ಪತಿಯ ಪಾಸ್‍ಪೋರ್ಟಿನಿಂದ ಪ್ರಿಯಕರನನ್ನ ಆಸ್ಟ್ರೇಲಿಯಾಗೆ ಕರ್ಕೊಂಡು ಹೋದ ಪತ್ನಿ

– ಲಾಕ್‍ಡೌನ್‍ನಿಂದಾಗಿ ಸಿಕ್ಕಿಬಿದ್ದ ಹೆಂಡತಿ
– ಮುಂಬೈನಿಂದ ಮನೆಗೆ ಬಂದ ಪತಿಗೆ ಶಾಕ್

ಲಕ್ನೋ: 36 ವರ್ಷದ ಮಹಿಳೆಯೊಬ್ಬಳು ತನ್ನ ಪತಿಯ ಪಾಸ್‍ಪೋರ್ಟಿನಿಂದ ಪ್ರಿಯಕರನನ್ನು ಆಸ್ಟ್ರೇಲಿಯಾ ಪ್ರವಾಸಕ್ಕೆ ಕರೆದುಕೊಂಡು ಹೋಗಿರುವ ಘಟನೆ ಉತ್ತರ ಪ್ರದೇಶದ ಪಿಲಿಭಿತ್ ಜಿಲ್ಲೆಯಲ್ಲಿ ನಡೆದಿದೆ.

ಮಹಿಳೆ ಜಿಲ್ಲೆಯ ದಮ್‍ಗರ್ಹಿ ಗ್ರಾಮದ ನಿವಾಸಿಯಾಗಿದ್ದು, ಜನವರಿಯಲ್ಲಿ ತನ್ನ ಪ್ರಿಯಕರನ ಜೊತೆ ಆಸ್ಟ್ರೇಲಿಯಾ ಪ್ರವಾಸಕ್ಕೆ ಹೋಗಿದ್ದಳು. ಮಾರ್ಚ್‍ನಲ್ಲಿ ಇಬ್ಬರೂ ವಾಪಸ್ ಬರಲು ಪ್ಲಾನ್ ಮಾಡಿದ್ದರು. ಆದರೆ ಕೊರೊನಾದಿಂದಾಗಿ ದೇಶಾದ್ಯಂತ ಅಂತರರಾಷ್ಟ್ರೀಯ ವಿಮಾನ ಹಾರಾಟವನ್ನು ಸ್ಥಗಿತಗೊಳಿಸಲಾಗಿತ್ತು. ಹೀಗಾಗಿ ಜೋಡಿ ಆಸ್ಟ್ರೇಲಿಯಾದಲ್ಲಿಯೇ ಲಾಕ್ ಆಗಿದ್ದರು. ಇದೀಗ ಆಗಸ್ಟ್ 24 ರಂದು ತಮ್ಮ ಮನೆಗೆ ಮರಳಲಿದ್ದಾರೆ.

ಮಹಿಳೆ ಮನೆಗೆ ಮರಳಿದ ನಂತರ 46 ವರ್ಷದ ಪತಿ ಪೊಲೀಸ್ ಠಾಣೆಗೆ ಹೋಗಿ ಪತ್ನಿಯ ವಿರುದ್ಧ ದೂರು ದಾಖಲಿಸಿದ್ದಾರೆ. ನನ್ನ ಪತ್ನಿ ಸ್ಥಳೀಯ ನಿವಾಸಿ ಸಂದೀಪ್ ಸಿಂಗ್ ಜೊತೆ ವಿವಾಹೇತರ ಸಂಬಂಧ ಹೊಂದಿದ್ದಾಳೆ. ಅಲ್ಲದೇ ನನ್ನ ಹೆಸರಿನಲ್ಲಿ ಪಡೆದ ನಕಲಿ ದಾಖಲೆಗಳನ್ನು ಬಳಸಿಕೊಂಡು ಆಸ್ಟ್ರೇಲಿಯಾಕ್ಕೆ ಪ್ರಯಾಣಿಸಿದ್ದಾರೆ ಎಂದು ದೂರು ದಾಖಲಿಸಿದ್ದಾರೆ.

ನಾನು 20 ವರ್ಷಗಳಿಂದ ಮುಂಬೈನಲ್ಲಿ ಕೆಲಸ ಮಾಡುತ್ತಿದ್ದೇನೆ. ನಮ್ಮ ಪೂರ್ವಜರ ಆಸ್ತಿ ಪಿಲಿಭಿತ್‍ನಲ್ಲಿದೆ. ಹೀಗಾಗಿ ಪತ್ನಿ ಇಲ್ಲಿಯೇ ಇದ್ದುಕೊಂಡು ಆಸ್ತಿಯನ್ನು ನೋಡಿಕೊಳ್ಳುತ್ತಿದ್ದಳು. ಆಗಾಗ ಮನೆಗೆ ಬಂದು ಪತ್ನಿಯನ್ನು ಭೇಟಿ ಮಾಡುತ್ತಿದ್ದೆ. ನಾನು ಮೇ 18 ರಂದು ಮುಂಬೈನಿಂದ ಪಿಲಿಭಿತ್‍ಗೆ ಹಿಂದಿರುಗಿದಾಗ ನನ್ನ ಪತ್ನಿ ಮನೆಯಲ್ಲಿ ಇರಲಿಲ್ಲ. ಸಂದೀಪ್ ಸಿಂಗ್ ಮತ್ತು ಪತ್ನಿ ಇಬ್ಬರೂ ಆಸ್ಟ್ರೇಲಿಯಾಕ್ಕೆ ಹೋಗಿದ್ದಾರೆ ಎಂದು ಸಂದೀಪ್ ಕುಟುಂಬದವರೇ ನನಗೆ ತಿಳಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಪತಿ ಆಸ್ಟ್ರೇಲಿಯಾಗೆ ಹೋಗಿರುವ ಬಗ್ಗೆ ಖಚಿತಪಡಿಸಿಕೊಳ್ಳಲು ಬರೇಲಿಯ ಪಾಸ್‍ಪೋರ್ಟ್ ಕಚೇರಿಯಲ್ಲಿ ಪಾಸ್‍ಪೋರ್ಟ್ ಗಾಗಿ ಉದ್ದೇಶಪೂರ್ವಕವಾಗಿ ಅರ್ಜಿಯನ್ನು ಸಲ್ಲಿಸಿದ್ದಾರೆ. ಆದರೆ ಈಗಾಗಲೇ ಅವರ ಹೆಸರಿನಲ್ಲಿ ಪಾಸ್‍ಪೋರ್ಟ್ ಮಾಡಿಸಿದ್ದು, ಅದನ್ನು ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸದ್ಯಕ್ಕೆ ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದೇವೆ. ಸ್ಥಳೀಯ ಗುಪ್ತಚರ ಘಟಕದ ಇನ್ಸ್‌ಪೆಕ್ಟರ್ (ಎಲ್‍ಐಯು) ಕಾಂಚನ್ ರಾವತ್ ತನಿಖೆ ನಡೆಸಲಿದ್ದಾರೆ. ದೂರುದಾರರ ಹೆಸರಿನಲ್ಲಿ ಪಾಸ್‍ಪೋರ್ಟ್ ಹೇಗೆ ನೀಡಲಾಗಿದೆ ಎಂಬುದನ್ನು ಎಲ್‍ಐಯು ತನಿಖೆ ಮಾಡುತ್ತಿದೆ ಎಂದು ಎಸ್‍ಪಿ ಜೈ ಪ್ರಕಾಶ್ ಯಾದವ್ ಹೇಳಿದ್ದಾರೆ.

Comments

Leave a Reply

Your email address will not be published. Required fields are marked *