ಚಿಕ್ಕಮಗಳೂರು: ಮನೆಗೆ ಪಟಾಕಿ ತೆಗೆದುಕೊಂಡು ವಾಪಸ್ ಹಿಂದಿರುಗುವಾಗ ಬೈಕಿಗೆ ಜೀಪ್ ಡಿಕ್ಕಿಯಾದ ಪರಿಣಾಮ ಯುವಕನೋರ್ವ ಸ್ಥಳದಲ್ಲೇ ಸಾವನ್ನಪ್ಪಿರೋ ಘಟನೆ ಜಿಲ್ಲೆಯ ತರೀಕೆರೆ ತಾಲೂಕಿನ ಬಾವಿಕೆರೆ ಗ್ರಾಮದಲ್ಲಿ ನಡೆದಿದೆ.
ಮೃತನನ್ನು 25 ವರ್ಷದ ಅರುಣ್ ಎಂದು ಗುರುತಿಸಲಾಗಿದೆ. ಬಾವಿಕೆರೆಯಿಂದ ಸುಮಾರು 8 ಕಿ.ಮೀ ದೂರದ ರಂಗೇನಹಳ್ಳಿಗೆ ಪಟಾಕಿ ತರಲು ಹೋದವನು ಇನ್ನೇನು ಬಂದೇ ಬಿಟ್ಟ ಎಂದು ಮನೆಯವರು ದಾರಿ ಕಾಯುತ್ತಿದ್ದರು. ಆದರೆ ಅರುಣ್ ದಾರಿ ಎದುರು ನೋಡುತ್ತಿದ್ದ ಮನೆಯವರಿಗೆ ಬಿಗ್ ಶಾಕ್ ಕಾದಿತ್ತು. ಬೆಳಗ್ಗೆಯಿಂದ ಮನೆಯಲ್ಲಿದ್ದವನು ಸಂಜೆ ಪಟಾಕಿ ತರಲು ಹೋಗಿ ವಾಪಸ್ ಬರಲಿಲ್ಲ ಎಂಬ ವಿಷಯ ಕೇಳಿ ಆತನ ಮನೆಯಲ್ಲಿ ಹಬ್ಬದ ಸಂಭ್ರಮವೇ ಇಲ್ಲದಂತಾಗಿತ್ತು.

ಮೃತ ಅರುಣ್ ಬಾವಿಕೆರೆ ಗ್ರಾಮದಿಂದ ರಂಗೇನಹಳ್ಳಿಗೆ ಪಟಾಕಿ ತರಲು ತನ್ನ ಸ್ನೇಹಿತ ಕಿರಣ್ ಜೊತೆ ಹೋಗಿದ್ದ. ಪಟಾಕಿಯನ್ನು ತೆಗೆದುಕೊಂಡು ವಾಪಸ್ ಬರುವಾಗ ಬಾವಿಕೆರೆ ಸಮೀಪ ಎದುರಿನಿಂದ ಬಂದ ಜೀಪ್ ಬೈಕಿಗೆ ಡಿಕ್ಕಿ ಹೊಡೆದಿದೆ. ಈ ವೇಳೆ ಅರುಣ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಹಿಂಬದಿ ಸವಾರ ಕಿರಣ್‍ಗೆ ಗಂಭೀರ ಗಾಯವಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.

ಸದ್ಯ ಕಿರಣ್ ಸ್ಥಿತಿ ಕೂಡ ಚಿಂತಾಜನಕವಾಗಿದೆ. ಕಿರಣ್ ಕೂಡ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದರು. ದೀಪಾವಳಿ ಹಬ್ಬಕ್ಕಾಗಿ ಊರಿಗೆ ಬಂದಾಗ ಈ ದುರ್ಘಟನೆ ಸಂಭವಿಸಿದೆ. ಈ ಸಂಬಂಧ ಲಕ್ಕವಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply