ಪಾಕ್-ಬಾಂಗ್ಲಾ ವಿರುದ್ಧ ಯುದ್ಧ ಮಾಡಿದ್ದ ಯೋಧನಿಗೆ ಅನ್ನ, ನೀರು, ಸೂರಿಲ್ಲ

– ಆಸ್ತಿಗಾಗಿ ಹೆತ್ತ ಅಪ್ಪನನ್ನೇ ಹೊರ ಹಾಕಿದ ಮಗ

ಚಿಕ್ಕಮಗಳೂರು: ಆಸ್ತಿಗಾಗಿ ಮಗನೇ ಹೆತ್ತ ಅಪ್ಪನನ್ನು ಮನೆಯಿಂದ ಹೊರ ಹಾಕಿರುವಂತಹ ಘಟನೆ ಜಿಲ್ಲೆಯ ಕೊಪ್ಪ ತಾಲೂಕಿನ ಬೊಮ್ಮಲಪುರದಲ್ಲಿ ನಡೆದಿದೆ.

ಭಾರತೀಯ ಸೇನೆಯಲ್ಲಿ 22 ವರ್ಷ ದೇಶಕ್ಕಾಗಿ ಹೋರಾಡಿದ ಮಾಜಿ ಯೋಧನಿಂದು ತಿನ್ನೋಕೆ ಅನ್ನವಿಲ್ಲದೆ, ಮಲಗಲು ಜಾಗವಿಲ್ಲದೆ ಪಾಳುಬಿದ್ದ ಬಸ್ ನಿಲ್ದಾಣದಲ್ಲಿ ಬದುಕುವಂತಾಗಿದೆ. 77 ವರ್ಷದ ಮಾಜಿ ಸೈನಿಕ ರಾಮಪ್ಪ ಇಂದು ಕೊಪ್ಪದ ಬಸ್ ನಿಲ್ದಾಣದಲ್ಲಿ ನಿರ್ಗತಿಕನಂತೆ ಬದುಕುತ್ತಿದ್ದಾರೆ.

ತಾವೇ ಕಟ್ಟಿದ ಮನೆಯಲ್ಲಿ ತನಗೇ ಆಶ್ರಯ ಸಿಗದೇ ಕೊಪ್ಪದ ಮಾಜಿ ಸೈನಿಕರ ಸಂಘದ ಕಛೇರಿಯಲ್ಲಿ ಮಲಗುತ್ತಾ, ಸಮೀಪದ ಮುಸುರೇ ಹಳ್ಳದಲ್ಲಿ ಸ್ನಾನ ಮಾಡಿ ಅಲ್ಲಿ ಇಲ್ಲಿ ಊಟ-ತಿಂಡಿ ಮಾಡಿ ದಿನ ದೂಡುತ್ತಿದ್ದಾರೆ. ಮಾಜಿ ಸೈನಿಕರಾಗಿರುವ ಈ ರಾಮಪ್ಪ, 1965ರ ಪಾಕಿಸ್ತಾನ ಹಾಗೂ 1971ರ ಬಾಂಗ್ಲಾ ವಿರುದ್ಧದ ಯುದ್ಧದಲ್ಲಿ ದೇಶಕ್ಕಾಗಿ ಹೋರಾಡಿದ್ದಾರೆ. 22 ವರ್ಷಗಳ ಕಾಲ ಭಾರತೀಯ ಸೇನೆಯಲ್ಲಿ ದೇಶಕ್ಕಾಗಿ ದುಡಿದಿದ್ದಾರೆ.

ಇಂದು ತನ್ನದೇ ಮನೆಯಲ್ಲಿ ಒಪ್ಪೊತ್ತಿನ ಊಟಕ್ಕೂ ಗತಿ ಇಲ್ಲದೆ, ಮತ್ತೊಬ್ಬರ ಬಳಿ ಕೈಚಾಚಿಕೊಂಡು ಬದುಕುತ್ತಿದ್ದಾರೆ. ಮಗ ಮನೆಯಿಂದ ಹೊರಹಾಕಿದ ಮೇಲೆ ರಾಮಪ್ಪ ಹರಿಹರಪುರ ಠಾಣೆಗೆ ದೂರು ನೀಡಿದ್ದಾರೆ. ಆದರೆ ಪೊಲೀಸರಿಂದ ಯಾವುದೇ ನ್ಯಾಯ ಸಿಗಲಿಲ್ಲ. ಬಳಿಕ ಕೊಪ್ಪ ತಹಶೀಲ್ದಾರರಿಗೂ ದೂರು ನೀಡಿದ್ದರೂ ಯಾವುದೇ ಪ್ರಯೋಜವಾಗಿಲ್ಲ.

ನನ್ನ ಮಗ-ಸೊಸೆ ನನ್ನನ್ನ ಮನೆಯಿಂದ ಹೊರಹಾಕಿದ್ದಾರೆ. ನಾನು ಕಟ್ಟಿದ ಮನೆಯಲ್ಲೇ ನನ್ನನ್ನು ಇರಲು ಬಿಡದೆ ಹೊರ ಹಾಕಿದ್ದಾರೆ. ಇಬ್ಬರು ಸೇರಿ ನನ್ನ ಮೇಲೆ ಹಲ್ಲೆ ಮುಂದಾಗುತ್ತಾರೆ. ನನ್ನ ಆರೋಗ್ಯ ಸರಿ ಇಲ್ಲ. ಎರಡು ಬಾರಿ ಹೃದಯದ ಆಪರೇಶನ್ ಆಗಿದೆ. ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದೇನೆ. ದಯವಿಟ್ಟು ನನ್ನ ಮನೆಯನ್ನು ನನಗೆ ಕೊಡಿಸಿಕೊಡಬೇಕೆಂದು ತಹಶೀಲ್ದಾರರಿಗೆ ರಾಮಪ್ಪ ದೂರು ನೀಡಿದ್ದಾರೆ.

ಇದು ಸಾಂಸಾರಿಕ ಜಗಳ. ಇಲ್ಲಿ ತಪ್ಪು ನಿವೃತ್ತ ಸೈನಿಕ ರಾಮಪ್ಪರದ್ದೋ ಅಥವಾ ಮಗ ರಾಜಶಂಕರರದ್ದೋ ಗೊತ್ತಿಲ್ಲ. ಆದರೆ ಭಾರತೀಯ ಸೇನೆಯಲ್ಲಿ ದೇಶಕ್ಕಾಗಿ ಹೋರಾಡಿದ ಸೈನಿಕನೋರ್ವ ಹೀಗೆ ಮನೆ-ಮಠ, ಊಟ-ತಿಂಡಿ ಇಲ್ಲದೆ ಮತ್ತೊಬ್ಬರ ಬಳಿ ಕೈಚಾಚಿಕೊಂಡು ಬದುಕುತ್ತಿರೋದು ಮಾತ್ರ ನೋವಿನ ಸಂಗತಿ. ಸಂಬಂಧಪಟ್ಟವರೂ ಇವರಿಗೆ ಸೂಕ್ತ ನ್ಯಾಯ ಕೊಡಿಸಬೇಕಿದೆ ಎಂಬ ಮಾತು ಸಾರ್ವಜನಿಕ ವಲಯದಿಂದ ಕೇಳಿಬಂದಿದೆ.

Comments

Leave a Reply

Your email address will not be published. Required fields are marked *