ಪತ್ನಿಯನ್ನ ಬಾವಿಗೆ ತಳ್ಳಿ ಶವವನ್ನ ಹೂತಿಟಿದ್ದ ಪಾಪಿ ಪತಿ

– ಎರಡು ತಿಂಗಳ ಬಳಿಕ ಅಪ್ಪನ ಕೃತ್ಯ ಬಯಲಿಗೆಳೆದ ಮಕ್ಕಳು

ಚಾಮರಾಜನಗರ: ಪಾಪಿ ಪತಿಯೊಬ್ಬ ಪತ್ನಿಯನ್ನ ಬಾವಿಗೆ ತಳ್ಳಿ ಕೊಲೆಗೈದು ಬಳಿಕ ಶವವನ್ನು ಹೂತಿಟ್ಟಿದ್ದ ಪ್ರಕರಣ ಜಿಲ್ಲೆಯಲ್ಲಿ ನಡೆದಿದ್ದು, ಎರಡು ತಿಂಗಳ ಬಳಿಕ ಬೆಳಕಿಗೆ ಬಂದಿದೆ.

ಚಾಮರಾಜನಗರ ಪಟ್ಟಣದ ಹಾಜಿರಾಬಾನು ಕೊಲೆಯಾದ ಮಹಿಳೆ. ನಾಗವಳ್ಳಿ ಗ್ರಾಮದ ಅಬ್ದುಲ್ ಹಬೀಬ್ ಹತ್ಯೆಗೈದ ಪಾಪಿ ಪತಿ. ಹಾಜಿರಾಬಾನು ಮಕ್ಕಳು ತಾತನ ಮನೆಗೆ ಬಂದಾಗ ತಂದೆಯ ಕೃತ್ಯವನ್ನು ಬಯಲು ಮಾಡಿದ್ದಾರೆ.

ಹಾಜಿರಾಬಾನು ಹಾಗೂ ಅಬ್ದುಲ್ ಹಬೀಬ್ ದಂಪತಿಗೆ ನಾಲ್ವರು ಮಕ್ಕಳು ಇದ್ದಾರೆ. ಆದರೆ ಹಾಜಿರಾಬಾನು ಮಾಟ ಮಾಡಿಸುತ್ತಾಳೆ ಎಂಬುದು ಅಬ್ದುಲ್ ಮನೆಯವರ ಅನುಮಾನವಾಗಿತ್ತು. ಜೊತೆಗೆ ಹಾಜಿರಾಬಾನು ಕಂಡರೆ ಅಷ್ಟಕಷ್ಟೇ. ಈ ಹಿನ್ನೆಲೆಯಲ್ಲಿ ಅಬ್ದುಲ್ ಏಪ್ರಿಲ್ 20ರಂದು ತನ್ನ ಪತ್ನಿ ಹಾಜಿರಾಬಾನುನನ್ನು ತನ್ನ ಜಮೀನಿಗೆ ಕರೆದೊಯ್ದು ಬಾವಿಗೆ ತಳ್ಳಿ ಕೊಲೆ ಮಾಡಿದ್ದ. ನಂತರ ಯಾರ ಗಮನಕ್ಕೂ ತರದೆ ಮೃತದೇವನ್ನು ಹೂತು ಹಾಕಿದ್ದ.

ಮೃತ ಹಾಜಿರಾಬಾನು ಮಕ್ಕಳು ಚಾಮರಾಜನಗರದಲ್ಲಿರುವ ತಮ್ಮ ತಾತನ ಮನೆಗೆ ಬಂದಿದ್ದಾಗ ತಾಯಿಯನ್ನು ಕೊಲೆ ಮಾಡಿ ಹೂತಿಟ್ಟಿರುವ ಬಗ್ಗೆ ತಿಳಿಸಿದ್ದಾರೆ. ಈ ಸಂಬಂಧ ಹಾಜಿರಾಬಾನು ಪೋಷಕರು ಚಾಮರಾಜನಗರ ಪೂರ್ವಗ್ರಾಮಾಂತರ ಠಾಣೆಗೆ ದೂರು ನೀಡಿದ್ದಾರೆ.

ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಹೂತಿಟ್ಟ ಶವವನ್ನ ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಗೆ ಸಾಗಿಸಿದ್ದಾರೆ. ಆರೋಪಿ ಅಬ್ದುಲ್ ಹಬೀಬ್‍ನನ್ನು ಬಂಧಿಸಿರುವ ಪೊಲೀಸರು ವಿಚಾರಣೆ ಆರಂಭಿಸಿದ್ದಾರೆ. ಜೊತೆಗೆ ಆರೋಪಿಯ ತಾಯಿ, ಸಹೋದರ, ಸಹೋದರಿಯರು ಸೇರಿದಂತೆ ಒಟ್ಟು 8 ಮಂದಿಯ ವಿರುದ್ಧ ಪ್ರಕರಣ ದಾಖಲಾಗಿದೆ.

Comments

Leave a Reply

Your email address will not be published. Required fields are marked *