ಪಕ್ಷದಲ್ಲಿ ನಿಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳಿ – ಸಿದ್ದರಾಮಯ್ಯಗೆ ಸಿಟಿ ರವಿ ಟ್ವೀಟೇಟು

– ನಿಮ್ಮ ಪಾರ್ಟಿ ಮನೆಯೊಂದು ನೂರು ಬಾಗಿಲಾಗಿದೆ

ಬೆಂಗಳೂರು: ನಿಮ್ಮ ಪಕ್ಷದಲ್ಲಿ ನಿಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳಿ ಎಂದು ಟ್ವೀಟ್ ಮಾಡುವ ಮೂಲಕ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿಯವರು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯಗೆ ಟಾಂಗ್ ನೀಡಿದ್ದಾರೆ.

ಸದ್ಯ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮತ್ತು ಸಿದ್ದರಾಮಯ್ಯ ಅವರ ನಡುವೆ ಟ್ವಿಟ್ಟರ್ ವಾರ್ ನಡೆಯುತ್ತಿದೆ. ಇಂದು ನಳಿನ್ ಅವರನ್ನು ಸಿದ್ದರಾಮಯ್ಯ ಕಾಡುಮನುಷ್ಯನಿಗೆ ಹೊಲಿಕೆ ಮಾಡಿದಕ್ಕೆ ಬಿಜೆಪಿ ನಾಯಕರು ಸಿದ್ದರಾಮಯ್ಯನ ಮೇಲೆ ಮುಗಿಬಿದ್ದಿದ್ದಾರೆ. ಈಗ ಸಿಟಿ ರವಿಯವರೂ ಕೂಡ ಸರಣಿ ಟ್ವೀಟ್ ಮಾಡಿ ಕಿಡಿ ಕಾರಿದ್ದಾರೆ.

ಬದುಕಿನಲ್ಲಿ ನೋವು, ಬೇಸರ ಸಾಮಾನ್ಯ, ಆದರೆ ನೋವನ್ನು ಹೇಳಿಕೊಳ್ಳುವ ಮತ್ತದಕ್ಕೆ ಪರಿಹಾರ ಕಂಡುಕೊಳ್ಳುವ ದಾರಿಗಳಿದ್ದಾವೆ. ಅದಿಲ್ಲದಿದ್ದಾಗ ನಾಲಗೆ ಹರಿಬಿಡುವುದೊಂದೆ ದಾರಿಯಾಗುತ್ತದೆ. ಅಂತಹ ಪರಿಸ್ಥಿತಿ ತಮಗೆ ನಿರ್ಮಾಣವಾಗಿರುವುದು ವಿಷಾದನೀಯ ಮಾಜಿ ಮುಖ್ಯಮಂತ್ರಿಗಳೇ ಹಿಂದೊಂದು ಪಕ್ಷ ತಮ್ಮನ್ನು ಮೂಲೆಗುಂಪು ಮಾಡಿದ ಸಂದರ್ಭದಲ್ಲಿ ಕಾಂಗ್ರೆಸ್ ಸೇರಿಕೊಂಡು ತಮ್ಮ ಬೇಳೆ ಬೇಯಿಸಿಕೊಂಡದ್ದನ್ನು ಮರೆಯದಿರಿ ಎಂದು ಟ್ವೀಟ್ ಮಾಡಿದ್ದಾರೆ.

ಈಗ ಕಾಂಗ್ರೆಸ್ ಪಕ್ಷದಲ್ಲಿ ಮೂಲೆಗುಂಪಾಗುತ್ತಿರುವ ನೋವನ್ನು ತೋಡಿಕೊಳ್ಳುವ ದಾರಿಯಿಲ್ಲದೆ, ಬಿಜೆಪಿ ರಾಜ್ಯಾಧ್ಯಕ್ಷರ ಬಗ್ಗೆ ಕೀಳಾಗಿ ಮಾತನಾಡಿದ್ದು ದುರದೃಷ್ಟಕರ ಮತ್ತು ಅತ್ಯಂತ ಕೀಳು ಮಟ್ಟದ ರಾಜಕೀಯ. ರಾಜ್ಯದಲ್ಲಿ ಸನ್ಮಾನ್ಯ ಮುಖ್ಯಮಂತ್ರಿಯವರಾದ ಬಿಎಸ್‍ವೈಯವರೆ ನಮ್ಮ ನಾಯಕರು. ಅವರ ನಾಯಕತ್ವದಲ್ಲಿ ಚುನಾವಣೆ ಎದುರಿಸುತ್ತಿದ್ದೇವೆ. ನೀವು ಮೊದಲು ನಿಮ್ಮ ಮನೆಯ ಯಜಮಾನ ಯಾರು ಅನ್ನುವುದನ್ನು ನಿರ್ಧಾರ ಮಾಡಿ. ಮನೆಯೊಂದು ನೂರು ಬಾಗಿಲು ಎಂಬಂತೆ ಇರುವ ನಿಮ್ಮ ಪಕ್ಷವನ್ನು, ಪಕ್ಷದಲ್ಲಿ ನಿಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳಿ ಎಂದು ಕಾಲೆಳೆದಿದ್ದಾರೆ. ಇದನ್ನು ಓದಿ: ಸಿದ್ದರಾಮಯ್ಯನವರೇ ನಿಮ್ಮ ಖಾತೆ ಹ್ಯಾಕ್ ಆಗಿದ್ಯಾ- ಕಟೀಲ್ ಪ್ರಶ್ನೆ

ನಮ್ಮ ಪಕ್ಷ ವಿಧಾನ ಪರಿಷತ್ತಿನ 4 ಸ್ಥಾನಗಳನ್ನು ಹಾಗೂ ವಿಧಾನಸಭೆಯ 2 ಕ್ಷೇತ್ರಗಳಲ್ಲಿ ಜಯಶಾಲಿಯಾಗುತ್ತದೆ. ಹಾಗಾಗಿ ಸೋಲನ್ನು “ಯಾರ ತಲೆಗೆ ಕಟ್ಟುವುದು” ಎಂಬ ವಿಚಾರ ನಿಮ್ಮ ಪಕ್ಷಕ್ಕೆ ಅನ್ವಯವಾಗುವಂತದ್ದು. ನೀವು ಬಿಜೆಪಿಯ ಚಿಂತೆ ಬಿಟ್ಟುಬಿಡಿ. ಕಳೆದ ಚುನಾವಣೆಯ ಸಮಯದಲ್ಲಿ “ಇದೇ ನನ್ನ ಕೊನೆಯ ಚುನಾವಣೆ” ಎಂದಿದ್ದಿರಿ. ಇತ್ತೀಚೆಗೆ “ಮತ್ತೊಮ್ಮೆ ಮುಖ್ಯಮಂತ್ರಿಯಾದರೆ” ಎಂಬ ಹೊಸ ಆಸೆಯನ್ನು ವ್ಯಕ್ತಪಡಿಸಿದ್ದೀರಿ. ಇದು ಯಾರನ್ನು “ಕೆಡವುವ ಟಾಸ್ಕ್” ಎಂದು ನಾವು ಕೇಳಬಹುದಲ್ಲವೇ ಮಾಜಿ ಮುಖ್ಯಮಂತ್ರಿಯವರೆ ಎಂದು ಟ್ವೀಟ್ ಮಾಡಿ ಪ್ರಶ್ನೆ ಮಾಡಿದ್ದಾರೆ.

ಕಸ ಗುಡಿಸುವವರ, ಬಂಡೆ ಒಡೆಯುವ ಶ್ರಮಿಕ ವರ್ಗದ ಬಗೆಗಿನ ನಿಮ್ಮ ಹೇಳಿಕೆಗಳು ಅವರ ವೃತ್ತಿ ಧರ್ಮಕ್ಕೆ ಅವಮಾನ ಮಾಡುವಂತದ್ದು. ಪೂಜ್ಯ ಬಸವಣ್ಣನವರ “ಕಾಯಕವೇ ಕೈಲಾಸ” ತತ್ವದ ಬಗ್ಗೆ ನಿಮಗೆ ನಂಬಿಕೆ ಇಲ್ಲ ಎಂಬುದನ್ನು ಶ್ರುತಪಡಿಸುತ್ತದೆ. ಶ್ರಮಿಕ ವರ್ಗ ಗೌರವಯುತವಾಗಿ ಬದುಕುವ ಮನುಷ್ಯರು ಎಂದು ಅರ್ಥ ಮಾಡಿಕೊಳ್ಳಿ ಮಾಜಿ ಮುಖ್ಯಮಂತ್ರಿಯವರೆ. ಇನ್ನು ನಮ್ಮ ಪಕ್ಷದ ರಾಜ್ಯಾಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್ ಅವರ ಬಗ್ಗೆ ನೀವು ಆಡಿರುವ ಮಾತುಗಳು ಯಾವುದೇ ಪ್ರತಿಕ್ರಿಯೆಗೆ ಯೋಗ್ಯವಾದದ್ದಲ್ಲ. ಇಂತಹ ಮಾತುಗಳ ಬಗ್ಗೆ ದಾಸಶ್ರೇಷ್ಠ ಶ್ರೀ ಪುರಂದರದಾಸರು ಶತಮಾನಗಳ ರಚಿಸಿದ್ದ ಕೀರ್ತನೆ ನಿಮಗೆ ಗೊತ್ತಿರಬೇಕಲ್ಲವೇ ಎಂದಿದ್ದಾರೆ.

Comments

Leave a Reply

Your email address will not be published. Required fields are marked *