ಪೆಟ್ರೋಲ್‌, ಡೀಸೆಲ್‌ ಜಿಎಸ್‌ಟಿ ವ್ಯಾಪ್ತಿಗೆ ಬರುತ್ತಾ – ಪ್ರಶ್ನೆಗೆ ಉತ್ತರ ನೀಡಿದ ಸೀತಾರಾಮನ್‌

ನವದೆಹಲಿ: ಪೆಟ್ರೋಲ್‌, ಡೀಸೆಲ್‌ ಸರಕು ಮತ್ತು ಸೇವಾ ತೆರಿಗೆ(ಜಿಎಸ್‌ಟಿ) ವ್ಯಾಪ್ತಿಗೆ ಬರುತ್ತಾ ಎಂಬ ಪ್ರಶ್ನೆಗೆ ಕೇಂದ್ರ ಸರ್ಕಾರ ಈಗ ಉತ್ತರ ನೀಡಿದೆ.

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಲೋಕಸಭೆಗೆ ನೀಡಿದ ಲಿಖಿತ ಮಾಹಿತಿಯಲ್ಲಿ, ಪೆಟ್ರೋಲ್, ಡೀಸೆಲ್, ಕಚ್ಚಾ ತೈಲ, ವಿಮಾನ ಇಂಧನ (ಎಟಿಎಫ್) ಮತ್ತು ನೈಸರ್ಗಿಕ ಅನಿಲವನ್ನು ಜಿಎಸ್‌ಟಿ ವ್ಯಾಪ್ತಿಗೆ ತರುವ ಪ್ರಸ್ತಾವ ಈ ಹಂತದಲ್ಲಿ ಇಲ್ಲ ಎಂದು ತಿಳಿಸಿದ್ದಾರೆ.

ಈ ಉತ್ಪನ್ನಗಳನ್ನು ಯಾವಾಗ ಜಿಎಸ್‌ಟಿ ವ್ಯಾಪ್ತಿಗೆ ಸೇರಿಸಬೇಕು ಎಂಬುದನ್ನು ಜಿಎಸ್‌ಟಿ ಮಂಡಳಿ ಶಿಫಾರಸು ಮಾಡಬೇಕು ಎಂಬ ಕಾನೂನು ಇದೆ. ಆದರೆ ರಾಜ್ಯಗಳಿಗೂ ಪ್ರಾತಿನಿಧ್ಯ ಇರುವ ಜಿಎಸ್‌ಟಿ ಮಂಡಳಿ ಇಲ್ಲಿಯವರೆಗೆ ಈ ಉತ್ಪನ್ನಗಳನ್ನು ಜಿಎಸ್‌ಟಿ ವ್ಯಾಪ್ತಿಗೆ ತರಬೇಕು ಎಂಬ ಶಿಫಾರಸು ಮಾಡಿಲ್ಲ ಎಂದು ತಿಳಿಸಿದ್ದಾರೆ.

ಆದಾಯ ಸಂಗ್ರಹದ ಮೇಲೆ ಬೀಳುವ ಪರಿಣಾಮ ಸೇರಿದಂತೆ ಎಲ್ಲ ಬಗೆಯ ಅಂಶಗಳನ್ನು ಗಮನದಲ್ಲಿ ಇಟ್ಟುಕೊಂಡು ಈ ಉತ್ಪನ್ನಗಳನ್ನು ಯಾವಾಗಿನಿಂದ ಜಿಎಸ್‌ಟಿ ವ್ಯವಸ್ಥೆ ಅಡಿಯಲ್ಲಿ ತರಬಹುದು ಎಂಬುದನ್ನು ಜಿಎಸ್‌ಟಿ ಮಂಡಳಿಯು ಪರಿಶೀಲಿಸಬಹುದು ಎಂದು ಅವರು ತಿಳಿಸಿದ್ದಾರೆ.

ಒಂದು ಲೀಟರ್‌ ಪೆಟ್ರೋಲ್‌ ಮೇಲೆ 1 ವರ್ಷದ ಹಿಂದೆ 19.98 ರೂ. ಇದ್ದ ಅಬಕಾರಿ ಸುಂಕ 32.90 ರೂ.ಗೆ ಏರಿಕೆಯಾಗಿದೆ. ಡೀಸೆಲ್‌ ಮೇಲಿದ್ದ 15.83 ರೂ. ಅಬಕಾರಿ ಸುಂಕ 31.8 ರೂ.ಗೆ ಹೆಚ್ಚಳವಾಗಿದೆ ಎಂದು ಹಣಕಾಸು ಖಾತೆ ರಾಜ್ಯ ಸಚಿವ ಅನುರಾಗ್ ಸಿಂಗ್ ಠಾಕೂರ್ ಅವರು ಇನ್ನೊಂದು ಪ್ರಶ್ನೆಗೆ ಉತ್ತರವಾಗಿ ತಿಳಿಸಿದ್ದಾರೆ.

ಕಿಡಿಕಾರಿದ್ದ ಎಚ್‌ಡಿಕೆ: ತೈಲ ದರ ಏರಿಕೆ ವಿರುದ್ಧ ಜನರ ಆಕ್ರೋಶವನ್ನೇ ಬಳಸಿಕೊಂಡು, ದರ ಇಳಿಸುವ ನೆಪದಲ್ಲಿ ಪೆಟ್ರೋಲಿಯಂ ಉತ್ಪನ್ನಗಳನ್ನು ಜಿಎಸ್‌ಟಿಗೆ ಸೇರಿಸುವ ಹುನ್ನಾರವನ್ನು ಕೇಂದ್ರ ಸರ್ಕಾರ ವ್ಯವಸ್ಥಿತವಾಗಿ ನಡೆಸುತ್ತಿದೆ. ಈ ಬಗೆಗಿನ ಚರ್ಚೆಗಳನ್ನು ಹುಟ್ಟುಹಾಕುತ್ತಿದೆ. ಪೆಟ್ರೋಲಿಯಂ ಉತ್ಪನ್ನಗಳೇನಾದರೂ ಜಿಎಸ್‌ಟಿಗೆ ಒಳಪಟ್ಟರೆ ಅದು ರಾಜ್ಯಗಳ ಪಾಲಿಗೆ ಮರಣಶಾಸನವಾಗಲಿದೆ ಎಂದು ಮಾಜಿ ಸಿಎಂ ಎಚ್‌ಡಿ ಕುಮಾರಸ್ವಮಿ ಆಕ್ರೋಶ ವ್ಯಕ್ತಪಡಿಸಿದ್ದರು.

ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ಸೆಸ್‌ ರಾಜ್ಯಗಳ ಪ್ರಮುಖ ಆದಾಯದ ಮೂಲಗಳಲ್ಲೊಂದು. ಕೇಂದ್ರ ಸರ್ಕಾರ ಮಿತಿ ಮೀರಿದ ತೆರಿಗೆ ವಿಧಿಸುತ್ತದೆ ಮತ್ತು ರಾಜ್ಯಗಳಿಗಿಂತಲೂ ಅಧಿಕ ಆದಾಯವನ್ನು ಸಂಗ್ರಹಿಸುತ್ತದೆ. ಈಗ ಅದೂ ಸಾಲದು ಎಂಬಂತೆ ಪೆಟ್ರೋಲಿಯಂ ಅನ್ನು ಜಿಎಸ್‌ಟಿಗೆ ತಂದು ರಾಜ್ಯಗಳು ಪಡೆಯುತ್ತಿರುವ ಆದಾಯವನ್ನೂ ಲಪಟಾಯಿಸುವ ತಂತ್ರವನ್ನು ಮಾಡಿದೆ. ರಾಜ್ಯಗಳು ಜಿಎಸ್‌ಟಿ ವ್ಯವಸ್ಥೆಗೆ ಒಪ್ಪಿಗೆ ನೀಡಿದ ನಂತರ ನೀಡಬೇಕಿದ್ದ ಪಾಲು, ಪರಿಹಾರವನ್ನು ಕೇಂದ್ರ ಈ ವರೆಗೆ ಸರಿಯಾಗಿ ಕೊಟ್ಟೇ ಇಲ್ಲ. ಸಾವಿರಾರು ಕೋಟಿ ಬಾಕಿಯನ್ನು ಇನ್ನೂ ಉಳಿಸಿಕೊಂಡಿದೆ. ಬಾಕಿಗಾಗಿ ರಾಜ್ಯಗಳು ಕೇಂದ್ರವನ್ನು ಬೇಡಾಡಿ ಬಸವಳಿದಿವೆ. ಈಗ ಪೆಟ್ರೋಲಿಯಂ ಆದಾಯವನ್ನು ಕೇಂದ್ರಕ್ಕೆ ಒಪ್ಪಿಸಿದರೆ ರಾಜ್ಯಗಳ ಪಾಡು ಶೋಚನೀಯವಾಗಲಿದೆ ಎಂದು ಎಚ್‌ಡಿಕೆ ಕಿಡಿಕಾರಿದ್ದರು.

 

Comments

Leave a Reply

Your email address will not be published. Required fields are marked *