ಪಕ್ಷದಿಂದ ಸಂತ್ರಸ್ತರ ಪರವಾಗಿ ಧ್ವನಿ ಎತ್ತುತ್ತೇವೆ: ನಿಖಿಲ್ ಕುಮಾರಸ್ವಾಮಿ

ಮಡಿಕೇರಿ: ಸಂತ್ರಸ್ತರ ಪರವಾಗಿ ಮುಂದಿನ ದಿನಗಳಲ್ಲಿ ಧ್ವನಿ ಎತ್ತುತ್ತೇವೆ ಎಂದು ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.

ಕೊಡಗು ಜಿಲ್ಲೆಯಲ್ಲಿ ಸುರಿದ ಧಾರಾಕಾರ ಮಳೆಯಿಂದ ಕಾವೇರಿ ನದಿಯ ಪ್ರವಾಹಕ್ಕೆ ಸಿಲುಕಿದ ಕುಶಾಲನಗರದ ಕುವೆಂಪು, ಸಾಯಿ ಬಡಾವಣೆ, ತೆಪ್ಪದಕಂಡಿ, ನಂಜರಾಯಪಟ್ಟಣ, ನೆಲ್ಯಹುದಿಕೇರಿ, ಕುಂಬಾರಗುಂಡಿ ಹಾಗೂ ನೆಲ್ಯಹುದಿಕೇರಿ ಪ್ರದೇಶಗಳಿಗೆ ಭೇಟಿ ನೀಡಿ ನಿವಾಸಿಗಳ ಸಂಕಷ್ಟವನ್ನು ಆಲಿಸಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಅವರು, ನಾನು ಇಲ್ಲಿಗೆ ರಾಜಕೀಯ ಮಾಡಲು ಬಂದಿಲ್ಲ. ಯಾರೇ ಸರ್ಕಾರವನ್ನು ನಡೆಸಲಿ ಸಂಕಷ್ಟದಲ್ಲಿರುವ ಕುಟುಂಬಗಳಿಗೆ ತುರ್ತಾಗಿ ಸ್ಪಂದಿಸಬೇಕು. ಆಡಳಿತದ ಸರ್ಕಾರ ಘೋಷಣೆ ಹಾಗೂ ಭರವಸೆಗಳು ಹಾಗೆಯೇ ಉಳಿದುಕೊಳ್ಳಬಾರದು. ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ಕೊಟ್ಟಿದ್ದೇನೆ. ಪ್ರವಾಹ ಪೀಡಿತ ಪ್ರದೇಶಗಳಲ್ಲಿನ ನಿವಾಸಿಗಳು ಕೂಲಿ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ ಎಂದು ಹೇಳಿದರು.

ವಿಪರೀತ ಮಳೆ ಹಾಗೂ ಭೂಕುಸಿತದಿಂದ ಜಿಲ್ಲೆಯ ಜನತೆ ನಲುಗಿದ್ದಾರೆ. ಇಲ್ಲಿನ ಜನರು ಶಾಶ್ವತವಾದ ಪರಿಹಾರವನ್ನು ಕೇಳುತ್ತಿದ್ದಾರೆ. ಇಲ್ಲಿನ ಜನರು ಹಣಕ್ಕೆ ಆಸೆ ಪಡುತ್ತಿಲ್ಲ. ತಾತ್ಕಾಲಿಕ ಪರಿಹಾರವನ್ನು ಯಾರೂ ನಿರಿಕ್ಷಿಸುತ್ತಿಲ್ಲ. 2018 ರ ಸಮ್ಮಿಶ್ರ ಸರ್ಕಾರದಲ್ಲಿ 9.85 ಲಕ್ಷ ವೆಚ್ಚದಲ್ಲಿ ನಿರಾಶ್ರಿತರಿಗೆ ಒಂದು ಸಾವಿರ ಮನೆಗಳನ್ನು ಕಟ್ಟಿಕೊಡಲಾಗಿತ್ತು ಎಂದರು.

ಮನೆಗಳನ್ನು ಕಳೆದುಕೊಂಡವರಿಗೆ ತಕ್ಷಣವೇ ಒಂದು ಲಕ್ಷ ಪರಿಹಾರ, ಮನೆಯ ವಸ್ತುಗಳು ಹಾಳಾಗಿದ್ದರೆ ಸುಮಾರು 50 ಸಾವಿರ ಹಾಗೆಯೇ ಸಂಪೂರ್ಣ ಮನೆಗಳನ್ನು ಕಳೆದುಕೊಂಡ ಕೆಲವು ಕುಟುಂಬಗಳಿಗೆ ಮನೆಗಳನ್ನು ಕಟ್ಟಿಕೊಳ್ಳುವವರೆಗೆ 10 ಸಾವಿರ ಬಾಡಿಗೆಯನ್ನು ಕೊಡಲಾಗಿತ್ತು ಎಂದು ತಿಳಿಸಿದರು.

Comments

Leave a Reply

Your email address will not be published. Required fields are marked *