ಪುಟ್ಟ ಮಕ್ಕಳೊಂದಿಗೆ ಹೊಲದಲ್ಲೇ ರಾತ್ರಿ ಕಳೆದ ಪ್ರವಾಸಿ ಕಾರ್ಮಿಕ ಕುಟುಂಬ

– ಅಮಾನವೀಯತೆ ಪ್ರದರ್ಶಿಸಿದ ತಹಶೀಲ್ದಾರ್

ಯಾದಗಿರಿ: ಮಹಾರಾಷ್ಟ್ರದಿಂದ ಬಂದ ಕೂಲಿ ಕಾರ್ಮಿಕನ ಕುಟುಂಬವೊಂದನ್ನು ಕ್ವಾರೆಂಟೈನ್ ಮಾಡದೆ, ಸುರಪುರ ತಹಶೀಲ್ದಾರ್ ನಿಂಗಣ್ಣ ಉದ್ಧಟತನ ತೋರಿದ್ದಾರೆ. ಪರಿಣಾಮ ಅತ್ತ ಊರಿಗೂ ಹೋಗದೆ ಇತ್ತ ಕ್ವಾರೆಂಟೈನ್ ಆಗದೇ ಕುಟುಂಬ ಜಮೀನೊಂದರಲ್ಲಿ ಇಡೀ ರಾತ್ರಿ ಕಳೆದ ಅಮಾನವೀಯ ಘಟನೆ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಶೇಖಾಪುರದಲ್ಲಿ ನಡೆದಿದೆ.

ಗುರುವಾರ ಮಹಾರಾಷ್ಟ್ರದಿಂದ ಬಂದ ಕೂಲಿ ಕಾರ್ಮಿಕ ಕುಟುಂಬವೊಂದು ಶೇಖಾಪುರ ಗ್ರಾಮಕ್ಕೆ ಬಂದಿದೆ. ಕುಟುಂಬದ ಸದಸ್ಯರು ಗ್ರಾಮಕ್ಕೆ ಬರುವುದಕ್ಕೆ ಗ್ರಾಮಸ್ಥರ ವಿರೋಧ ವ್ಯಕ್ತವಾಗಿದೆ. ಹೀಗಾಗಿ ಕಾರ್ಮಿಕ ಕುಟುಂಬ ತಹಶೀಲ್ದಾರ್ ನಿಂಗಣ್ಣನ್ನು ಭೇಟಿ ಮಾಡಿದೆ. ಸಂಜೆಯವರೆಗೆ ಕುಟುಂಬದ ಸದಸ್ಯರನ್ನು ತನ್ನ ಕಚೇರಿಯಲ್ಲಿ ಕಾಯಿಸಿದ ನಿಂಗಣ್ಣ ಬಳಿಕ ನಿಮಗೆ ಕ್ವಾರೆಂಟೈನ್ ಮಾಡಲು ಜಾಗವಿಲ್ಲ. ನಿಮ್ಮ ದಾರಿ ನೀವು ನೋಡಿ ಕೊಳ್ಳಿ ಅಂತ ಅಮಾನವೀಯತೆ ಪ್ರದರ್ಶನ ಮಾಡಿದ್ದಾರೆ.

ಇದರಿಂದ ಬೇರೆ ದಾರಿಯಿಲ್ಲದೆ ಕಾರ್ಮಿಕರ ಕುಟುಂಬ ಚಿಕ್ಕ ಮಕ್ಕಳ ಜೊತೆಗೆ ಶಾಖಾಪುರ ಗ್ರಾಮದ ಸಮೀಪದ ಜಮೀನಿನಲ್ಲಿ ರಾತ್ರಿ ಕಳೆದಿದೆ. ಇದು ತಾಲೂಕಿನ ಪ್ರಜ್ಞಾವಂತ ನಾಗರಿಕ ಆಕ್ರೋಶಕ್ಕೆ ಕಾರಣವಾಗಿದೆ. ಸುರಪುರ ತಹಶೀಲ್ದಾರ್ ನಿಂಗಣ್ಣ ಉದ್ಧಟತನ ಇದೇ ಮೊದಲೇನಲ್ಲ, ಹಲವಾರು ಬಾರಿ ಈ ರೀತಿಯ ವರ್ತನೆ ತೋರಿದ್ದಾರೆ.

ಸುರಪುರ ತಾಲೂಕಿನಲ್ಲಿ ಆರಂಭಿಸಿರುವ ಕ್ವಾರೆಂಟೈನ್ ಕೇಂದ್ರಗಳಲ್ಲಿ ಊಟವಿಲ್ಲದೆ ಜನ ಪರದಾಡುತ್ತಿದ್ದರು. ಈ ಬಗ್ಗೆ ತಹಶೀಲ್ದಾರ್ ಮಾತ್ರ ತಲೆ ಕೆಡಿಸಿಕೊಳ್ಳುತ್ತಿಲ್ಲ. ಇಂತಹ ಅಮಾನವೀಯ ತಹಶೀಲ್ದಾರ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

Comments

Leave a Reply

Your email address will not be published. Required fields are marked *