ಪ್ರಜ್ವಲ್ ರೇವಣ್ಣ ವಿರುದ್ಧ ಸುಳ್ಳು ಮಾಹಿತಿ ಆರೋಪ- ವಿಚಾರಣೆಗೆ ಸುಪ್ರೀಂ ಸಮ್ಮತಿ

ನವದೆಹಲಿ: ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಚುನಾವಣಾ ಆಯೋಗಕ್ಕೆ ಸುಳ್ಳು ಮಾಹಿತಿ ನೀಡಿರುವುದಾಗಿ ಆರೋಪಿಸಿ ಮಾಜಿ ಸಚಿವ ಎ.ಮಂಜು ಸಲ್ಲಿಸಿದ್ದ ಅರ್ಜಿ ವಿಚಾರಣೆಗೆ ಸುಪ್ರೀಂಕೋರ್ಟ್ ಸಮ್ಮತಿಸಿದೆ.

ಎ.ಮಂಜು ಸಲ್ಲಿಸಿದ್ದ ಅರ್ಜಿಯನ್ನು ಇಂದು ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಪ್ರಕರಣ ಸಂಬಂಧ ಪ್ರತಿಕ್ರಿಯೆ ನೀಡುವಂತೆ ಸೂಚಿಸಿ ಪ್ರಜ್ವಲ್ ರೇವಣ್ಣಗೆ ನೋಟಿಸ್ ಜಾರಿ ಮಾಡಿದೆ.

ಪ್ರಜ್ವಲ್ ರೇವಣ್ಣ ಅಕ್ರಮವಾಗಿ ಆಸ್ತಿ ಗಳಿಕೆ ಮಾಡಿ ಆಯೋಗಕ್ಕೆ ಸುಳ್ಳು ಮಾಹಿತಿ ನೀಡಿದ್ದಾರೆ. ಆದಾಯಕ್ಕಿಂತ ಹೆಚ್ಚಿನ ಆಸ್ತಿ ಘೋಷಣೆ ಮಾಡಿದ್ದಾರೆ. ಹಲವು ಕಂಪನಿಗಳಲ್ಲಿ ಪಾಲುದಾರಿಕೆ ಹೊಂದಿದ್ದರೂ ಅದನ್ನು ಪ್ರಮಾಣ ಪತ್ರದಲ್ಲಿ ನಮೂದಿಸಿಲ್ಲ. ಮಾಜಿ ಪ್ರಧಾನಿ ದೇವೇಗೌಡ ಅವರ ಜೊತೆಗಿನ ಸಾಲದ ವ್ಯವಹಾರವನ್ನು ಮುಚ್ಚಿಟ್ಟಿದ್ದಾರೆ ಎಂದು ಎ.ಮಂಜು ತಮ್ಮ ಅರ್ಜಿಯಲ್ಲಿ ಆರೋಪಿಸಿದ್ದಾರೆ.

ಸರ್ಕಾರಿ ಆಸ್ತಿಯನ್ನು ಅವರ ಹೆಸರಿಗೆ ರಿಜಿಸ್ಟರ್ ಮಾಡಿಸಿಕೊಂಡಿದ್ದಾರೆ. ಸುಮಾರು 1.88 ಕೋಟಿ ರೂ. ಹಣವನ್ನು ಸರ್ಕಾರ ಅವರ ಖಾತೆಗೆ ವರ್ಗಾವಣೆ ಮಾಡಿದೆ. ಇದ್ಯಾವುದೂ ಚುನಾವಣಾ ಅಫಿಡವಿಟ್‍ನಲ್ಲಿ ನಮೂದಾಗಿಲ್ಲ. ತನಗೆ ಆದಾಯವೇ ಇಲ್ಲ ಎನ್ನುವ ಪ್ರಜ್ವಲ್ ರೇವಣ್ಣ ಚುನಾವಣೆ ಸಂದರ್ಭದಲ್ಲಿ ಸಲ್ಲಿಸಿದ ಅಫಿಡವಿಟ್‍ನಲ್ಲಿ ಸುಳ್ಳು ಮಾಹಿತಿ ನೀಡಿ ಜನರನ್ನು ದಾರಿ ತಪ್ಪಿಸುವ ಕೆಲಸಕ್ಕೆ ಮುಂದಾಗಿದ್ದಾರೆ. ಹೀಗಾಗಿ ಅವರ ಸಂಸದ ಸ್ಥಾನವನ್ನು ರದ್ದುಗೊಳಿಸಬೇಕು ಎಂದು ಅರ್ಜಿಯಲ್ಲಿ ಒತ್ತಾಯಿಸಿದ್ದಾರೆ.

ಈ ಹಿಂದೆ ಎ.ಮಂಜು ಹೈಕೋರ್ಟಿಗೆ ಅರ್ಜಿಯನ್ನು ಸಲ್ಲಿಸಿದ್ದರು. ಸೂಕ್ತ ಸಮಯದಲ್ಲಿ ವಿಚಾರಣೆಗೆ ಹಾಜರಾಗದ ಹಿನ್ನಲೆ ಅರ್ಜಿಯನ್ನು ವಜಾ ಮಾಡಲಾಗಿತ್ತು. ಅರ್ಜಿ ವಜಾಗೊಳಸಿದ್ದ ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟಿಗೆ ಮೇಲ್ಮನವಿ ಸಲ್ಲಿಸಲಾಗಿದ್ದು ಸುಪ್ರೀಂಕೋರ್ಟ್ ಸದ್ಯ ವಿಚಾರಣೆಗೆ ಒಪ್ಪಿದೆ.

Comments

Leave a Reply

Your email address will not be published. Required fields are marked *