ಪತ್ನಿ, ಮೂವರು ಮಕ್ಕಳನ್ನು ಕತ್ತು ಹಿಸುಕಿ ಕೊಂದು ವ್ಯಕ್ತಿ ಆತ್ಮಹತ್ಯೆ

– ಮಕ್ಕಳಲ್ಲಿ ಇಬ್ಬರು ಗಂಡು, ಒಂದು ಹೆಣ್ಣು
– ಡೆತ್‍ನೋಟ್‍ನಲ್ಲಿತ್ತು ನೈಜ ಕಾರಣ

ಲಕ್ನೋ: ವ್ಯಕ್ತಿಯೊಬ್ಬ ತನ್ನ ಪತ್ನಿ ಹಾಗೂ ಮಕ್ಕಳನ್ನು ಕತ್ತು ಹಿಸುಕಿ ಕೊಲೆಗೈದು ಬಳಿಕ ತಾನೂ ಆತ್ಮಹತ್ಯೆಗೆ ಶರಣಾದ ವಿಲಕ್ಷಣ ಘಟನೆಯೊಂದು ಉತ್ತರಪ್ರದೇಶದ ಮೀರತ್ ನಲ್ಲಿ ನಡೆದಿದೆ.

ಮೃತ ದುರ್ದೈವಿಗಳನ್ನು ರಿಹಾನಾ(35) ಹಾಗೂ ಮಕ್ಕಳನ್ನು ಅಫಾನ್(10), ಹೈದರ್ (7) ಹಾಗೂ ಅಯಾತ್(4) ಎಂದು ಗುರುತಿಸಲಾಗಿದೆ. ಇವರನ್ನು ರಶೀದ್ ಅಹ್ಮದ್(37) ಕೊಲೆ ಮಾಡಿ ಬಳಿಕ ತಾನೂ ಆತ್ಮಹತ್ಯೆಗೆ ಶರನಾಗಿದ್ದಾನೆ. ಈ ಘಟನೆ ಗುರುವಾರ ಸಂಜೆ ಪರೀಕ್ಷತ್ ಗರ್ ಪ್ರದೇಶದಲ್ಲಿ ನಡೆದಿದೆ.

ಆತ್ಮಹತ್ಯೆ ಮಾಡಿಕೊಂಡ ರಶೀದ್ ಮೃತದೇಹದ ಬಳಿಕ ಡೆತ್ ನೋಟ್ ಪತ್ತೆಯಾಗಿದೆ. ಅದರಲ್ಲಿ ಕೌಟುಂಬಿಕ ಕಲಹದಿಂದಾಗಿ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ರಶೀದ್ ಬರೆದಿದ್ದಾನೆ. ಪತ್ನಿ ಹಾಗೂ ಇಬ್ಬರು ಗಂಡು ಮಕ್ಕಳ ಮೃತದೇಹ ಬೆಡ್ ಮೇಲೆ ಇದ್ದರೆ, ರಶೀದ್ ಫ್ಯಾನಿಗೆ ನೇಣುಬಿಗಿದುಕೊಂಡ ರೀತಿಯಲ್ಲಿ ಪತ್ತೆಯಾಗಿದೆ. ಪತ್ನಿ ಹಾಗೂ ಮಕ್ಕಳ ಕುತ್ತಿಗೆಯಲ್ಲಿ ಕತ್ತು ಹಿಸುಕಿ ಕೊಲೆಗೈದ ಗುರುತುಗಳು ಪತ್ತೆಯಾಗಿವೆ.

ರಶೀದ್ ಹಾಗೂ ರಿಹಾನಾ 2013ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇದು ರಶೀದ್ ಎರಡನೇಯ ಮದುವೆಯಾದ್ರೆ, ರಿಹಾನಾಳದ್ದು ಮೂರನೇ ವಿವಾಹವಾಗಿತ್ತು. ರಶೀದ್ ಮೊದಲ ಹೆಂಡ್ತಿಗೆ ಅಫಾನ್ ಹಾಗೂ ಹೈದರ್ ಎಂಬ ಇಬ್ಬರು ಮಕ್ಕಳಿದ್ದರೆ, ಎರಡನೇಯ ಹೆಂಡ್ತಿ(ರಿಹಾನಾ)ಗೆ ಅಯಾತ್ ಎಂಬ ಹೆಣ್ಣು ಮಗುವೊಂದಿತ್ತು.

ರಶೀದ್ ಮೊದಲು ತನ್ನ ಪತ್ನಿ ಹಾಗೂ ಮೂವರು ಮಕ್ಕಳನ್ನು ಕತ್ತು ಹಿಸುಕಿ ಕೊಲೆಗೈದಿದ್ದಾನೆ. ನಂತರ ಆತ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಅಲ್ಲದೆ ಐವರು ಸಹೋದರರನ್ನು ಒಳಗೊಂಡ ಕುಟುಂಬಕ್ಕೆ ಕಿರುಕುಳ ನೀಡಬಾರದು ಎಂಬ ಉದ್ದೇಶದಿಂದ ಈ ಕೃತ್ಯ ಎಸಗಿರುವುದಾಗಿ ರಶೀದ್ ಡೆತ್ ನೋಟಿನಲ್ಲಿ ಬರೆದುಕೊಂಡಿದ್ದಾನೆ ಎಂದು ಪೊಲೀಸ್ ಅಧಿಕಾರಿ ಆನಂದ್ ಮಿಶ್ರಾ ತಿಳಿಸಿದ್ದಾರೆ.

ಡ್ರೈವರ್ ಆಗಿ ಕೆಲಸ ಮಾಡುತ್ತಿರುವ ರಶೀದ್ ವೆಲ್ಡರ್ ಆಗಿ ಪಾರ್ಟ್ ಟೈಂ ಕೆಲಸನೂ ಮಾಡುತ್ತಿದ್ದನು. ಘಟನೆಯ ಬಳಿಕ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ನಾಲ್ವರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಅಲ್ಲದೆ ಪ್ರಕರಣ ಸಂಬಂಧ ತನಿಖೆ ಮುಂದುವರಿಸಿದ್ದಾರೆ.

Comments

Leave a Reply

Your email address will not be published. Required fields are marked *