ಪಬ್ಲಿಕ್ ಟಿವಿ ಇಂಪ್ಯಾಕ್ಟ್- ಕಂಟೈನ್ಮೆಂಟ್ ಝೋನ್‍ನಿಂದ ಪರೀಕ್ಷಾ ಕೇಂದ್ರ ಶಿಫ್ಟ್

ಮೈಸೂರು: ಕಂಟೈನ್ಮೆಂಟ್ ಝೋನ್‍ನಲ್ಲಿದ್ದ ಎಸ್‍ಎಸ್‍ಎಲ್‍ಸಿ ಪರೀಕ್ಷಾ ಕೇಂದ್ರವನ್ನು ಬೇರೆ ಕಡೆಗೆ ಸ್ಥಳಾಂತರಗೊಳಿಸಿ ಮೈಸೂರಿನ ಸಾರ್ವಜನಿಕ ಶಿಕ್ಷಣ ಇಲಾಖೆ ಮಹತ್ವದ ನಿರ್ಧಾರ ಕೈಗೊಂಡಿದೆ.

ನಗರದ ಕಂಟೈನ್ಮೆಂಟ್ ಝೋನ್‍ನಲ್ಲಿ ಎಸ್‍ಎಸ್‍ಎಲ್‍ಸಿ ಪರೀಕ್ಷೆ ನಡೆಸುವ ಬಗ್ಗೆ ಪಬ್ಲಿಕ್ ಟಿವಿ ವರದಿ ಮಾಡಿತ್ತು. ಇದರಿಂದ ಎಚ್ಚೆತ್ತ ಅಧಿಕಾರಿಗಳು ಪರೀಕ್ಷಾ ಕೇಂದ್ರವನ್ನು ಸ್ಥಳಾಂತರಗೊಳಿಸಿದ್ದಾರೆ.

ಮೈಸೂರಿನ ದೇವರಾಜ ಮೊಹಲ್ಲಾದ ಕೃಷ್ಣವಿಲಾಸ ರಸ್ತೆ ಎರಡು ದಿನಗಳ ಹಿಂದೆಯಷ್ಟೇ ಸೀಲ್‍ಡೌನ್ ಆಗಿದೆ. ಈ ಪ್ರದೇಶದ ವ್ಯಾಪ್ತಿಯಲ್ಲೇ ಅವಿಲಾ ಕಾನ್ವೆಂಟ್ ಇದ್ದು, ಅಲ್ಲಿಯೇ ಎಸ್‍ಎಸ್‍ಎಲ್‍ಸಿ ಪರೀಕ್ಷೆ ನಡೆಸಲು ಸಾರ್ವಜನಿಕ ಮುಂದಾಗಿತ್ತು.

ಈ ಬಗ್ಗೆ ಸ್ಪಷ್ಟೀಕರಣ ರೂಪದ ಕಥೆ ಹೇಳಿದ್ದ ಡಿಡಿಪಿಐ ಪಾಂಡುರಂಗ ಅವರು, “ನಾವು ಪರೀಕ್ಷಾ ಕೇಂದ್ರ ಸ್ಥಳಾಂತರಕ್ಕೆ ಸಿದ್ಧರಿದ್ದೇವೆ. ಈ ಬಗ್ಗೆ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳ ಪೋಷಕರ ಅಭಿಪ್ರಾಯ ಸಂಗ್ರಹಿಸಿದ್ವಿ. ಆದರೆ ಅವರು ಅವಿಲಾ ಕಾನ್ವೆಂಟ್‍ನಲ್ಲೇ ಪರೀಕ್ಷೆ ನಡೆಸಿ ಎನ್ನುತ್ತಿದ್ದಾರೆ. ಆದ್ದರಿಂದ ಅವಿಲಾ ಕಾನ್ವೆಂಟ್‍ನಲ್ಲಿ ಪರೀಕ್ಷೆ ನಡೆಸುತ್ತೇವೆ ಎಂದು ಹೇಳಿದ್ದರು.

ಪಬ್ಲಿಕ್ ಟಿವಿ ವರದಿಯಿಂದ ಎಚ್ಚೆತ್ತ ಅಧಿಕಾರಿಗಳು ಸದ್ಯ ಅವಿಲಾ ಕಾನ್ವೆಂಟ್ ಪರೀಕ್ಷಾ ಕೇಂದ್ರವನ್ನು ಸ್ಥಳಾಂತರಗೊಳಿಸಿದ್ದಾರೆ. ಇದರಿಂದಾಗಿ ವಿದ್ಯಾರ್ಥಿಗಳು ಹಾಗೂ ಪೋಷಕರ ಆತಂಕ ಕಡಿಮೆಯಾಗಿದೆ.

ಜಿಲ್ಲೆಯಲ್ಲಿ 39,822 ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿದ್ದು, ಅವರಲ್ಲಿ 20,631 ಬಾಲಕರು ಹಾಗೂ 19,191 ಬಾಲಕಿಯರಿದ್ದು, ಇವರಿಗೆ ಒಟ್ಟು 139 ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿದೆ. 849 ವಿದ್ಯಾರ್ಥಿಗಳು ಹೊರ ಜಿಲ್ಲೆಗೆ ಪರೀಕ್ಷಾ ಕೇಂದ್ರ ಬದಲು ಮಾಡಿಕೊಂಡಿದ್ದರೆ, 320  ವಿದ್ಯಾರ್ಥಿಗಳು ಬೇರೆ ಜಿಲ್ಲೆಯಿಂದ ಮೈಸೂರಿಗೆ ಬದಲು ಮಾಡಿಕೊಂಡಿ ದ್ದಾರೆ. ನಗರದಲ್ಲಿ 46 ಪರೀಕ್ಷಾ ಕೇಂದ್ರಗಳಿದ್ದು, ಗ್ರಾಮಾಂತರ ಪ್ರದೇಶಗಳಲ್ಲಿ 93 ಕೇಂದ್ರಗಳನ್ನು ತೆರೆಯಲಾಗಿದೆ. ಇದಲ್ಲದೇ ಹೆಚ್ಚುವರಿಯಾಗಿ 12 ಬ್ಲಾಕ್‌ ಪರೀಕ್ಷಾ  ಕೇಂದ್ರ ತೆರೆಯಲಾಗಿದೆ.

Comments

Leave a Reply

Your email address will not be published. Required fields are marked *