ಪ್ರತಿಮೆ ನಿರ್ಮಿಸಿ ಪೂಜಿಸುತ್ತಿರುವ ಅಭಿಮಾನಿ ದರ್ಶನಕ್ಕೆ ಹೊರಟ ಮಾಜಿ ಪ್ರಧಾನಿ

– ದೇವದುರ್ಗದಲ್ಲಿ ನಾಳೆ ಜೆಡಿಎಸ್ ಬೃಹತ್ ಸಮಾವೇಶ
– 5 ಎ ಕಾಲುವೆ ಹೋರಾಟಗಾರರಿಂದ ದೇವೇಗೌಡರಿಗೆ ಹಕ್ಕೊತ್ತಾಯ

ರಾಯಚೂರು: ಜಿಲ್ಲೆಯ ದೇವದುರ್ಗ ಪಟ್ಟಣದಲ್ಲಿ ಬುಧವಾರ ನಡೆಯಲಿರುವ ಜೆಡಿಎಸ್ ಬೃಹತ್ ಸಮಾವೇಶಕ್ಕೆ ಭರದ ಸಿದ್ಧತೆ ನಡೆದಿದೆ. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವ ಹಿನ್ನೆಲೆ “ದೇವೇಗೌಡರ ನಡೆ ದೇವದುರ್ಗ ಸ್ವಾಭಿಮಾನಿ ರೈತರ ಕಡೆ” ಎಂಬ ಘೋಷಣೆಯೊಂದಿಗೆ ಬೃಹತ್ ಸಮಾವೇಶಕ್ಕಾಗಿ ಸಕಲ ಸಿದ್ಧತೆಗಳು ನಡೆದಿವೆ.

ದೇವದುರ್ಗ ಪಟ್ಟಣದ ಬಸವ ಕಾಲೇಜು ಮೈದಾನದಲ್ಲಿ ಬೃಹತ್ ವೇದಿಕೆ ಸಿದ್ಧವಾಗುತ್ತಿದೆ. ಇನ್ನೂ ರಾಜ್ಯದಲ್ಲಿ ಜೆಡಿಎಸ್ ಪಕ್ಷದ ಸಂಘಟನೆಗೆ ಕಟ್ಟಲು ಮತ್ತೆ ದೇವೇಗೌಡರು ಮುಂದಾಗಿದ್ದಾರೆ. ಸಮಾವೇಶದ ಬಳಿಕ ಮಾಜಿ ಪ್ರಧಾನಿ ದೇವೇಗೌಡರು ದೇವದುರ್ಗ ತಾಲೂಕಿನ ಗಾಣದಾಳ ಗ್ರಾಮದ ರೈತ ಪ್ರಭು ಪಾಟೀಲ್ ಮನೆಗೆ ಭೇಟಿ ನೀಡಲಿದ್ದಾರೆ. ದೇವದುರ್ಗ ತಾಲೂಕಿನಲ್ಲಿ ನಾರಾಯಣಪುರ ಬಲದಂಡೆ ಕಾಲುವೆ ಮೂಲಕ ನೀರಾವರಿ ಯೋಜನೆ ಜಾರಿ ಮಾಡಿದ ನೆನಪಿಗಾಗಿ ದೇವೇಗೌಡರ ಪ್ರತಿಮೆಯನ್ನ ನಿರ್ಮಿಸಿ ಅಭಿಮಾನಿ ರೈತ ನಿತ್ಯ ಪೂಜೆ ಸಲ್ಲಿಸುತ್ತಿದ್ದಾರೆ. ಹೀಗಾಗಿ ಮಾಜಿ ಪ್ರಧಾನಿ ದೇವೇಗೌಡರು ರೈತನ ಮನೆಗೆ ಭೇಟಿ ನೀಡಿ ರೈತನೊಂದಿಗೆ ಸಂವಾದ ನಡೆಸಲಿದ್ದಾರೆ.

ಇನ್ನೂ ಎನ್‍ಆರ್ ಬಿಸಿ 5 ಎ ಕಾಲುವೆಗಾಗಿ ಕಳೆದ 82 ದಿನಗಳಿಂದ ನಿರಂತರ ಹೋರಾಟ ನಡೆಸಿರುವ ಮಸ್ಕಿ ಭಾಗದ ರೈತರು ದೇವೇಗೌಡರಿಗೆ ಮನವಿ ಮಾಡಲಿದ್ದಾರೆ. ಎನ್ ಆರ್ ಬಿಸಿ ಕಾಲುವೆಯ ನೀರನ್ನ ಮಸ್ಕಿ ರೈತರಿಗೂ ಒದಗಿಸುವಲ್ಲಿ ನಮ್ಮ ಹೋರಾಟಕ್ಕೆ ಸ್ಪಂದಿಸಿ ಸರ್ಕಾರದ ಮೇಲೆ ಒತ್ತಡ ಹೇರಲು ರೈತರು ದೇವೇಗೌಡರಿಗೆ ಒತ್ತಾಯಿಸಲಿದ್ದಾರೆ. ಗ್ರಾಮ ಪಂಚಾಯ್ತಿ ಚುನಾವಣೆ ಬಹಿಷ್ಕಾರ ಮಾಡಿದರೂ ಸರ್ಕಾರ ಸ್ಪಂದಿಸಿಲ್ಲವಾದ್ದರಿಂದ ಹೋರಾಟ ಮುಂದುವರೆಸಿರುವ ರೈತರು ದೇವೇಗೌಡರಿಗೆ ಹಕ್ಕೊತ್ತಾಯ ಮಾಡಲು ಮುಂದಾಗಿದ್ದಾರೆ.

Comments

Leave a Reply

Your email address will not be published. Required fields are marked *