ಪತ್ರಕರ್ತನನ್ನ ಬೆನ್ನಟ್ಟಿ ಗುಂಡು ಹಾರಿಸಿ ಕೊಂದ ದುಷ್ಕರ್ಮಿಗಳು

–  ಹಳ್ಳಿಗೆ ಹೋದಾಗಲೇ ಮರ್ಡರ್
– ಮೂವರು ಆರೋಪಿಗಳು ಅರೆಸ್ಟ್

ಲಕ್ನೋ: ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಮೂವರು ದುಷ್ಕರ್ಮಿಗಳು ಪತ್ರಕರ್ತರೊಬ್ಬರನ್ನು ಬೆನ್ನಟ್ಟಿ ಗುಂಡಿಕ್ಕಿ ಕೊಲೆ ಮಾಡಿರುವ ಘಟನೆ ಉತ್ತರ ಪ್ರದೇಶದ ಬಲಿಯಾ ಜಿಲ್ಲೆಯಲ್ಲಿ ನಡೆದಿದೆ.

ರತನ್ ಸಿಂಗ್ (42) ಮೃತ ಪತ್ರಕರ್ತ. ಖಾಸಗಿ ಸುದ್ದಿ ವಾಹಿನಿಯಲ್ಲಿ ಸ್ಥಳೀಯ ಪತ್ರಕರ್ತರಾಗಿ ಕೆಲಸ ಮಾಡುತ್ತಿದ್ದರು. ಸೋಮವಾರ ರಾತ್ರಿ ಸುಮಾರು 9 ಗಂಟೆಗೆ ಲಕ್ನೋದಿಂದ 260 ಕಿ.ಮೀ ದೂರದಲ್ಲಿರುವ ಪೂರ್ವ ಉತ್ತರ ಪ್ರದೇಶದ ಬಲಿಯಾದಲ್ಲಿರುವ ಅವರ ಮನೆಯ ಬಳಿ ಗುಂಡು ಹಾರಿಸಿದ್ದಾರೆ. ಮೂವರು ಆರೋಪಿಗಳನ್ನು ಈಗಾಗಲೇ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಿಂಗ್ ಜಿಲ್ಲೆಯ ನಗರ ಭಾಗದಲ್ಲಿ ವಾಸಿಸುತ್ತಿದ್ದರು. ಅವರ ಕುಟುಂಬವು ಹಳ್ಳಿಯಲ್ಲಿ ವಾಸಿಸುತ್ತಿದ್ದು, ಕಳೆದ ಕೆಲವು ವರ್ಷಗಳಿಂದ ಆರೋಪಿಗಳೊಂದಿಗೆ ಆಸ್ತಿ ವಿವಾದ ನಡೆಯುತ್ತಿತ್ತು. ಸೋಮವಾರ ರಾತ್ರಿ ಸಿಂಗ್ ತನ್ನ ಹಳ್ಳಿಗೆ ಹೋಗಿದ್ದಾಗ ಅವರನ್ನ ಬೆನ್ನಟ್ಟಿ ಮೂವರು ಆರೋಪಿಗಳು ಗುಂಡಿಕ್ಕಿ ಕೊಂದಿದ್ದಾರೆ. ಗುಂಡಿನ ದಾಳಿ ಮಾಡುವಾಗ ಸಿಂಗ್ ದಾಳಿಕೋರರಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾರೆ. ಆದರೂ ಏನು ಪ್ರಯೋಜವಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

“ಆರೋಪಿಗಳು ಜಮೀನನ ಸುತ್ತಲೂ ಗೋಡೆ ನಿರ್ಮಿಸಿದ್ದರು. ಇದನ್ನು ತಿಳಿದ ಪತ್ರಕರ್ತ ಗೋಡೆಯನ್ನು ತೆರವು ಗೊಳಿಸಿದ್ದನು. ಈ ವೇಳೆ ಆರೋಪಿಗಳು ಮತ್ತು ಸಿಂಗ್ ನಡುವೆ ಮಾತಿನ ಚಕಮಕಿ ನಡೆದಿದೆ. ಇದೇ ದ್ವೇಷದ ಹಿನ್ನೆಲೆಯಲ್ಲಿ ಗುಂಡು ಹಾರಿಸಿ ಕೊಲೆ ಮಾಡಲಾಗಿದೆ. ಸ್ಥಳದಲ್ಲೇ ಪತ್ರಕರ್ತ ಮೃತಪಟ್ಟಿದ್ದು, ಪೊಲೀಸರು ಈಗಾಗಲೇ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಆಸ್ತಿ ವಿವಾದ ಮತ್ತು ಹಳೆಯ ದ್ವೇಷವೇ ದಾಳಿಯ ಹಿಂದಿನ ಕಾರಣ” ಎಂದು ಇನ್ಸ್‌ಪೆಕ್ಟರ್ ಸುಭಾಷ್ ದುಬೆ ತಿಳಿಸಿದರು.

ಮಾಹಿತಿ ತಿಳಿದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಪತ್ರಕರ್ತನ ಕುಟುಂಬಕ್ಕೆ 10 ಲಕ್ಷ ಪರಿಹಾರವನ್ನು ಘೋಷಿಸಿದ್ದಾರೆ. ಅಲ್ಲದೇ ಆರೋಪಿಗಳ ವಿರುದ್ಧ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವಂತೆ ಪೊಲೀಸರಿಗೆ ಸೂಚಿಸಿದ್ದಾರೆ.

Comments

Leave a Reply

Your email address will not be published. Required fields are marked *