ಪಂಚಮಸಾಲಿ ಶ್ರೀಗಳ ಧರಣಿ ಸತ್ಯಾಗ್ರಹ ಅಂತ್ಯ – ಸಿಎಂ ಭರವಸೆಗೆ ಜಯಮೃತ್ಯುಂಜಯ ಶ್ರೀಗಳ ಹರ್ಷ

ಬೆಂಗಳೂರು: 2ಎ ಮೀಸಲಾತಿಗಾಗಿ ಆಗ್ರಹಿಸಿ ಬೆಂಗಳೂರಲ್ಲಿ ನಡೆಯುತ್ತಿದ್ದ ಪಂಚಮಸಾಲಿ ಸಮುದಾಯದ ಧರಣಿ ಕೊನೆಗೂ ಅಂತ್ಯ ಕಂಡಿದೆ. ಸಿಎಂ ಪ್ರತಿಕ್ರಿಯೆಗೆ ಜಯಮೃತ್ಯುಂಜಯ ಶ್ರೀಗಳು ಪಟ್ಟು ಹಿಡಿದಿದ್ದರು. ಶಾಸಕ ಯತ್ನಾಳ್ ಆಹೋರಾತ್ರಿ ಧರಣಿಗೆ ಪ್ಲಾನ್ ಮಾಡಿದ್ದರು. ಹೀಗಾಗಿ ಬೀಸೋ ದೊಣ್ಣೆಯಿಂದ ತಪ್ಪಿಸಿಕೊಳ್ಳೋ ಸಲುವಾಗಿ ಎಂಬಂತೆ ಯಡಿಯೂರಪ್ಪ ಮೀಸಲಾತಿ ಸಂಬಂಧ ಆರು ತಿಂಗಳ ಗಡುವು ಕೇಳಿದ್ದಾರೆ.

ಇವತ್ತು ಕಲಾಪ ಆರಂಭವಾಗುತ್ತಲೇ ಶಾಸಕ ಯತ್ನಾಳ್ ವಿಷಯ ಪ್ರಸ್ತಾಪಿಸಿದರು. ಕೂಡಲೇ ಪ್ರತಿಕ್ರಿಯೆ ನೀಡಿದ ನೀಡಿದ ಸಿಎಂ ಯಡಿಯೂರಪ್ಪ, ಆರೇಳು ತಿಂಗಳ ಒಳಗಾಗಿ ಮೀಸಲಾತಿ ವಿವಾದ ಇತ್ಯರ್ಥ ಮಾಡುತ್ತೇವೆ. ಎಲ್ಲರಿಗೂ ನ್ಯಾಯ ಒದಗಿಸುತ್ತೇವೆ. ಸ್ವಾಮೀಜಿಗಳು ತಮ್ಮ ಪ್ರತಿಭಟನೆ ವಾಪಸ್ ಪಡೆಯಬೇಕು ಅಂತಾ ಮನವಿ ಮಾಡಿದರು. ಯತ್ನಾಳ್ ಅವ್ರೇ ನಿಮಗೂ ಹೇಳುತ್ತೇನೆ. ಉನ್ನತ ಮಟ್ಟದ ಸಮಿತಿ ರಚನೆ ಮಾಡಿದ್ದು, ಹಿಂದುಳಿದ ವರ್ಗಗಳ ಆಯೋಗದ ವರದಿಯನ್ನು ಕೇಳಿದ್ದೇವೆ. ಆರೇಳು ತಿಂಗಳ ಒಳಗಾಗಿ ನ್ಯಾಯ ಒದಗಿಸುತ್ತೇವೆ ಎಂದು ಸ್ಪಷ್ಟಪಡಿಸಿದರು.

ಇದಾದ ಬಳಿಕ ಸಚಿವರಾದ ಸಿಸಿ ಪಾಟೀಲ್, ಶಾಸಕ ಯತ್ನಾಳ್, ಶಾಸಕ ರೇಣುಕಾಚಾರ್ಯ ಧರಣಿ ಸ್ಥಳಕ್ಕೆ ತೆರಳಿ, ಸತ್ಯಾಗ್ರಹ ಕೈ ಬಿಡುವಂತೆ ಮನವಿ ಮಾಡಿದರು. ಇದಕ್ಕೆ ಸ್ವಾಮೀಜಿಗಳು ಸ್ಪಂದಿಸಿ ಅಧಿವೇಶನದಲ್ಲೇ ಸಿಎಂ ಪ್ರಸ್ತಾಪಿಸಿ ಸಮಯ ಕೇಳಿದ್ದಾರೆ. ಹೀಗಾಗಿ ಧರಣಿ ಸತ್ಯಾಗ್ರಹವನ್ನು ಆರು ತಿಂಗಳ ಮಟ್ಟಿಗೆ, ತಾತ್ಕಾಲಿಕವಾಗಿ ವಾಪಸ್ ಪಡೆಯುತ್ತಿರುವುದಾಗಿ ಘೋಷಿಸಿದರು.

Comments

Leave a Reply

Your email address will not be published. Required fields are marked *