ಪಿಪಿಇ ಕಿಟ್ ತೆಗೆಯುವಾಗ ಎಡವಟ್ಟು- ನರ್ಸ್‍ಗೆ ತಗುಲಿದೆ ಕೊರೊನಾ

ಬೆಂಗಳೂರು: ಪಿಪಿಇ ಕಿಟ್ ತೆಗೆಯುವಾಗ ಎಡವಟ್ಟು ಮಾಡಿಕೊಂಡ ಪರಿಣಾಮ ಬೆಂಗಳೂರಿನ ನರ್ಸ್ (ರೋಗಿ-928) ಅವರಿಗೆ ಡೆಡ್ಲಿ ಕೊರೊನಾ ಸೋಂಕು ತಗುಲಿದೆ ಎಂಬ ಮಾಹಿತಿ ಮೂಲಗಳಿಂದ ಲಭಿಸಿದೆ.

ಕೋವಿಡ್-19 ವಾರ್ಡಿನಲ್ಲಿ ಕೆಲಸ ಮಾಡುವಾಗ ವೈದ್ಯರು, ವೈದ್ಯಕೀಯ ಸಿಬ್ಬಂದಿ ಸಂಪೂರ್ಣವಾಗಿ ವೈಯಕ್ತಿಕ ಸುರಕ್ಷಾ ಸಾಧನ (ಪಿಪಿಇ ಕಿಟ್) ಅಳವಡಿಸಿಕೊಳ್ಳುತ್ತಾರೆ. ಅಷ್ಟೇ ಅಲ್ಲದೆ ಅದನ್ನು ಜಾಗೃತವಾಗಿ ಬಿಚ್ಚಿ ಎಸೆಯಬೇಕು. ಆದರೆ ನರ್ಸ್ ಪಿಪಿಇ ಕಿಟ್ ಬಿಚ್ಚುವಾಗ ಎಡವಟ್ಟು ಮಾಡಿಕೊಂಡಿದ್ದರು ಎಂದು ಹೇಳಲಾಗುತ್ತಿದೆ.

ಕೊರೊನಾ ಸೋಂಕಿತರ ವಾರ್ಡಿನಲ್ಲಿ ಕೆಲಸ ಮುಗಿಸಿದ ನಂತರ ಪಿಪಿಇ ಕಿಟ್ ಹೊರ ಭಾಗವನ್ನು ಮುಟ್ಟದೇ ತೆಗೆಯಬೇಕು. ಆದರೆ ನರ್ಸ್ ಪಿಪಿಇ ಕಿಟ್‍ನ ಹೊರಭಾಗವನ್ನು ಮುಟ್ಟಿದ್ದರು. ಬಳಿಕ ಮಾಸ್ಕ್ ತೆಗೆಯುವಾಗ ಮೂಗು ಮುಟ್ಟಿಕೊಂಡಿದ್ದರಿಂದ ಸೋಂಕು ತಗುಲಿದೆ ಎನ್ನಲಾಗುತ್ತಿದೆ.

ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸಿದ ಅವರನ್ನು ನಿಯಮದಂತೆ ಹೋಟೆಲ್‍ನಲ್ಲಿ ಕ್ವಾರಂಟೈನ್ ಮಾಡಲಾಗಿತ್ತು. ಈ ವೇಳೆ ಅವರಿಗೆ ಸೋಂಕಿನ ಲಕ್ಷಣಗಳು ಬಂದಿದ್ದವು. ಇದರಿಂದಾಗಿ ಗಂಟಲು ದ್ರವವನ್ನು ಕೋವಿಡ್-19 ಪರೀಕ್ಷೆಗೆ ಕಳಿಸಲಾಗಿತ್ತು. ಬುಧವಾರ ಬಂದ ರಿಪೋರ್ಟ್ ನಲ್ಲಿ ನರ್ಸ್‍ಗೆ ಸೋಂಕು ತಗುಲಿರುವುದು ದೃಢಪಟ್ಟಿತ್ತು. ಸದ್ಯ ಅವರನ್ನು ಪ್ರತ್ಯೇಕವಾಗಿರಿಸಿ ಚಿಕಿತ್ಸೆ ಕೊಡಲಾಗುತ್ತಿದೆ.

Comments

Leave a Reply

Your email address will not be published. Required fields are marked *