– ಪಕ್ಷದ ಬೆನ್ನಿಗೆ ಚೂರಿ ಹಾಕಿದವ್ರಿಗೆ ಮಂತ್ರಿ ಸ್ಥಾನ
ಬೆಂಗಳೂರು: ಭಾರತೀಯ ಜನತಾ ಪಾರ್ಟಿಯಿಂದ ಉಚ್ಛಾಟನೆ ಮಾಡಿದರೂ ನಾವು ಬಿಜೆಪಿಗೇ ವೋಟ್ ಹಾಕುವುದು ಎಂದು ಶಾಸಕ ಸಿದ್ದು ಸವದಿ ಹೇಳಿದ್ದಾರೆ.
ಬೊಮ್ಮಾಯಿ ಸರ್ಕಾರದ ಸಚಿವರ ಪಟ್ಟಿ ರಿಲೀಸ್ ಆಗಿದ್ದು, ಸದ್ಯ ಬಿಜೆಪಿಯಲ್ಲಿ ಅಸಮಾಧಾನ ಸ್ಫೋಟಗೊಂಡಿದೆ. ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಸಿದ್ದು, ಕೊನೆಯ ಬಾರಿ ಕೈ ತಪ್ಪುವುದು ಅಲ್ಲ ಅವರು ನಮ್ಮನ್ನು ಗಣನೆಗೆ ತೆಗೆದುಕೊಂಡಿಲ್ಲ. ನಮ್ಮಂತವರು ಲೆಕ್ಕಕ್ಕೇ ಬರಂಗಿಲ್ಲ. ಬೇರೆ ಬೇರೆ ರೀತಿಯಿಂದ ಯಾಕೆ ಅವರನ್ನು ಮಂತ್ರಿ ಮಾಡುತ್ತಾರೋ ಗೊತ್ತಿಲ್ಲ. ನಮಗಿಂತ ಜ್ಯೂನಿಯರ್ ಗಳನ್ನು, ನಾವೇ ಪಕ್ಷಕ್ಕೆ ಕರೆತಂದವರನ್ನು ಇಂದು ಮಿನಿಸ್ಟರ್ ಮಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ನಮ್ಮನ್ನು ಮಂತ್ರಿಗಳಾಗಿ ಮಾಡುತ್ತಿಲ್ಲ. ತಾಳಿದವನೇ ಬಾಳಿಯಾನು ಅಂತಾರಲ್ವ ಹಂಗೆ ಸಹಿಸಿಕೊಳ್ಳುದಷ್ಟೇ. ಮಂತ್ರಿಯಾಗಲು ನನಗೇನು ಕೊರತೆ ಇದೆ ಅಂತ ಹೈಕಮಾಂಡ್ ಅವರನ್ನೇ ಕೇಳಬೇಕು. ಮೌನವಾಗಿರುವವರಿಗೆ, ನಿಯತ್ತಾಗಿರುವವರಿಗೆ, ಪಕ್ಷಕ್ಕೆ ಬದ್ಧರಾಗಿರುವವರಿಗೆ ಕೊಡುತ್ತಿಲ್ಲ. ಇವರು ಎಲ್ಲೂ ಹೋಗಂಗಿಲ್ಲ, ಏನೂ ಮಾಡಂಗಿಲ್ಲ ಅನ್ನೋ ವಿಶ್ವಾಸ ಇರಬೇಕು. ಹಾಗಾಗಿ ನಮಗೆ ಸಚಿವ ಸ್ಥಾನ ಕೊಡದೇ ಇರಬಹುದು ಎಂದು ಹೇಳಿದರು.
ಡಬಲ್ ಗೇಮ್ ಆಡೋರನ್ನು, ಪಕ್ಷಕ್ಕೆ ಚೂರಿ ಹಾಕುವವರನ್ನು ಮಂತ್ರಿ ಮಾಡುತ್ತಾರೆ. ಒಳ್ಳೆಯ ಕಾಲ ಬಂದೇ ಬರುತ್ತದೆ. ನಮ್ಮ ಹಣೆಬರಹ ಚೆನ್ನಾಗಿಲ್ಲ ಅದಿಕೆ ಮಂತ್ರಿ ಆಗಿಲ್ಲ. ನಾವು ಲಾಬಿ ಮಾಡಲ್ಲ, ನೇರವಾದಿಗಳು. ಮುಂದೆ ಒಳ್ಳೆಯ ಕಾಲ ಬರುತ್ತೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದನ್ನೂ ಓದಿ: ಸಂಪುಟದಲ್ಲಿ ವಲಸಿಗರಿಗೆ ಮಣೆ – ರಾಮದಾಸ್ ಟಾಂಗ್

ಬಿಜೆಪಿ ಪಕ್ಷ ದೇಶಕ್ಕೆ ಅನಿವಾರ್ಯ. ಜೀವನದ ಕೊನೆ ಉಸಿರುವವರೆಗೂ ಬಿಜೆಪಿ ಪಕ್ಷಕ್ಕೆ ದುಡಿಯುತ್ತೇವೆ. ಪಾರ್ಟಿಯಿಂದ ಉಚ್ಛಾಟನೆ ಮಾಡಿದರೂ ಬಿಜೆಪಿಗೇ ವೋಟ್ ಹಾಕುವುದಾಗಿ ಸಿದ್ದು ಸವದಿ ಸ್ಪಷ್ಟಪಡಿಸಿದರು.

Leave a Reply