ಪೊಲೀಸರಿಂದ ರಾಧೆ-ಶ್ಯಾಮ್‍ಗೆ ಮಾಸ್ಕ್

ಹೈದರಾಬಾದ್: ಟಾಲಿವುಡ್ ಯಂಗ್ ರೆಬೆಲ್ ಸ್ಟಾರ್ ಪ್ರಭಾಸ್ ಅವರ 20ನೇ ಸಿನಿಮಾ ರಾಧೆ ಶ್ಯಾಮ್ ಸಾಕಷ್ಟು ಸದ್ದು ಮಾಡುತ್ತಿದ್ದು, ಶುಕ್ರವಾರ ಪೋಸ್ಟರ್ ಬಿಡುಗಡೆಯಾದಾಗಿನಿಂದ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಸೆನ್ಸೇಶನ್ ಕ್ರಿಯೇಟ್ ಮಾಡಿದೆ. ಆದರೆ ಇದೇ ಪೋಸ್ಟರ್ ಮೂಲಕ ಪೊಲೀಸರು ಕೊರೊನಾ ಕುರಿತು ಜಾಗೃತಿ ಮೂಡಿಸುತ್ತಿದ್ದಾರೆ.

ಈ ಪೋಸ್ಟರ್ ನಲ್ಲಿ ಪ್ರಭಾಸ್ ಮತ್ತು ಪೂಜಾ ಹೆಗ್ಡೆ ರೊಮ್ಯಾಂಟಿಕ್ ಪೋಸ್‍ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ರಾಧೆ ಶ್ಯಾಮ್ ಚಿತ್ರದ ಪೋಸ್ಟರ್ ಮೂಲಕವೇ ಪೊಲೀಸರು ಸಹ ಕೊರೊನಾ ಕುರಿತು ಜಾಗೃತಿ ಮೂಡಿಸುತ್ತಿದ್ದಾರೆ. ಚಿತ್ರದ ಪೋಸ್ಟರ್‍ನ್ನು ಎಡಿಟ್ ಮಾಡಿ ಪ್ರಭಾಸ್ ಹಾಗೂ ಪೂಜಾ ಹೆಗ್ಡೆ ಫೋಟೋಗೆ ಮಾಸ್ಕ್ ಹಾಕಿದ್ದಾರೆ. ಈ ಮೂಲಕ ಎಲ್ಲೇ ಹೊರಗಡೆ ಹೋಗಬೇಕಿದ್ದರೂ ಮಾಸ್ಕ್ ಧರಿಸಿಯೇ ಹೋಗಿ ಎಂದು ನಾಗಾವ್ ಪೊಲೀಸರು ಮನವಿ ಮಾಡಿದ್ದಾರೆ.

ಹೊರಗಡೆ ಹೋಗುವಾಗಲೆಲ್ಲ ಮಾಸ್ಕ್ ಧರಿಸಿ ಹೋಗುವಂತೆ ನಿಮ್ಮ ಪ್ರೀತಿ ಪಾತ್ರರಿಗೆ ಹೇಳಿ. ನಾವು ಪ್ರಭಾಸ್ ಅವರನ್ನು ಸಂಪರ್ಕಿಸಲು ಯತ್ನಿಸಿದೆವು ಆದರೆ ಸಾಧ್ಯವಾಗಲಿಲ್ಲ. ಇದೀಗ ಫೋಟೋಶಾಪ್ ಮೂಲಕ ಅವರ ಫೋಟೋ ರಚಿಸಿದ್ದೇವೆ ಎಂದು ಬರೆದು ರಾಧೆ ಶ್ಯಾಮ್ ಚಿತ್ರದ ಪೋಸ್ಟರ್ ಹಾಕಿ ಕೆಳಗಡೆ ಪ್ರಭಾಸ್ ಮತ್ತು ಪೂಜಾ ಹೆಗ್ಡೆ ಫೋಟೋ ಹಾಕಿದ್ದಾರೆ.

ಈ ಪೋಸ್ಟ್ ಸಖತ್ ವೈರಲ್ ಆಗಿದ್ದು, ನೆಟ್ಟಿಗರು ಕಮೆಂಟ್ ಮಾಡುವ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ ಅಲ್ಲದೆ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ಮಾಸ್ಕ್ ಒಕೆ, ಸಾಮಾಜಿಕ ಅಂತರ ಎಲ್ಲಿ ಎಂದು ಪ್ರಶ್ನಿಸಿದ್ದಾರೆ. ಹೀಗೆ ವಿವಿಧ ಬಗೆಯ ಪ್ರಶ್ನೆಗಳ ಮೂಲಕ ಚರ್ಚೆ ನಡೆಸುತ್ತಿದ್ದಾರೆ.

ನಟ ಪ್ರಭಾಸ್ ಅಭಿನಯದ 20ನೇ ಸಿನಿಮಾ ಕುರಿತ ಅಪ್‍ಡೇಟ್‍ಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದರು. ಅಲ್ಲದೆ ಕೊರೊನಾ, ಲಾಕ್‍ಡೌನ್‍ನಿಂದಾಗಿ ಸಿನಿಮಾ ಕೆಲಸಗಳು ಸ್ಥಗಿತಗೊಂಡಿದ್ದರಿಂದ ಯಾವುದೇ ಸುದ್ದಿ ಹೊರ ಬಿದ್ದಿರಲಿಲ್ಲ. ಶುಕ್ರವಾರ ಪ್ರಭಾಸ್ ತಮ್ಮ ಅಭಿಮಾನಿಗಳಿಗೆ ಸಂತಸದ ಸುದ್ದಿಯೊಂದನ್ನು ತಿಳಿಸಿದ್ದು, ತಮ್ಮ 20ನೇ ಸಿನಿಮಾ ರಾಧೆ ಶ್ಯಾಮದ ಪೋಸ್ಟರ್ ಬಿಡುಗಡೆ ಮಾಡಿದ್ದಾರೆ. ಬಿಡುಗಡೆ ಮಾಡುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ಈ ಪೋಸ್ಟ್ ಸಖತ್ ವೈರಲ್ ಆಗಿತ್ತು. ಇದೀಗ ಮತ್ತೊಂದು ಕಾರಣಕ್ಕೆ ರಾಧೆ ಶ್ಯಾಮ್ ಪೋಸ್ಟರ್ ಚರ್ಚೆಗೆ ಗ್ರಾಸವಾಗಿದೆ.

ಸಿನಿಮಾ ಸೆಟ್ಟೇರಿದಾಗಿನಿಂದ ಚಿತ್ರದ ಬಗ್ಗೆ ಯಾವುದೇ ಮಾಹಿತಿ ಬಿಟ್ಟುಕೊಟ್ಟಿರಲಿಲ್ಲ. ಅಲ್ಲದೆ ಸಿನಿಮಾದ ಟೈಟಲ್ ಸಹ ರಿವೀಲ್ ಮಾಡಿರಲಿಲ್ಲ. ಈಗಾಗಲೇ ಬಹುತೇಕ ಚಿತ್ರೀಕರಣ ಸಹ ಮುಗಿದಿದೆ. ಆದರೂ ಚಿತ್ರದ ಬಗ್ಗೆ ಮಾಹಿತಿ ಬಹಿರಂಗ ಪಡಿಸಿಲ್ಲ ಎಂದು ಅಭಿಮಾನಿಗಳು ಬೇಸರ ವ್ಯಕ್ತಪಡಿಸುತ್ತಿದ್ದರು. ಹೀಗಾಗಿ ಅಭಿಮಾನಿಗಳ ಒತ್ತಾಯದ ಮೇರೆಗೆ ಸಿನಿಮಾತಂಡ ಚಿತ್ರದ ಫಸ್ಟ್ ಲುಕ್ ಮತ್ತು ಶೀರ್ಷಿಕೆ ಬಿಡುಗಡೆ ಮಾಡಿದೆ.

ಶುಕ್ರವಾರ ಸುಂದರವಾದ ಫಸ್ಟ್ ಲುಕ್ ಪೋಸ್ಟರ್ ಮೂಲಕ ಚಿತ್ರದ ಟೈಟಲ್ ಅನೌನ್ಸ್ ಮಾಡಲಾಗಿದ್ದು, ಪೋಸ್ಟರ್‍ನಲ್ಲಿ ಪೂಜಾ ಮತ್ತು ಪ್ರಭಾಸ್ ರೊಮ್ಯಾಂಟಿಕ್ ಲುಕ್‍ನಲ್ಲಿ ಪೋಸ್ ನೀಡಿದ್ದಾರೆ. ಪ್ರಭಾಸ್ ಮತ್ತು ಪೂಜಾ ಲುಕ್ ಜೊತೆಗೆ ಬ್ಯಾಕ್ ಡ್ರಾಪ್ ಸಹ ಗಮನ ಸೆಳೆಯುತ್ತಿದೆ. ಈ ಪೋಸ್ಟರ್ ಚಿತ್ರದ ಮೇಲಿನ ನಿರೀಕ್ಷೆಯನ್ನ ಮತ್ತಷ್ಟು ಹೆಚ್ಚಿಸಿದೆ. ಅದೇ ರೀತಿ ಪೊಲೀಸರ ಕೊರೊನಾ ಕುರಿತು ಜಾಗೃತಿ ಮೂಡಿಸುವ ಐಡಿಯಾ ಸಹ ಗಮನ ಸೆಳೆಯುತ್ತಿದೆ.

Comments

Leave a Reply

Your email address will not be published. Required fields are marked *