ಪೋರ್ನ್ ವಿಡಿಯೋ ಕಳುಹಿಸಿ ಕಿರುಕುಳ- ಹನಿ ಟ್ರ್ಯಾಪ್ ಮೂಲಕ ಆರೋಪಿಯನ್ನು ಬಲೆಗೆ ಬೀಳಿಸಿದ್ಲು

– ಹಲವು ನಂಬರ್ ಗಳಿಂದ ಯುವತಿಗೆ ಕರೆ ಮಾಡಿ ಹಿಂಸೆ

ಚೆನ್ನೈ: ಹಲವು ನಂಬರ್ ಗಳಿಂದ ಕರೆ ಮಾಡಿ, ಪೋರ್ನ್ ವಿಡಿಯೋ ಕಳುಹಿಸಿ ಚಿತ್ರ ಹಿಂಸೆ ನೀಡುತ್ತಿದ್ದ ಕಾಮುಕನಿಗೆ ಮಹಿಳೆ ತಕ್ಕ ಪಾಠ ಕಲಿಸಿದ್ದು, ಹನಿ ಟ್ರ್ಯಾಪ್ ಮೂಲಕವೇ ಆರೋಪಿಯನ್ನು ಬಲೆಗೆ ಬೀಳಿಸಿದ್ದಾಳೆ.

ತಮಿಳುನಾಡಿನ ಚೆನ್ನೈನಲ್ಲಿ ಘಟನೆ ನಡೆದಿದ್ದು, ಆರೋಪಿಯನ್ನು 29 ವರ್ಷದ ವಿಮಲ್‍ರಾಜ್ ಎಂದು ಗುರುತಿಸಲಾಗಿದೆ. ಈತ ಇ-ಕಾಮರ್ಸ್ ಕಂಪನಿಯಲ್ಲಿ ಡೆಲಿವರಿ ಬಾಯ್ ಆಗಿದ್ದಾನೆ. ಕುಟುಂಬದ ಸದಸ್ಯರ ಸಹಾಯದಿಂದ ಮಹಿಳೆ ಕಾಮುಕನನ್ನು ಬಲೆಗೆ ಬೀಳಿಸಿದ್ದಾಳೆ. ಶ್ರೀನಿಧಿ (ಹೆಸರು ಬದಲಾಯಿಸಲಾಗಿದೆ) ಪತಿಯೊಂದಿಗೆ ಜಗಳವಾಡಿಕೊಂಡು ತವರು ಮನೆ ಸೇರಿದ್ದು, ಕಳೆದ ನಾಲ್ಕು ವರ್ಷಗಳಿಂದ ತಮ್ಮ ಕುಟುಂಬದ ಸದಸ್ಯರೊಂದಿಗೆ ವಾಸಿಸುತ್ತಿದ್ದರು.

ಆರೋಪಿ ವಿರುದ್ಧ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣದಡಿ ಹಾಗೂ ಐಟಿ ಕಾಯ್ದೆಯ ವಿವಿಧ ಸೆಕ್ಷನ್‍ಗಳಡಿ ಪ್ರಕರಣ ದಾಖಲಿಸಲಾಗಿದ್ದು, ವಿಮಲ್‍ರಾಜನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಬಲೆ ಬೀಸಿದ್ದು ಹೇಗೆ?
ಆಗಸ್ಟ್ 4ರಂದು ಮಹಿಳೆಗೆ ಮೊದಲ ಕರೆ ಬಂದಿದ್ದು, ಈ ವೇಳೆ ಆರೋಪಿ ಅಶ್ಲೀಲವಾಗಿ ಮಾತನಾಡಿದ್ದಾನೆ. ನಂತರ ಮಹಿಳೆ ಕರೆ ಕಟ್ ಮಾಡಿದ್ದು, ಆರೋಪಿ ಬೇರೆ ನಂಬರ್ ಗಳಿಂದ ಕರೆ ಮಾಡಿ ಹಿಂಸೆ ನೀಡಿದ್ದಾನೆ. ಅಲ್ಲದೆ ಆಗಸ್ಟ್ 8ರಂದು ಮಹಿಳೆಯ ವಾಟ್ಸಪ್‍ಗೆ ಪೋರ್ನ್ ವಿಡಿಯೋ ಕಳುಹಿಸಿ ವಿಕೃತಿ ಮೆರೆದಿದ್ದಾನೆ.

ಇಷ್ಟೆಲ್ಲ ನಡೆದ ಬಳಿಕ ಮಹಿಳೆ ಮನೆಯವರೊಂದಿಗೆ ಈ ಕುರಿತು ಚರ್ಚಿಸಿದ್ದು, ಆಕೆಯ ಪೋಷಕರು ಸೇರಿಕೊಂಡು ಆರೋಪಿಯನ್ನು ಹಿಡಿಯಲು ಪ್ಲಾನ್ ಮಾಡಿದ್ದಾರೆ. ನಂತರ ಮಹಿಳೆ ಮಾತನಾಡಬೇಕು, ಮನೆಗೆ ಬಾ ಎಂದು ಆರೋಪಿಯನ್ನು ಕರೆದಿದ್ದಾಳೆ.  ಇದಕ್ಕೆ ಆರೋಪಿ ಸಹ ಒಪ್ಪಿದ್ದಾನೆ.

ಆರೋಪಿ ಮಹಿಳೆಯ ಮನೆಗೆ ಭೇಟಿ ನೀಡಲು ಸಮಯ ನಿಗದಿ ಮಾಡಿಕೊಂಡಿದ್ದು, ಆರೋಪಿಯನ್ನು ಹಿಡಿಯಲು ಕುಟುಂಬಸ್ಥರು ರೂಮ್‍ನಲ್ಲಿ ಅಡಗಿ ಕುಳಿತಿದ್ದಾರೆ. ಆರೋಪಿ ವಿಮಲ್‍ರಾಜ್ ಮನೆಗೆ ಆಗಮಿಸುತ್ತಿದ್ದಂತೆ ಕುಟುಂಬಸ್ಥರೆಲ್ಲರೂ ಸೇರಿ ಹಿಗ್ಗಾಮುಗ್ಗಾ ತಳಿಸಿದ್ದಾರೆ. ನಂತರ ಪೊಲೀಸ್ ಕಂಟ್ರೋಲ್ ರೂಮ್‍ಗೆ ಕರೆ ಮಾಡಿದ್ದಾರೆ. ಪೊಲೀಸರು ಮನೆಗೆ ಆಗಮಿಸಿ ಆರೋಪಿಯನ್ನು ಠಾಣೆಗೆ ಎಳೆದೊಯ್ದಿದ್ದಾರೆ.

ಮಹಿಳೆಯರ ನಂಬರ್ ಪಡೆದು ಬೇಕಾಬಿಟ್ಟಿಯಾಗಿ ಅವರಿಗೆ ಕರೆ ಮಾಡಿ ಅಶ್ಲೀಲವಾಗಿ ಮಾತನಾಡಿ, ವಿಡಿಯೋ ಕಳುಹಿಸುತ್ತಿದ್ದ. ಈ ಮೂಲಕ ಮಹಿಳೆಯರಿಗೆ ಕಿರುಕುಳ ನೀಡುತ್ತಿದ್ದ ಎಂದು ಪೊಲೀಸ್ ವಿಚಾರಣೆ ವೇಳೆ ಆರೋಪಿ ತಿಳಿಸಿದ್ದಾನೆ.

ಮಹಿಳೆಯ ಪತಿಯ ಕೈವಾಡವೂ ಇರಬಹುದು ಎಂದು ಮಹಿಳೆಯ ಪೋಷಕರು ಆರೋಪಿಸಿದ್ದು, ಈ ಕುರಿತು ಮಹಿಳೆಯ ಪತಿಯನ್ನೂ ವಿಚಾರಣೆ ನಡೆಸುವುದಾಗಿ ಪೊಲೀಸರು ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *