ಪುಟ್ಟ ಕಂದನ ಜೊತೆ ಮಗುವಾದ ಅಪ್ಪು- ಬುಟ್ಟ ಬೊಮ್ಮ ಹಾಡಿಗೆ ಡ್ಯಾನ್ಸ್

ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರು ಪುಟ್ಟ ಕಂದಮ್ಮನ ಜೊತೆ ಬುಟ್ಟ ಬೊಮ್ಮ ಹಾಡಿಗೆ ಡ್ಯಾನ್ಸ್ ಮಾಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಪುನೀತ್ ರಾಜ್‍ಕುಮಾರ್ ಅವರು ಸರಳ ವ್ಯಕ್ತಿತ್ವವಿರುವ ನಟ ಎಂಬುದು ಇಡೀ ಕರುನಾಡಿಗೆ ಗೊತ್ತು. ಅಪ್ಪು ಅಪ್ಪನ ಹಾಗೆಯೇ ಅಭಿಮಾನಿಗಳಲ್ಲಿ ದೇವರನ್ನು ಕಾಣುತ್ತಾರೆ. ಜೊತೆಗೆ ಅವರಿಗೆ ಮಕ್ಕಳು ಎಂದರೆ ಬಹಳ ಇಷ್ಟ, ಹೀಗಾಗಿ ತೆಲುಗು ಪುಟ್ಟ ಪೋರಿಯ ಜೊತೆಗೆ ಬುಟ್ಟಬೊಮ್ಮ ಹಾಡಿದೆ ಹೆಜ್ಜೆ ಹಾಕಿದ್ದಾರೆ.

ಅಪ್ಪು ಪುಟ್ಟ ಹೆಣ್ಣುಮಗುವಿನ ಜೊತೆ ಡ್ಯಾನ್ಸ್ ಮಾಡಿರುವ ವಿಡಿಯೋವನ್ನು ಅವರ ಅಭಿಮಾನಿಗಳು ಟ್ವಿಟ್ಟರ್‍ನಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ಮಗುವಿನ ಜೊತೆ ಮಗುವಾದ ಅಪ್ಪು ಎಂದು ಬರೆದುಕೊಂಡಿದ್ದಾರೆ. ಕೇವಲ 26 ಸೆಕೆಂಡ್ ಇರುವ ಈ ವಿಡಿಯೋದಲ್ಲಿ ಅಪ್ಪು ಮಗುವನ್ನು ಪ್ರೀತಿಯಿಂದ ಮಾತನಾಡಿಸಿ, ಬುಟ್ಟಬೊಮ್ಮ ಹಾಡಿನ ಸ್ಟೆಪ್ ಹಾಕುತ್ತಾರೆ. ಜೊತೆಗೆ ಇದು ಯಾವ ಹಾಡು ಎಂದು ಮಗುವನ್ನು ಪ್ರಶ್ನೆ ಮಾಡುತ್ತಾರೆ. ಆಗ ಪಾಪು ಬುಟ್ಟ ಬೊಮ್ಮ ಎಂದಾಗ ಅಪ್ಪು ಖುಷಿಯಿಂದ ನಗುವುದನ್ನು ವಿಡಿಯೋದಲ್ಲಿ ಕಾಣಬಹುದು.

ವಿಡಿಯೋದಲ್ಲಿ ಕಾಣಿಸುವ ಈ ಮಗು ಯಾವುದು ಎಂದು ಮಾಹಿತಿ ಸಿಕ್ಕಿಲ್ಲ. ಆದರೆ ವಿಡಿಯೋದಲ್ಲಿ ಈ ಮಗು ತೆಲುಗು ಮಾತನಾಡುತ್ತಿರುವುದನ್ನು ಕಾಣಬಹುದು. ಈ ಮಗು ಅಪ್ಪು ಅವರನ್ನು ತಮ್ಮ ಪೋಷಕರ ಜೊತೆ ಭೇಟಿಯಾಗಿದೆ. ಈ ವೇಳೆ ಮಗುವಿನ ಜೊತೆ ಆಟವಾಡಿರುವ ಅಪ್ಪು, ಮಗುವಿನ ಜೊತೆ ಡ್ಯಾನ್ಸ್ ಮಾಡಿದ್ದಾರೆ. ಇದನ್ನು ಸ್ಥಳದಲ್ಲೇ ಇದ್ದ ಯಾರೋ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಪುನೀತ್ ಅವರಿಗೆ ಮಕ್ಕಳು ಎಂದರೆ ಇಷ್ಟ. ಅವರು ಎಲ್ಲೇ ಹೋದರು ಮಕ್ಕಳು ಎತ್ತಿಕೊಂಡು ಅಪ್ಪಿ ಮುದ್ದಾಡುತ್ತಾರೆ. ಕಳೆದ ವರ್ಷ ನಟಸಾರ್ವಭೌಮ ಶೂಟಿಂಗ್ ಲೋಕೇಷನ್‍ಗೆ ಹೋಗುವ ವೇಳೆ ಅಪ್ಪು ಚಿಕ್ಕಮಗಳೂರಿನ ಅತ್ತಿಬೆಲೆ ಗ್ರಾಮಕ್ಕೆ ಹೋಗಿದ್ದರು. ಈ ಊರಿನಲ್ಲಿ ಅಪ್ಪು `ಬೆಟ್ಟದ ಹೂವು’ ಚಿತ್ರವನ್ನು ಚಿತ್ರೀಕರಣ ಮಾಡಿದ್ದರು. ಈ ವೇಳೆ ಅಲ್ಲಿಗೆ ಹೋದಾಗ ಅಲ್ಲಿನ ಗ್ರಾಮಸ್ಥರನ್ನು ಮಾತನಾಡಿಸಿ ಅಲ್ಲೂ ಕೂಡ ಮಗುವನ್ನು ಎತ್ತಿಕೊಂಡು ಫೋಟೋ ಕ್ಲಿಕ್ಕಿಸಿಕೊಂಡಿದ್ದರು.

ಕೊರೊನಾ ಲಾಕ್‍ಡೌನ್ ನಂತರ ಮನೆಯಲ್ಲೇ ಇದ್ದ ಅಪ್ಪು, ಮನೆಯಲ್ಲೇ ವ್ಯಾಯಾಮ ಮಾಡಿ ವಿಡಿಯೋ ಹಂಚಿಕೊಳ್ಳುತ್ತಿದ್ದರು. ಈಗ ಲಾಕ್‍ಡೌನ್ ಸಡಿಲಿಕೆ ಆದ ನಂತರ ಚಿಕ್ಕಮಗಳೂರಿನಲ್ಲಿರುವ ಅಶ್ವಿನಿ ಫಾರ್ಮ್ ಹೌಸ್‍ನಲ್ಲಿ ಸುತ್ತಾಡಿ ಮನಸು ಹಗುರಾಗಿಸಿಕೊಂಡಿದ್ದಾರೆ. ಜೊತೆಗೆ ಹಚ್ಚ ಹಸಿರಿನ ಗಿರಿಯ ಮೇಲೆ ನಿಂತು ಮನಸು ತಂಪು ಮಾಡಿಕೊಂಡಿದ್ದಾರೆ. ಕೈಯಲ್ಲಿ ಕ್ಯಾಮೆರಾ ಹಿಡಿದು ಬೆಸ್ಟ್ ಮೊಮೆಂಟ್ ಅನ್ನು ಕ್ಯಾಪ್ಚರ್ ಮಾಡಿದ್ದಾರೆ.

Comments

Leave a Reply

Your email address will not be published. Required fields are marked *