ಪತ್ನಿ, ಮಕ್ಕಳನ್ನು ತವರು ಮನೆಯಲ್ಲಿ ಬಿಟ್ಟು ಕಚೇರಿಯಲ್ಲೇ ಗ್ರಾಮಲೆಕ್ಕಾಧಿಕಾರಿ ವಾಸ

– ಅಪ್ಪನಿಗಾಗಿ ಕಣ್ಣೀರಿಟ್ಟ ಮಗಳು

ಬಳ್ಳಾರಿ: ಕೊರೊನಾ ಮಾಹಾಮಾರಿಯಿಂದ ಸರ್ಕಾರಿ ಅಧಿಕಾರಿಗಳು, ವೈದ್ಯರು ಪೊಲೀಸ್ ಸಿಬ್ಬಂದಿ ಹಗಲಿರುಳು ಎನ್ನದೆ ಕೆಲಸ ಮಾಡುತ್ತಿದ್ದಾರೆ. ಹೀಗೆ ಲಾಕ್‍ಡೌನ್ ನಿಂದಾಗಿ ಸರ್ಕಾರಿ ಕೆಲಸದಲ್ಲಿ ಇರುವ ತಂದೆಯನ್ನು ನೋಡದ ಮಗಳು ಅಪ್ಪನಿಗೆ ಕರೆ ಮಾಡಿ ಕಣ್ಣೀರು ಹಾಕಿದ್ದಾಳೆ. ತಂದೆ-ಮಗಳ ಫೋನ್ ಎಂಥವರಲ್ಲೂ ಕಣ್ಣೀರು ತರಿಸುತ್ತದೆ.

ಕೊರೊನಾ ಮಾಹಾಮಾರಿಯಿಂದ ಸಂಪೂರ್ಣ ದೇಶವೇ ಸ್ತಬ್ಧವಾಗಿದೆ, ಜನಜೀವನ ತತ್ತರಿಸಿ ಹೋಗಿದೆ. ಆದರೆ ಸರ್ಕಾರಿ ನೌಕರರು ವೈದ್ಯರು ಪೊಲೀಸ್ ಇಲಾಖೆ ಸಿಬ್ಬಂದಿ ಹಗಲಿರುಳು ಕೆಲಸ ಮಾಡುತ್ತಿದ್ದಾರೆ. ಹೀಗೆ ದೊಡ್ಡಬಸಪ್ಪಾ ರೆಡ್ಡಿ ಕೊರೊನಾ ಕೆಲಸದ ನಿಮಿತ್ತವಾಗಿ ಮನೆಗೆ ಹೋಗಲು ಆಗದೇ ಕೆಲಸ ಮಾಡುತ್ತಿದ್ದಾರೆ.

ಮೂಲತಃ ಬಳ್ಳಾರಿ ಜಿಲ್ಲೆಯ ಹಗರಿಬೊಮ್ಮನ ಹಳ್ಳಿ ತಾಲೂಕಿನ ಕಣ್ಣಿಹಳ್ಳಿ ನಿವಾಸಿಯಾಗಿರುವ ಇವರು, ಸದ್ಯ ಬಳ್ಳಾರಿ ತಾಲೂಕಿನ ಕುಡಿತಿನಿ ಗ್ರಾಮದಲ್ಲಿ ಗ್ರಾಮ ಲೆಕ್ಕಾಧಿಕಾರಿಯಾಗೆ ಕೆಲಸ ಮಾಡುತ್ತಿದ್ದಾರೆ. ಲಾಕ್ ಡೌನ್ ಆದಾಗ ಪತ್ನಿ ಮತ್ತು ತಮ್ಮ ಮೂವರು ಹೆಣ್ಣುಮಕ್ಕಳನ್ನು ಪತ್ನಿಯ ತವರು ಮನಗೆ ಬಿಟ್ಟು ಬಂದು ಕಚೇರಿಯಲ್ಲಿ ವಾಸ ಮಾಡುತ್ತಿದ್ದಾರೆ.

ಈ ಮೂವರು ಹೆಣ್ಣು ಮಕ್ಕಳಲ್ಲಿ ಹಿರಿಯ ಮಗಳು ರೋಜಾಗೆ ತಂದೆ ಅಂದ್ರೆ ತುಂಬಾನೇ ಪ್ರೀತಿ. ಹೀಗಾಗಿ ಪ್ರತಿದಿನ ಕರೆ ಮಾಡಿ ತಂದೆಯ ಆರೋಗ್ಯ ವಿಚಾರಿಸುತ್ತಿದ್ದಳು. ಈ ಮಧ್ಯೆ ಸಂಡೂರು ತಾಲೂಕಿನ ಕೃಷ್ಣಾ ನಗರದಲ್ಲಿ ಒಂದು ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ. ಈ ವಿಚಾರ ಮಗಳು ರೋಜಾ ಅವಳ ಗಮನಕ್ಕೆ ಬಂದಿದ್ದು, ಕೂಡಲೇ ಗಾಬರಿಗೊಂಡು ತಂದೆಗೆ ಕರೆ ಮಾಡಿ ಕಣ್ಣೀರು ಹಾಕಿದ್ದಾಳೆ.

ತಂದೆ-ಮಗಳ ಸಂಭಾಷಣೆ:
ರೋಜಾ: ಅಪ್ಪಾ ನೀ ಎಲ್ಲೂ ಹೋಗಬೇಡ ಬಳ್ಳಾರಿಗೆ ಕೊರೊನಾ ಬಂದಿದೆ. ನೀ ಮನೆಯಲ್ಲೇ ಇರು. ಎಲ್ಲೂ ಹೊರಗೆ ಹೋಗಬೇಡ.
ತಂದೆ: ನೀ ಯಾಕೆ ಅಳುತ್ತೀಯಾ ಏನೂ ಆಗಲ್ಲ ನನಗೆ
ಮಗಳು: ಅಪ್ಪ ಬಳ್ಳಾರಿಯಲ್ಲಿ ಕೊರೊನಾ ಬಂದಿದೆ, ನೀ ಹುಷಾರಾಗಿ ಇರು ನಿನಗೆ ಏನಾದರೂ ಆದ್ರೆ ಹೇಗೆ ಅಪ್ಪ. ಅಪ್ಪ ಪ್ಲೀಸ್ ಅಪ್ಪ ಹೊರಗಡೆ ಹೋಗಬೇಡ

ತಂದೆಯೇ ಮಗಳನ್ನು ನೋಡದೆ 45 ದಿನಗಳು ಕಳೆದಿವೆ. ಆದರೆ ಮಗಳು ಮಾತ್ರ ತಂದೆಯ ಬರುವಿಕೆಯನ್ನು ಕಾಯುತ್ತಿದ್ದಾಳೆ. ಕೊರೊನಾ ಮಾಹಾಮಾರಿಯಿಂದ ಸರ್ಕಾರಿ ನೌಕರರಿಗೆ ರಜೆ ಎಂಬುದು ಮರೀಚಿಕೆ ಆಗಿದೆ. ಅಪ್ಪ ಯಾವಾಗ ಮನೆಗೆ ಬರುತ್ತಾನೆ ಅಂತ ಮಕ್ಕಳ ಕೇಳುವ ಪ್ರಶ್ನೆಗೆ ಸಮಾಧಾನದಿಂದಲೇ ತಾಯಿ ಉತ್ತರ ನೀಡುವ ಮೂಲಕ ಸಂತೈಸುತ್ತಿದ್ದಾರೆ.

Comments

Leave a Reply

Your email address will not be published. Required fields are marked *