯ್ದಿದ್ದಾರೆ.

ಪ್ರಧಾನಿ ಸ್ಥಾನಕ್ಕೆ ನಾನು ಗೌರವ ಕೊಡುತ್ತೇನೆ. ಇಂದು ಅವರು ಇದ್ದಾರೆ, ನಾಳೆ ಇರುವುದಿಲ್ಲ. ಆದರೂ ಸುಳ್ಳು ಹೇಳುತ್ತಾರೆ. ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ನಾನು ಗೋಲ್ ಕೀಪರ್, ಬಿಜೆಪಿ ಸಿಂಗಲ್ ಸ್ಕೋರ್ ಮಾಡಲೂ ಬಿಡುವುದಿಲ್ಲ. ಬಂಗಾಳಿಯಲ್ಲಿ ಮಾತನಾಡಲು ಪ್ರಧಾನಿ ನರೇಂದ್ರ ಮೋದಿಗೆ ಭಾಷಣ ಅನುವಾದಕರ ಸಹಾಯ ಬೇಕು. ಆದರೆ ನನಗೆ ಅದು ಬೇಕಾಗಿಲ್ಲ. ನಾನು ಗುಜರಾತಿಯಲ್ಲೇ ಮಾತನಾಡಬಲ್ಲೆ. ನನು ಭಾಷಾಂತರ ಮಾಡುವವರ ಸಹಾಯ ಪಡೆಯುವುದಿಲ್ಲ ಎಂದು ಅವರು ಹರಿಹಾಯ್ದರು.

Comments

Leave a Reply

Your email address will not be published. Required fields are marked *