‘ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫ್’ ಸೀಸನ್ 4ರ ವಿಜೇತೆ ಮೆಬಿನಾ ಮೈಕಲ್ ದುರ್ಮರಣ

ಮಂಡ್ಯ: ಕನ್ನಡದ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗಿದ್ದ ಖ್ಯಾತ ರಿಯಾಲಿಟಿ ಶೋ ‘ಪ್ಯಾಟೆ  ಹುಡ್ಗೀರ್ ಹಳ್ಳಿ ಲೈಫ್’ ಖ್ಯಾತಿಯ ಮೆಬಿನಾ ಮೈಕಲ್ ಇಂದು ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.

ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ದೇವಿಹಳ್ಳಿ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಸಂಜೆ 4.30ರ ವೇಳೆಗೆ ಅಪಘಾತ ಸಂಭವಿಸಿರುವ ಕುರಿತು ಮಾಹಿತಿ ಲಭಿಸಿದ್ದು, ಕಾರಿನಲ್ಲಿ ತೆರಳುತ್ತಿದ್ದ ಸಂದರ್ಭದಲ್ಲಿ ಟ್ರ್ಯಾಕ್ಟರ್ ಹಾಗೂ ಕಾರಿನ ನಡುವೆ ಮುಖಾಮುಖಿ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಕಾರಿನಲ್ಲಿದ್ದ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ಒಬ್ಬರು ಸಾವನ್ನಪ್ಪಿದ್ದಾರೆ. ಗಾಯಾಳುಗಳಿಗೆ ಆದಿಚುಂಚನಗಿರಿ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿದ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ಕಳುಹಿಸಲಾಗಿದೆ. ಈ ವೇಳೆ ಮಾರ್ಗ ಮಧ್ಯೆ ಮೆಬಿನಾ ಸಾವನ್ನಪ್ಪಿದ್ದಾರೆ.

ಬೆಂಗಳೂರಿನಿಂದ ಸೋಮವಾರಪೇಟೆಗೆ ಕೆಎ 02 ಎಎಫ್ 4796 ಸಂಖ್ಯೆಯ ಕಾರು ತೆರಳುತ್ತಿತ್ತು. ಹಾಸನ ಕಡೆಯಿಂದ ಯೂಟರ್ನ್ ಆಗುತ್ತಿದ್ದ ಟ್ರ್ಯಾಕ್ಟರಿಗೆ ಕಾರು ಡಿಕ್ಕಿಯಾಗಿದೆ. ಕಾರಿನಲ್ಲಿದ್ದವರನ್ನು ಹಳ್ಳಿ ಹೈದ ಪ್ಯಾಟೆಗ್ ಬಂದ ಕಾರ್ಯಕ್ರಮದ ತಂಡದವರು ಎನ್ನಲಾಗಿದೆ. ಮೇಬಿನಾ ಸೇರಿದಂತೆ ಮೂವರು ಕೊಡಗಿನ ಸೋಮವಾರಪೇಟೆಗೆ ತೆರಳುತ್ತಿದ್ದರು ಎಂಬ ಮಾಹಿತಿ ಲಭಿಸಿದೆ. ಬೆಳ್ಳೂರು ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಪ್ಯಾಟೆ ಹುಡ್ಗೀರು ಹಳ್ಳಿ ಲೈಫು ರಿಯಾಲಿಟಿ ಶೋ 4ರ ವಿನ್ನರ್ ಆಗಿ ಮೆಬಿನಾ ಹೊರ ಹೊಮ್ಮಿದ್ದರು. ಸೀಸನ್ ಅಲ್ಲಿ ಹೆಚ್ಚು ಬಾರಿ ಮಹಾರಾಣಿಯಾಗಿ ಆಯ್ಕೆ ಆಗಿದ್ದರು. ರಿಯಾಲಿಟಿ ಶೋ ವಿನ್ನರ್ ಆಗಿ 7 ಲಕ್ಷ ರೂ. ಬಹುಮಾನ ಪಡೆದಿದ್ದರು. ಮಾಡೆಲ್ ಆಗಿದ್ದ ಮೆಬಿನಾ ಸಾಕಷ್ಟು ಖ್ಯಾತಿ ಪಡೆದಿದ್ದರು.

Comments

Leave a Reply

Your email address will not be published. Required fields are marked *