– ಮಹದಾಯಿ ತಾಯಿ ಸಮಾನ, ಗೋವಾದ ಜೀವನದಿ ಎಂದ ಸಾವಂತ್
ಬೆಳಗಾವಿ: ಒಂದೇ ಸಲಕ್ಕೆ ಕರ್ನಾಟಕದ ವಿರುದ್ಧ ನೆರೆ ರಾಜ್ಯಗಳು ತಿರುಗಿ ಬಿದ್ದಿದ್ದು, ಮಹಾರಾಷ್ಟ್ರ ಗಡಿ ಕ್ಯಾತೆ ಬೆನ್ನಲ್ಲೆ ಗೋವಾದಿಂದ ಮಹದಾಯಿ ಕ್ಯಾತೆ ಶುರುವಾಗಿದೆ. ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಮಹಾದಾಯಿಗಾಗಿ ತೊಡೆ ತಟ್ಟಿ ನಿಂತಿದ್ದಾರೆ. ಆದರೆ ರಾಜ್ಯ ಸರ್ಕಾರದ ಸಿಎಂ ಹಾಗೂ ಯಾವುದೇ ಸಚಿವರು ಈ ಬಗ್ಗೆ ತುಟಿ ಬಿಚ್ಚಿಲ್ಲ.

ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಉದ್ಧಟತನ ಹೇಳಿಕೆ ಬೆನ್ನಲ್ಲೇ ಈಗ ಗೋವಾ ಸಿಎಂ ಪ್ರಮೋದ್ ಸಾವಂತ್ ಕ್ಯಾತೆ ತೆಗೆದಿದ್ದಾರೆ. ಕರ್ನಾಟಕದ ವಿರುದ್ಧ ತೊಡೆ ತಟ್ಟಿ ನಿಂತಿರುವ ಸಾವಂತ್, ಗೋವಾ ಅಧಿವೇಶನದಲ್ಲಿ ಮಹದಾಯಿ ವಿಷಯ ಪ್ರಸ್ತಾಪಿಸಿದ್ದಾರೆ. ಪಕ್ಷವನ್ನೂ ಬದಿಗಿಟ್ಟು ಮಹದಾಯಿ ನೋಡುವೆ ಎಂದು ಹೇಳುವ ಮೂಲಕ ತಮ್ಮದೇ ಪಕ್ಷದ ವಿರುದ್ಧ ಗುಟುರು ಹಾಕಿದ್ದಾರೆ. ಇಷ್ಟಾದರೂ ರಾಜ್ಯದ ಯಾವೊಬ್ಬ ರಾಜಕಾರಣಿ ಈ ಬಗ್ಗೆ ತುಟಿ ಬಿಚ್ಚಿಲ್ಲ.

ಕೇಂದ್ರ, ಕರ್ನಾಟಕ ಹಾಗೂ ಗೋವಾದಲ್ಲಿ ಬಿಜೆಪಿಯದ್ದೇ ಸರ್ಕಾರ ಇದೆ. ಹೀಗಾಗಿ ಮಹದಾಯಿ ವಿವಾದವನ್ನು ಬೇಗ ಬಗೆಹರಿಸಬಹುದು ಎಂದು ಭಾವಿಸಿರುವಾಗಲೇ ಗೋವಾ ಸಿಎಂ ಉಲ್ಟಾ ಹೊಡೆದಿದ್ದಾರೆ. ಮಹದಾಯಿ ವಿಷಯದಲ್ಲಿ ಪಕ್ಷದ ಮಾತು ಕೇಳಲ್ಲ. ಮಹದಾಯಿ ನನಗೆ ತಾಯಿ ಸಮಾನ, ಮಹದಾಯಿ ಗೋವಾದ ಜೀವನದಿ, ಈ ಜೀವನದಿಗಾಗಿ ನಾನು ಪಕ್ಷ ಮತ್ತು ರಾಜಕೀಯವನ್ನು ಬದಿಗಿಡುವೆ. ಕರ್ನಾಟಕದಲ್ಲಿ ನಮ್ಮದೇ ಬಿಜೆಪಿ ಸರ್ಕಾರ ಇದೆ. ಹಾಗಂತ ಪಕ್ಷದ ಮಾತು ಕೇಳಿ ರಾಜಿ ಆಗುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.

ಮಹದಾಯಿ ವಿಷಯದಲ್ಲಿ ಯಾರ ಒತ್ತಡಕ್ಕೂ ಮಣಿಯುವುದಿಲ್ಲ. ಪಕ್ಷದಿಂದ ಯಾವ ಒತ್ತಡ ಬಂದರೂ ಒಪ್ಪಲಾರೆ ಎಂದು ಗೋವಾದಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ ಸಿಎಂ ಪ್ರಮೋದ್ ಸಾವಂತ್ ಹೇಳಿಕೆ ನೀಡಿದ್ದಾರೆ.

Leave a Reply