ಪ್ರತಿದಿನ 24 ಕಿ.ಮೀ ದೂರ ಸೈಕಲ್ ಪ್ರಯಾಣ- SSLCಯಲ್ಲಿ 98.5% ಅಂಕ ಪಡೆದ ವಿದ್ಯಾರ್ಥಿನಿ

– ಐಎಎಸ್ ಅಧಿಕಾರಿಯಾಗೋ ಕನಸು ಕಂಡಿರುವ ಹುಡುಗಿ

ಭೋಪಾಲ್: ಸಾಧಿಸುವ ಛಲವಿದ್ದರೇ ಏನೇ ಸಮಸ್ಯೆಗಳು ಬಂದರೂ ಸಾಧಿಸಬಹುದು ಎಂಬುದನ್ನು ವಿದ್ಯಾರ್ಥಿನಿಯೊಬ್ಬಳು ಸಾಬೀತು ಮಾಡಿದ್ದಾಳೆ. ಪ್ರತಿದಿನ ಶಾಲೆಗೆ 24 ಕಿ.ಮೀ ದೂರ ಸೈಕಲ್ ತುಳಿದು ಹೋಗಿ ಬರುತ್ತಿದ್ದಳು. ಇದೀಗ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ 98.5% ಅಂಕಗಳನ್ನು ಗಳಿಸಿದ್ದಾಳೆ. ಅಲ್ಲದೇ ಗರಿಷ್ಠ ಪಡೆಡದವರ ಪಟ್ಟಿಯಲ್ಲಿ ವಿದ್ಯಾರ್ಥಿನಿ ಎಂಟನೇ ಸ್ಥಾನ ಪಡೆದುಕೊಂಡಿದ್ದಾಳೆ.

ರೋಶ್ನಿ ಭಡೌರಿಯಾ (15) 10ನೇ ತರಗತಿ ಪರೀಕ್ಷೆಯಲ್ಲಿ 98.5% ಅಂಕಗಳನ್ನು ಗಳಿಸಿದ್ದಾಳೆ. ಮಧ್ಯಪ್ರದೇಶದ ಭಿಂದ್ ಜಿಲ್ಲೆಯ ಅಜ್ನೋಲ್ ಹಳ್ಳಿಯಲ್ಲಿ ರೋಶ್ನಿ ತನ್ನ ಕುಟುಂಬದೊಂದಿಗೆ ವಾಸಿಸುತ್ತಿದ್ದಾಳೆ. ರೋಶ್ನಿ ಶಾಲೆಯು ಮನೆಯಿಂದ ಸುಮಾರು 12 ಕಿ.ಮೀ ದೂರದಲ್ಲಿದೆ. ಆದರೂ ತಾನು ಏನಾದರೂ ಸಾಧನೆ ಮಾಡಬೇಕೆಂಬ ಛಲದಿಂದ ಪ್ರತಿದಿನ ಮನೆಯಿಂದ 12 ಕಿ.ಮೀ ಸೈಕಲ್ ತುಳಿದುಕೊಂಡು ಶಾಲೆಗೆ ಹೋಗುತ್ತಿದ್ದಳು.

ಅದೇ ರೀತಿ ಶಾಲೆ ಮುಗಿಸಿ ಮತ್ತೆ 12 ಕಿ.ಮೀ ದೂರ ಸೈಕಲ್ ಮೂಲಕ ಮನೆಗೆ ವಾಪಸ್ ಬರುತ್ತಿದ್ದಳು. ಹೀಗಾಗಿ ಪ್ರತಿದಿನ 24 ಕಿ.ಮೀ ದೂರ ಸೈಕಲ್ ಮೂಲಕ ಶಾಲೆಗೆ ಹೋಗಿ ಬರುತ್ತಿದ್ದಳು. ಕೆಲವೊಮ್ಮೆ ಭಾರೀ ಮಳೆಯಿಂದಾಗಿ ತನ್ನ ಸಂಬಂಧಿಕರ ಮನೆಯಲ್ಲಿ ಉಳಿದುಕೊಳ್ಳುತ್ತಿದ್ದಳು. “ಅನೇಕ ಬಾರಿ ನಾನು ನನ್ನ ಸಂಬಂಧಿಕರ ಮನೆಯಲ್ಲಿ ರಾತ್ರಿ ಕಳೆಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು” ಎಂದು ತಿಳಿಸಿದ್ದಾಳೆ.

ವಿದ್ಯಾರ್ಥಿನಿ ಗಣಿತ ಮತ್ತು ವಿಜ್ಞಾನ ಎರಡು ವಿಷಯಗಳಲ್ಲಿ 100 ಅಂಕ ಗಳಿಸಿದ್ದಾಳೆ. ಇಂಗ್ಲಿಷ್‍ನಲ್ಲಿ 96 ಅಂಕಗಳನ್ನು ಪಡೆದುಕೊಂಡಿದ್ದಾಳೆ. “ನಾನು ಯಾವಾಗಲೂ ತರಗತಿಯಲ್ಲಿ ಗಮನವಿಟ್ಟು ಪಾಠ ಕೇಳುತ್ತಿದ್ದೆ. ಜೊತೆಗೆ ಮನೆಗೆ ಬಂದು ಮತ್ತೆ ಪಾಠವನ್ನು ಅಭ್ಯಾಸ ಮಾಡುತ್ತಿದ್ದೆ. ಹೆಚ್ಚಿನ ಅಂಕಗಳನ್ನು ಪಡೆದಿರುವುದಕ್ಕೆ ತುಂಬಾ ಖುಷಿಯಾಗಿದೆ” ಎಂದು ಹೇಳಿದಳು.

ರೋಶ್ನಿ ತಂದೆ ಪುರುಷೋತ್ತಮ್ ಕೃಷಿಕರಾಗಿದ್ದು, ತಮ್ಮ ಮಗಳ ಬಗ್ಗೆ ಹೆಮ್ಮೆಯಿಂದ ಮಾತನಾಡಿದ್ದಾರೆ. “ನನ್ನ ಎಲ್ಲ ಮಕ್ಕಳು ಚೆನ್ನಾಗಿ ಓದುತ್ತಾರೆ. ಆದರೆ ರೋಶ್ನಿ ಎಲ್ಲರಿಗಿಂತಲೂ ಹೆಚ್ಚಿನ ಸಾಧನೆ ಮಾಡಿದ್ದಾಳೆ. ಈ ಭಾಗಗಳಲ್ಲಿ ಯಾರೂ ಇಷ್ಟು ಹೆಚ್ಚಿನ ಅಂಕಗಳನ್ನು ಗಳಿಸಿಲ್ಲ. ನಾನು ಕೇವಲ ನಾಲ್ಕು ಎಕರೆ ಭೂಮಿಯನ್ನು ಹೊಂದಿದ್ದೇನೆ. ಅದರಲ್ಲಿ ಕೆಲಸ ಮಾಡಿ ನನ್ನ ಮೂರು ಮಕ್ಕಳಿಗೆ ಶಿಕ್ಷಣ ಕೊಡಿಸುತ್ತಿದ್ದೇನೆ. ಹಿರಿಯ ಮಗ 12 ನೇ ತರಗತಿ ವ್ಯಾಸಂಗ ಮಾಡುತ್ತಿದ್ದು, ಕಿರಿಯ ಮಗ 4ನೇ ತರಗತಿ ವ್ಯಾಸಂಗ ಮಾಡುತ್ತಿದ್ದಾನೆ” ಎಂದು ಹೇಳಿದರು.

ಇಂದಿನ ಕಾಲದಲ್ಲಿ ಮೂವರು ಮಕ್ಕಳನ್ನು ಓದಿಸುವುದು ತುಂಬಾ ಕಷ್ಟ. ಆದರೆ ನನ್ನ ಕುಟುಂಬಕ್ಕೆ ಯಾವುದೇ ಸಮಸ್ಯೆ ಎದುರಿಸಲು ನಾನು ಬಿಡುವುದಿಲ್ಲ. ಅದರಂತೆಯೇ ನನ್ನ ಮಕ್ಕಳು ಕೂಡ ಚೆನ್ನಾಗಿ ಓದುತ್ತಿದ್ದಾರೆ. ಖಂಡಿತವಾಗಿಯೂ ನನ್ನ ಮಗಳು ಓದುವುದನ್ನು ಮುಂದುವರಿಸಬೇಕೆಂದು ನಾನು ಬಯಸುತ್ತೇನೆ. ಅವಳು ಪದವಿಯನ್ನು ಪಡೆದು, ದೊಡ್ಡ ಸಂಸ್ಥೆಗಳಲ್ಲಿ ಕೆಲಸ ಮಾಡಬೇಕು ಎಂಬುವುದು ನನ್ನ ಇಚ್ಛೆ ಎಂದು ಪುರುಷೋತ್ತಮ್ ಸಂತಸದಿಂದ ಹೇಳಿದರು.

“ನಾನು ಐಎಎಸ್ ಅಧಿಕಾರಿಯಾಗಬೇಕೆಂದು ಕನಸು ಕಂಡಿದ್ದೇನೆ. ಕಲೆಕ್ಟರ್ ಆದರೆ ಸಮಾಜಕ್ಕೆ ಸಾಕಷ್ಟು ಒಳ್ಳೆಯ ಕೆಲಸ ಮಾಡಬಹುದು ಎಂದು ಕೇಳಿ ತಿಳಿದುಕೊಂಡಿದ್ದೀನಿ. ಆದ್ದರಿಂದ ನಾನು ಕಲೆಕ್ಟರ್ ಆಗುತ್ತೇನೆ” ಎಂದು ರೋಶ್ನಿ ಹೇಳಿದಳು.

Comments

Leave a Reply

Your email address will not be published. Required fields are marked *