ಪತ್ನಿಯ ಚಿತೆಗೆ ಹಾರಿದ- ರಕ್ಷಣೆ ಮಾಡಿದ್ರೂ ತಕ್ಷಣ ಬಾವಿಗೆ ಹಾರಿ ಪತಿ ಆತ್ಮಹತ್ಯೆ

– ಮದುವೆಯಾದ 3 ತಿಂಗಳಲ್ಲೇ ಜೋಡಿ ಸಾವು

ಮುಂಬೈ: ವ್ಯಕ್ತಿಯೊಬ್ಬ ಪತ್ನಿಯ ಸಾವಿನಿಂದ ನೊಂದು ಆಕೆಯ ಚಿತೆಗೆ ಹಾರಿ ಆತ್ಮಹತ್ಯೆ ಯತ್ನಿಸಿ ಬದುಕಿದ್ದನು. ನಂತರ ಬಾವಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.

ಚಂದ್ರಪುರ ಜಿಲ್ಲೆಯ ಭಂಗರಂ ತಲೋಧಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಕಿಶೋರ್ ಆತ್ಮಹತ್ಯೆ ಮಾಡಿಕೊಂಡು ಪತಿ. ತನ್ನ 19 ವರ್ಷದ ಗರ್ಭಿಣಿ ಪತ್ನಿ ರುಚಿತಾ ಸಾವನ್ನಪ್ಪಿದ ನಂತರ ತಾನೂ ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿದ್ದಾನೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಏನಿದು ಪ್ರಕರಣ?
ಕಿಶೋರ್ ಖಾತಿಕ್ ಮತ್ತು ರುಚಿತಾ ಕಳೆದ ಮಾರ್ಚ್ 19 ರಂದು ವಿವಾಹವಾಗಿದ್ದರು. ನಾಲ್ಕು ದಿನಗಳ ಹಿಂದೆ ರುಚಿತಾ ಗರ್ಭಿಣಿ ಎಂದು ತಿಳಿದುಬಂದಿದೆ. ತಾಯಿ ಅನಾರೋಗ್ಯದ ಕಾರಣ ರುಚಿತಾ ತನ್ನ ತವರು ಮನೆಗೆ ಹೋಗಿದ್ದಳು. ಭಾನುವಾರ ಕಿಶೋರ್ ಪತ್ನಿಯನ್ನು ಕರೆದುಕೊಂಡು ಬರಲು ರುಚಿತಾಳ ಪೋಷಕರ ಮನೆಗೆ ಹೋಗಿದ್ದಾನೆ. ಆದರೆ ರುಚಿತಾ ಶೌಚಾಲಯಕ್ಕೆ ಹೋಗಿ ಬರುವುದಾಗಿ ಹೇಳಿ ಹೋಗಿದ್ದಾಳೆ.

ತುಂಬಾ ಸಮಯವಾದರೂ ರುಚಿತಾ ಮನೆಗೆ ಹಿಂದಿರುಗಲಿಲ್ಲ. ಇದರಿಂದ ಆತಂಕಗೊಂಡ ಮನೆಯವರು ಹೋಗಿ ಹುಡುಕಾಡಿದ್ದಾರೆ. ಈ ವೇಳೆ ಆಕೆಯ ಮೃತದೇಹ ಬಾವಿಯಲ್ಲಿ ಪತ್ತೆಯಾಗಿದೆ. ಸೋಮವಾರ ಕುಟುಂಬದರು ಆಕೆಯ ಅಂತ್ಯಕ್ರಿಯೆ ನಡೆಸುತ್ತಿದ್ದರು. ಆಗ ಪತ್ನಿಯ ಅಗಲಿಕೆಯನ್ನು ಸಹಿಸಲಾಗದ ಕಿಶೋರ್ ಪತ್ನಿಯ ಚಿತೆಗೆ ಹಾರಿದ್ದಾನೆ ಎಂದು ಇನ್ಸ್ ಪೆಕ್ಟರ್ ಸಂದೀಪ್ ಧೋಬೆ ಹೇಳಿದ್ದಾರೆ.

ತಕ್ಷಣ ಸ್ಥಳೀಯರು ಮತ್ತು ಕುಟುಂಬದವರು ಆತನನ್ನು ರಕ್ಷಿಸಿದ್ದಾರೆ. ಕಿಶೋರ್ ಬೆಂಕಿಯಿಂದ ಸುಟ್ಟ ಗಾಯಗಳಿಂದ ನರಳುತ್ತಿದ್ದನು. ಆದರೂ ಶವಾಗಾರದ ಬಳಿಯಿದ್ದ ಬಾವಿಗೆ ಹಾರಿದ್ದಾನೆ. ಆಗಲೂ ಕುಟುಂಬದವರು ಆತನನ್ನ ರಕ್ಷಣೆ ಮಾಡಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿದ್ದಾರೆ. ಆದರೆ ಅಷ್ಟರಲ್ಲಿಯೇ ಕಿಶೋರ್ ಸಾವನ್ನಪ್ಪಿದ್ದನು.

ರುಚಿತಾಳ ಸಾವಿಗೆ ಇನ್ನೂ ನಿಖರ ಕಾರಣ ತಿಳಿದುಬಂದಿಲ್ಲ. ಸದ್ಯಕ್ಕೆ ಪೊಲೀಸರು ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Comments

Leave a Reply

Your email address will not be published. Required fields are marked *