ಪಾಕ್, ಚೀನಾಗೆ ತೆರಳುವ ಪ್ರಧಾನಿಗಳಿಗೆ ರೈತರ ಭೇಟಿಗೆ ಸಮಯವಿಲ್ಲ: ಪ್ರಿಯಾಂಕಾ ಗಾಂಧಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರಿಗೆ ಪಾಕಿಸ್ತಾನ ಹಾಗೂ ಚೀನಾಗೆ ತೆರಳಲು ಸಮಯವಿದೆ. ಆದರೆ ತಮ್ಮ ಕ್ಷೇತ್ರದ ಗಡಿಯಲ್ಲೇ ಹೋರಾಟ ಮಾಡುತ್ತಿರುವ, ತಮಗೆ ಮತ ಹಾಕಿರುವ ರೈತರನ್ನು ಭೇಟಿಯಾಗಲು ಸಮಯವಿಲ್ಲ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಕಟುವಾಗಿ ಟೀಕಿಸಿದ್ದಾರೆ.

ಮುಂದಿನ ವರ್ಷ ಉತ್ತರ ಪ್ರದೇಶದಲ್ಲಿ ಚುನಾವಣೆ ಇರುವ ಕಾರಣ ಕಾಂಗ್ರೆಸ್ 10 ದಿನಗಳ ಕಾಲ ಮಹಾಪಂಚಾಯತ್ ಅಭಿಯಾನ ಆಯೋಜಿಸಿದೆ. ಉತ್ತರ ಪ್ರದೇಶದ 27 ಜಿಲ್ಲೆಗಳಲ್ಲಿ ಜೈ ಜವಾನ್, ಜೈ ಕಿಸಾನ್ ಅಭಿಯಾನವನ್ನು ಕಾಂಗ್ರೆಸ್ ನಡೆಸುತ್ತಿದೆ. ಈ ಕಾರ್ಯಕ್ರಮದಲ್ಲಿ ಪ್ರಿಯಾಂಕಾ ಗಾಂಧಿ ವಾದ್ರಾ ಭಾಗವಹಿಸಿ ಮಾತನಾಡಿದ್ದಾರೆ.

ಉತ್ತರ ಪ್ರದೇಶದ ಸಹರಾನ್ಪುರದಲ್ಲಿ ನಡೆದ ರೈತರ ಬಹಿರಂಗ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದರು. ರೈತರು ದೇಶವನ್ನು ಆತ್ಮನಿರ್ಭರ ಮಾಡಿದ್ದಾರೆ. ಆದರೆ ಹೊಸ ಕೃಷಿ ಕಾನೂನುಗಳ ಮೂಲಕ ರೈತರು ನರಳುವಂತೆ ಮಾಡಲಾಗುತ್ತಿದೆ ಎಂದು ಕಿಡಿಕಾರಿದರು.

ಸರ್ಕಾರ ರೈತರನ್ನು ಅರ್ಥ ಮಾಡಿಕೊಳ್ಳುತ್ತಿಲ್ಲ. ರೈತರನ್ನು ದೇಶದ್ರೋಹಿಗಳೆಂದು ಬಿಂಬಿಸಲಾಗುತ್ತಿದೆ. ಆದರೆ ನಿಜವಾಗಿಯೂ ಯಾರು ದೇಶದ್ರೋಹಿಗಳು? ರೈತರನ್ನು ಭಯೋತ್ಪಾದಕರು ಎಂದು ಅವರು ಕರೆಯುತ್ತಿದ್ದಾರೆ. ಈ ಮೂಲಕ ರೈತರ ಮೇಲೆಯೇ ಅನುಮಾನಪಟ್ಟಿದ್ದಾರೆ. ಆದರೆ ರೈತರ ಹೃದಯ ಯಾವತ್ತೂ ದೇಶದ ವಿರುದ್ಧ ಇರುವುದಿಲ್ಲ. ಅವರ ಹೃದಯ ಭೂಮಿಗಾಗಿ ಕೆಲಸ ಮಾಡುತ್ತಿರುತ್ತದೆ. ಹೀಗಾಗಿಯೇ ರೈತರು ಹಗಲು, ರಾತ್ರಿ ಎನ್ನದೆ ಹೊಲದಲ್ಲಿ ದುಡಿಯುತ್ತಾರೆ. ಅವರು ಹೇಗೆ ದೇಶಕ್ಕೆ ದ್ರೋಹ ಮಾಡುತ್ತಾರೆ ಎಂದು ಪ್ರಶ್ನಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರು ರೈತರಿಗೆ ಅವಮಾನ ಮಾಡುತ್ತಿದ್ದಾರೆ. ಆಂದೋಲನ ಜೀವಿ ಎಂದು ಕರೆಯುವ ಮೂಲಕ ಪಾರ್ಲಿಮೆಂಟ್‍ನಲ್ಲಿ ಸಹ ಅವಮಾನಿಸಿದ್ದಾರೆ ಎಂದು ಪ್ರಿಯಾಂಕಾ ಗಾಂಧಿ ವಾದ್ರಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Comments

Leave a Reply

Your email address will not be published. Required fields are marked *