ಪರಪ್ಪನ ಅಗ್ರಹಾರದಿಂದ ಶಶಿಕಲಾ ಬಿಡುಗಡೆ ದಿನಾಂಕ ಫಿಕ್ಸ್

ಬೆಂಗಳೂರು: ಅಕ್ರಮ ಆಸ್ತಿ ಸಂಪಾದನೆ ಪ್ರಕರಣದಲ್ಲಿ ಜೈಲು ಶಿಕ್ಷೆಗೆ ಅನುಭವಿಸುತ್ತಿರುವ ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿವಂಗತ ಜಯಲಲಿತಾ ಅವರ ಆಪ್ತೆ ಶಶಿಕಲಾ ನಟರಾಜನ್ ಶೀಘ್ರ ಬಿಡುಗಡೆಯಾಗಲಿದ್ದಾರೆ ಎಂಬ ಸುದ್ದಿ ಸಾಕಷ್ಟು ವೈರಲ್ ಆಗಿದೆ. ಆದರೆ ಸದ್ಯ ಆಕೆಯ ಬಿಡುಗಡೆಯ ಕುರಿತು ಸ್ಪಷ್ಟತೆ ಲಭಿಸಿದ್ದು, ಮುಂದಿನ ವರ್ಷ ಜನವರಿ 27 ರಂದು ಆಕೆಯ ಬಿಡುಗಡೆಯ ಸಾಧ್ಯತೆ ಇದೆ ಎಂದು ಆರ್‌ಟಿಐ ಅರ್ಜಿ ಮೂಲಕ ತಿಳಿದುಬಂದಿದೆ.

ಶಶಿಕಲಾ ಬಿಡುಗಡೆಯ ಕುರಿತು ನರಸಿಂಹ ಮೂರ್ತಿ ಅವರು ಸಲ್ಲಿಸಲಾಗಿದ್ದ ಆರ್‌ಟಿಐ ಅರ್ಜಿಗೆ ಜೈಲಾಧಿಕಾರಿಗಳು ಉತ್ತರ ನೀಡಿದ್ದಾರೆ. ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಜೈಲು ಶಿಕ್ಷೆಯೊಂದಿಗೆ 10 ಕೋಟಿ ರೂ. ದಂಡ ವಿಧಿಸಿದೆ. ಈ ಮೊತ್ತವನ್ನು ಶಶಿಕಲಾ ಪಾವತಿ ಮಾಡಿದರೆ ಅವರ ಬಿಡುಗಡೆಗೆ ಅವಕಾಶವಿದೆ. ಇಲ್ಲವಾದರೇ ಮತ್ತೆ ಒಂದು ವರ್ಷ ಶಶಿಕಲಾ ಹೆಚ್ಚುವರಿಯಾಗಿ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ. ಇನ್ನು ಪೆರೋಲ್ ದಿನಗಳನ್ನು ಲೆಕ್ಕಾಚಾರ ಮಾಡಿದರೂ ಅವರ ಬಿಡುಗಡೆ ದಿನಾಂಕ ಬದಲಾಗುವ ಸಾಧ್ಯತೆ ಇದೆ ಎಂಬ ಮಾಹಿತಿ ಲಭಿಸಿದೆ.

ಈ ಹಿಂದೆ ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿರುವ ಶಶಿಕಲಾ ಸೆಪ್ಟೆಂಬರ್ ತಿಂಗಳಿನಿಂದ ಬಿಡುಗಡೆಯಾಗುವ ಅವಕಾಶವಿದೆ ಎಂದು ವಕೀಲ ರಾಜಾ ಸೆಂಥೂರ್ ಪಾಂಡಿಯನ್ ಹೇಳಿದ್ದರು. ಉತ್ತಮ ನಡವಳಿಕೆ ತೋರಿದ ಹಿನ್ನೆಲೆಯಲ್ಲಿ ಅವರು ಮಾರ್ಚ್‍ನಲ್ಲೇ ಬಿಡುಗಡೆಯ ಅರ್ಹತೆ ಪಡೆದಿದ್ದರು. ಈ ತಿಂಗಳ ಅಂತ್ಯದಲ್ಲಿ ಅಥವಾ ಅಕ್ಟೋಬರ್ ಮೊದಲ ವಾರದಲ್ಲಿ ಅವರು ಬಿಡುಗಡೆಯಾಗುವ ಸಾಧ್ಯತೆ ಇದೆ ಎಂದಿದ್ದರು.

ಇತ್ತೀಚೆಗೆ ಜಯಲಲಿತಾ ಅವರ ಜಯಂತಿಯಲ್ಲಿ ಮಾತನಾಡಿದ್ದ ಎಐಎಂಡಿಕೆ ಜಿಲ್ಲಾ ಕಾರ್ಯದರ್ಶಿ, ಮಾಜಿ ಶಾಸಕ ರಾಜಾ, ಶಶಿಕಲಾ ಶೀಘ್ರ ಬಿಡುಗಡೆಯಾಗಲಿದ್ದಾರೆ. ಅವರ ಬಿಡುಗಡೆಯ ಬಳಿಕ ರಾಜ್ಯ ರಾಜಕೀಯದಲ್ಲಿ ಬದಲಾವಣೆ ಆಗಲಿದೆ. ಸಿಎಂ ಪಳನಿಸ್ವಾಮಿ ಮುಖ್ಯಮಂತ್ರಿ ಪದವಿಯನ್ನು ಕಳೆದುಕೊಳ್ಳಲಿದ್ದಾರೆ ಎಂದು ಭವಿಷ್ಯ ನುಡಿದಿದ್ದರು. ತಮಿಳುನಾಡಿನಲ್ಲಿ ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದು, ಈ ವೇಳೆ ಶಶಿಕಲಾ ಬಿಡುಗಡೆಯೂ ರಾಜಕೀಯವಾಗಿ ಮಹತ್ವವನ್ನು ಪಡೆದುಕೊಂಡಿದೆ. 2017 ರಲ್ಲಿ ನಾಲ್ಕು ವರ್ಷಗಳ ಕಾಲ ಶಶಿಕಲಾ ಜೈಲು ಶಿಕ್ಷೆಗೆ ಒಳಗಾಗಿದ್ದರು.

Comments

Leave a Reply

Your email address will not be published. Required fields are marked *