ಪಾಕ್‍ಗೆ ಯುದ್ಧ ವಿಮಾನಗಳ ವಿವರ ಕಳುಹಿಸುತ್ತಿದ್ದ ಹೆಚ್‍ಎಎಲ್ ಉದ್ಯೋಗಿ ಅರೆಸ್ಟ್

ಮುಂಬೈ: ಪಾಕಿಸ್ತಾನ ಗುಪ್ತಚರ ಇಲಾಖೆ (ಐಎಸ್‍ಐ)ಗೆ ಯುದ್ಧ ವಿಮಾನಗಳ ವಿವರಗಳನ್ನು ಕದ್ದು ಕಳುಹಿಸುತ್ತಿದ್ದ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್‍ಎಎಲ್)ನ ಉದ್ಯೋಗಿಯನ್ನು ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳ ಇಂದು ಬಂಧಿಸಿದೆ.

ಬಂಧಿತ ಹೆಚ್‍ಎಎಲ್ ಉದ್ಯೋಗಿಯನ್ನು 41 ವರ್ಷದ ದೀಪಕ್ ಶಿರ್ಸತ್ ಎಂದು ಗುರುತಿಸಲಾಗಿದೆ. ಈತ ಮುಂಬೈ ನಾಸಿಕ್ ಬಳಿಯ ಓಜರ್ ವಿಮಾನ ಘಟಕದಲ್ಲಿ ಕೆಲಸ ಮಾಡುತ್ತಿದ್ದ. ಬಂಧಿತನಿಂದ ಮೂರು ಮೊಬೈಲ್ ಫೋನುಗಳು ಮತ್ತು ಐದು ಸಿಮ್‍ಗಳು ಮತ್ತು ಎರಡು ಮೆಮೊರಿ ಕಾರ್ಡ್ ಗಳನ್ನು ವಶಕ್ಕೆ ಪಡೆಯಲಾಗಿದೆ.

ಈ ವಿಚಾರವಾಗಿ ಮಾತನಾಡಿರುವ ಡಿಸಿಪಿ ವಿನಯ್ ರಾಥೋಡ್, ರಾಜ್ಯ ಭಯೋತ್ಪಾದನಾ ನಿಗ್ರಹ ದಳದ (ಎಟಿಎಸ್)ಯ ನಾಸಿಕ್ ಘಟಕವು, ಐಎಸ್‍ಐ ಜೊತೆ ನಿರಂತರ ಸಂಪರ್ಕದಲ್ಲಿದ್ದ ವ್ಯಕ್ತಿಯನ್ನು ಇಂದು ಬಂಧಿಸಿದೆ. ದೀಪಕ್ ಶಿರ್ಸತ್ ಎಂದು ಗುರುತಿಸಲ್ಪಟ್ಟ ಈ ವ್ಯಕ್ತಿ ಭಾರತೀಯ ಯುದ್ಧ ವಿಮಾನ ಮತ್ತು ಅವುಗಳ ಉತ್ಪಾದನಾ ಘಟಕದ ಬಗ್ಗೆ ಗೌಪ್ಯ ಮಾಹಿತಿಯನ್ನು ಪಾಕಿಸ್ತಾನದ ಗುಪ್ತಚರ ಸಂಸ್ಥೆ (ಐಎಸ್‍ಐ)ಗೆ ವಾಟ್ಸಪ್ ಮತ್ತು ಸಾಮಾಜಿಕ ಮಾಧ್ಯಮಗಳ ಮೂಲಕ ಒದಗಿಸುತ್ತಿದ್ದ ಎಂದು ತಿಳಿಸಿದ್ದಾರೆ.

ಈತ ಓಜರ್ ವಿಮಾನ ಘಟಕದಲ್ಲಿ ನಿಷೇಧಿತ ಜಾಗದಲ್ಲಿ ಓಡಾಡಿ ಅಲ್ಲಿನ ಫೋಟೋಗಳನ್ನು ತೆಗೆದು ಪಾಕಿಸ್ತಾನಕ್ಕೆ ಕಳುಹಿಸುತ್ತಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಓಜರ್ ಘಟಕ ಮಿಗ್-21 ಎಫ್‍ಎಲ್ ವಿಮಾನ ಮತ್ತು ಕೆ-13 ಕ್ಷಿಪಣಿಗಳ ತಯಾರಿಕೆಗಾಗಿ 1964ರಲ್ಲಿ ಸ್ಥಾಪನೆಯಾಗಿತ್ತು. ಈ ವಿಭಾಗವು ಮಿಗ್-21 ಎಂ, ಮಿಗ್-21 ಬೈಸನ್ ಮಿಗ್-27 ಎಂ ಮತ್ತು ಅತ್ಯಾಧುನಿಕ ಸುಕೋಯ್-30 ಎಂಕೆಐ ಫೈಟರ್ ಜೆಟ್‍ಗಳ ರಿಪೇರಿ ಸಹ ಮಾಡುತ್ತಿದೆ.

Comments

Leave a Reply

Your email address will not be published. Required fields are marked *