ಪಟಾಕಿ ಮಾರಾಟ ನಿಷೇಧಿಸಿದ ರಾಜಸ್ಥಾನ ಸರ್ಕಾರ

FIREWORKS

ಜೈಪುರ: ಕೊರೊನಾ ರೋಗಿಗಳು ಮತ್ತು ಸಾರ್ವಜನಿಕರ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಹಿನ್ನೆಲೆಯಲ್ಲಿ ದೀಪಾಳಿಯ ಸಂದರ್ಭದಲ್ಲಿ ರಾಜಸ್ಥಾನ ಸರ್ಕಾರ ಪಟಾಕಿ ಮಾರಾಟದ ಮೇಲೆ ನಿಷೇಧ ವಿಧಿಸಿದೆ.

ದೀಪಾವಳಿ ಹತ್ತಿರವಾಗುತ್ತಿರುವ ಹಿನ್ನೆಲೆ ಮಹತ್ವದ ನಿರ್ಧಾರವನ್ನು ರಾಜಸ್ಥಾನ ಸರ್ಕಾರ ಘೋಷಣೆ ಮಾಡಿದ್ದು, ರಾಜ್ಯದಲ್ಲಿ ಪಟಾಕಿ ಮಾರಾಟ ಮಾಡದಂತೆ ಸೂಚಿಸಿದೆ. ಪಟಾಕಿಯಿಂದ ವಾಯು ಮಾಲಿನ್ಯ ಉಂಟಾಗುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಈ ನಿರ್ಧಾರವನ್ನು ಪ್ರಕಟಿಸಿದೆ.

ಸಿಎಂ ಅಶೋಕ್ ಗೆಹ್ಲೋಟ್ ಅವರ ನೇತೃತ್ವದಲ್ಲಿ ಭಾನುವಾರ ನಡೆದ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ. ಅಲ್ಲದೇ ಫಿಟ್ನೆಸ್ ಪ್ರಮಾಣ ಪತ್ರವಿಲ್ಲದೆ ರಸ್ತೆಗಳಲ್ಲಿ ಸಂಚರಿಸುವ ವಾಹನಗಳ ವಿರುದ್ಧವೂ ಕ್ರಮಕೈಗೊಳ್ಳಲಾಗುವುದು. ಶಾಲಾ ಕಾಲೇಜುಗಳನ್ನು ನವೆಂಬರ್ 16ರ ವರೆಗೂ ಮುಚ್ಚಲು ಇದೇ ವೇಳೆ ಗೆಹ್ಲೋಟ್ ಸರ್ಕಾರ ತೀರ್ಮಾನ ಮಾಡಿದೆ.

ಕೊರೊನಾ ವೈರಸ್ ನಿಂದ ಉಂಟಾದ ಬಿಕ್ಕಟ್ಟಿನ ಪರಿಸ್ಥಿತಿಯನ್ನು ಪರಿಶೀಲನೆ ನಡೆಸಲು ನೋ ಮಾಸ್ಕ್ ನೋ ಎಂಟ್ರಿ, ವಾರ್ ಫಾರ್ ಪ್ಯೂರ್ ಎಂಬ ಅಭಿಯಾನವನ್ನು ಅಲ್ಲಿನ ರಾಜ್ಯ ಸರ್ಕಾರ ಆರಂಭ ಮಾಡುತ್ತಿದೆ. ಇದೇ ವೇಳೆ ಅನ್‍ಲಾಕ್ 6ರ ಮಾರ್ಗಸೂಚಿಗಳ ಬಗ್ಗೆಯೂ ಚರ್ಚೆ ನಡೆಸಿದ್ದಾರೆ. ಕೊರೊನಾ ವೈರಸ್ ಸೋಂಕಿತ ರೋಗಿಗಳು ಮತ್ತು ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಪಟಾಕಿ ಮಾರಾಟ ನಿಷೇಧ ನಿರ್ಧಾರವನ್ನು ಮಾಡಿದ್ದಾರೆ.

ಕೊರೊನಾದಂತಹ ಸಂದರ್ಭದಲ್ಲಿ ಜನರು ದೀಪಾಳಿಯಂದು ಪಟಾಕಿ ಬಳಕೆ ಮಾಡುವುದನ್ನು ತಪ್ಪಿಸಬೇಕು ಎಂದು ಸಿಎಂ ಗೆಹ್ಲೋಟ್ ಮನವಿ ಮಾಡಿದ್ದಾರೆ. ಇತ್ತ ರಾಷ್ಟ್ರ ರಾಜಧಾನಿ ದೆಹಲಿಯಲ್ಲೂ ವಾಯು ಮಾಲಿನ್ಯ ಹೆಚ್ಚಾಗಿದ್ದು, ದೆಹಲಿ ಸರ್ಕಾರವೂ ಕೂಡ ಪಟಾಕಿ ನಿಷೇಧ ಮಾಡುವ ಚಿಂತನೆ ನಡೆಸಿದೆ ಎನ್ನಲಾಗಿದೆ. ಈ ಹಿಂದೆಯೂ ದೆಹಲಿಯಲ್ಲಿ ಪಟಾಕಿಗಳ ಮೇಲೆ ಹಬ್ಬದ ಸಂದರ್ಭಗಳಲ್ಲಿ ನಿಷೇಧ ವಿಧಿಸಲಾಗಿತ್ತು.

Comments

Leave a Reply

Your email address will not be published. Required fields are marked *