ಪತ್ನಿಗೆ ಬೇಲ್ ಕೊಟ್ಟ ಕೋರ್ಟ್- ಪತಿಯನ್ನು ಜೈಲಿನಿಂದ ಬಿಡುಗಡೆ ಮಾಡಿದ ಪೊಲೀಸರು

– ಜೈಲಿನ ಪೊಲೀಸ್ ಅಧಿಕಾರಿಗಳ ವಿರುದ್ಧ ತನಿಖೆ

ಚೆನ್ನೈ: ಕೊಲೆ ಪ್ರಕಣವೊಂದರಲ್ಲಿ ಜೈಲು ಸೇರಿದ್ದ ದಂಪತಿಯಲ್ಲಿ ಪತ್ನಿಗೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿದ್ದು, ಆದರೆ ಪೊಲೀಸರು ಪತಿಯನ್ನು ಜೈಲಿನಿಂದ ಬಿಡುಗಡೆ ಮಾಡಿರುವ ಘಟನೆ ತಮಿಳುನಾಡಿನ ಸೇಲಂನಲ್ಲಿ ನಡೆದಿದೆ.

ಸೇಲಂ ಜಿಲ್ಲೆಯ ವೆಲ್ಲಲಪಟ್ಟಿ ಗ್ರಾಮದ 43 ವರ್ಷದ ಸದಾ ಶಿವಂ ಕೊಲೆ ಪ್ರಕರಣದಲ್ಲಿ ಆರೋಪಿಗಳಾದ ರಂಜಿತ್ ಕುಮಾರ್, ಆತನ ಪತ್ನಿ ಪವಿತ್ರ ಹಾಗೂ ದಂಪತಿಯ ಪರಿಚಿತ ವಿಜಯ್ ಕುಮಾರ್ ಜೈಲು ಸೇರಿದ್ದರು. ಜೂನ್ 30 ರಂದು ಹತ್ಯೆ ನಡೆದಿತ್ತು. ಪರಿಣಾಮ ಮೂವರನ್ನು ಬಂಧಿಸಿ ಸೇಲಂನ ಸೆಂಟ್ರಲ್ ಜೈಲಿನಲ್ಲಿಡಲಾಗಿತ್ತು.

ಈ ನಡುವೆ ಪವಿತ್ರ ಮದ್ರಾಸ್ ಹೈ ಕೋರ್ಟಿನಲ್ಲಿ ಜಾಮೀನುಗಾಗಿ ಮನವಿ ಮಾಡಿ ಬುಧವಾರ ಅರ್ಜಿ ಸಲ್ಲಿಸಿದ್ದರು. ಮನವಿ ಸ್ವೀಕರಿಸಿದ ನ್ಯಾಯಾಲಯ ಅಂದೇ ಆರೋಪಿಗೆ ಜಾಮೀನು ಮಂಜೂರು ಮಾಡಿ ಆದೇಶ ನೀಡಿತ್ತು. ರಾತ್ರಿ ವೇಳೆಗೆ ಕೋರ್ಟ್ ಆದೇಶ ಜೈಲು ಅಧಿಕಾರಿಗಳ ಕೈ ಸೇರಿದ್ದು, ಆದರೆ ಪತ್ನಿ ಬದಲು ಪತಿ ರಂಜಿತ್ ಕುಮಾರ್‍ನನ್ನು ಬಿಡುಗಡೆ ಮಾಡಿದ್ದರು.

ನ್ಯಾಯಾಲಯದ ಆದೇಶ ಲಭಿಸಿದರೂ ಪವಿತ್ರಳನ್ನು ಬಿಡುಗಡೆ ಮಾಡದ ಹಿನ್ನೆಲೆಯಲ್ಲಿ ಆಕೆಯ ಕುಟುಂಸ್ಥರು ಜೈಲಿನ ಅಧಿಕಾರಿಗಳನ್ನು ಪ್ರಶ್ನಿಸಿದ್ದರು. ಕೂಡಲೇ ತಪ್ಪಿನ ಅರಿವಾಗಿ ಪೊಲೀಸರು ಗ್ರಾಮಕ್ಕೆ ತೆರಳಿ ರಂಜಿತ್ ಕುಮಾರ್‍ನನ್ನು ಬಂಧಿಸಿ ಮತ್ತೆ ಜೈಲಿಗೆ ಕರೆತಂದಿದ್ದಾರೆ. ಆ ಬಳಿಕ ನ್ಯಾಯಾಲಯದ ಆದೇಶದಂತೆ ಆರೋಪಿ ಪವಿತ್ರಗಳನ್ನು ಬಿಡುಗಡೆ ಮಾಡಿದ್ದಾರೆ.

 

ಘಟನೆ ಕುರಿತು ಮಾಹಿತಿ ಪಡೆದಿರುವ ಜೈಲಿನ ಉನ್ನತ ಪೊಲೀಸ್ ಅಧಿಕಾರಿ, ಉದ್ದೇಶ ಪೂರ್ವಕವಾಗಿ ರಂಜಿತ್ ಕುಮಾರ್ ನನ್ನು ಬಿಡುಗಡೆ ಮಾಡಲಾಗಿತ್ತಾ ಅಥವಾ ಎಡವಟ್ಟಿನಿಂದ ಘಟನೆ ನಡೆದಿದೆಯಾ ಎಂಬ ಬಗ್ಗೆ ತನಿಖೆ ನಡೆಸಲು ಸೂಚನೆ ನೀಡಿದ್ದಾರೆ. ಅಲ್ಲದೇ ಘಟನೆಯಲ್ಲಿ ತಪ್ಪು ಮಾಡಿರುವ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳುವುದಾಗಿ ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *