ನ್ಯಾಯಾಲಯದ ನೋಟಿಸ್ ನೀಡಲು ಬಂದ ಪೊಲೀಸರಿಗೆ ಕಾಶಪ್ಪನವರ್ ಅವಾಜ್

– ಏಕ ವಚನದಲ್ಲಿ ಪೊಲೀಸರಿಗೆ ನಿಂದನೆ

ಬಾಗಲಕೋಟೆ: ಮನೆಯಲ್ಲಿ ಜಗಳವಾಗುತ್ತಿದೆ ಎಂಬ ಅಕ್ಕಪಕ್ಕದವರ ದೂರವಾಣಿ ಕರೆ ಹಾಗೂ ಹೈ ಕೋರ್ಟ್ ನೋಟಿಸ್ ತಲುಪಿಸಲು ಹೋದ ಪೊಲೀಸರೊಂದಿಗೆ ಹುನಗುಂದ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್ ವಾಗ್ವಾದ ನಡೆಸಿರುವ ಘಟನೆ ಇಳಕಲ್ ನಗರದಲ್ಲಿ ನಡೆದಿದೆ.

ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್ ಹಾಗೂ ಪತ್ನಿ ವೀಣಾ ಕಾಶಪ್ಪನವರ್ ಮಧ್ಯೆ ಗಲಾಟೆಯಾಗಿದೆ ಎಂದು ಅಕ್ಕಪಕ್ಕದವರಿಂದ ಇಳಕಲ್ ಪೊಲೀಸ್ ಠಾಣೆಗೆ ದೂರವಾಣಿ ಕರೆ ಬಂದಿದೆ. ಹೀಗಾಗಿ ಪರಿಶೀಲಿಸುವ ಜೊತೆಗೆ ಕೋರ್ಟ್ ವಾರೆಂಟ್ ನೋಟಿಸ್ ನೀಡಲು ಇಳಕಲ್ ಪೊಲೀಸರು ಕಾಶಪ್ಪನವರ್ ಮನೆಗೆ ತೆರಳಿದ್ದಾರೆ. ಈ ವೇಳೆ ಮಾಜಿ ಶಾಸಕ ಏಕವಚನದಲ್ಲಿ ವಾಗ್ವಾದ ನಡೆಸಿ ದುರ್ವರ್ತನೆ ತೋರಿದ್ದಾರೆ.

ಇಳಕಲ್ ನಗರದ ಕಾಶಪ್ಪನವರ್ ಮನೆಯಲ್ಲಿ ಗಲಾಟೆ ನಡೆದಿದೆ ಎಂದು ಅಕ್ಕಪಕ್ಕದ ಮನೆಯವರು ಪೊಲೀಸ್ ಠಾಣೆಗೆ ಕರೆ ಮಾಡಿ ತಿಳಿಸಿದ್ದಾರೆ. ಅಲ್ಲದೆ ಬೆಂಗಳೂರು ಜನಪ್ರತಿನಿಧಿಗಳ ಕೋರ್ಟ್ ನಿಂದ ಹಳೆಯ ಕೇಸ್ ಗೆ ಸಂಬಂಧಿಸಿದಂತೆ ಕಾಶಪ್ಪನವರ್‍ಗೆ ನೋಟಿಸ್ ಜಾರಿಯಾಗಿತ್ತು. ಹೀಗಾಗಿ ಹುನಗುಂದ ಸಿಪಿಐ ಹೊಸಕೇರಪ್ಪ ಹಾಗೂ ಇಳಕಲ್ ನಗರ ಠಾಣೆ ಪಿಎಸ್‍ಐ ಎಸ್.ಬಿ.ಪಾಟೀಲ್ ಅವರು ಕಾಶಪ್ಪವರ್ ಮನೆಗೆ ಭೇಟಿ ನೀಡಿದ್ದಾರೆ. ಸಿಪಿಐ, ಪಿಎಸ್‍ಐ ಜೊತೆ ವಾಗ್ವಾದ ನಡೆಸಿದ ಮಾಜಿ ಶಾಸಕ ಕಾಶಪ್ಪನವರ್, ನಮ್ಮ ಮನೆಯಲ್ಲಿ ಗಲಾಟೆ ಎಲ್ಲಿ ಆಗಿದೆ ಸಾಬೀತು ಮಾಡಿ, ಎಲ್ಲಿದೆ ಎಸ್‍ಪಿ ಆದೇಶ ಎಂದು ಪೊಲೀಸರಿಗೆ ಆವಾಜ್ ಹಾಕಿದ್ದಾರೆ.

ನಮ್ಮ ಮನೆಗೆ ಹೇಗೆ ಬಂದಿರಿ ಎಂದು ಪೊಲೀಸರ ಮೇಲೆ ಗರಂ ಆದ ಕಾಶಪ್ಪನವರ್, ಪೊಲೀಸರೊಂದಿಗೆ ಏಕವಚನದಲ್ಲಿ ವಾಗ್ವಾದ ನಡೆಸಿದ್ದಾರೆ. ನೀವು ವಾರೆಂಟ್ ಅಂತ ಬಂದಿಲ್ಲ, ನಮ್ಮ ಮನೆಯಲ್ಲಿ ಗಲಾಟೆ ಅಂತ ಹೇಳಿದ್ದಾರೆ, ಅದಕ್ಕೆ ಬಂದಿದ್ದೀರಿ ಎಂದು ಪೊಲೀಸರ ಜೊತೆ ಏಕವಚನದಲ್ಲಿ ವಾಗ್ವಾದ ನಡೆಸಿದರು. ನಾನು ಇದನ್ನ ತನಿಖೆಗೆ ಕೊಡುತ್ತೇನೆ ಎಂದು ಪೊಲೀಸರಿಗೆ ಆವಾಜ್ ಹಾಕಿದ್ದಲ್ಲದೇ, ಅರೆಸ್ಟ್ ಮಾಡಿ ಎಂದು ಪಟ್ಟು ಹಿಡಿದು ಪೊಲೀಸ್ ಅಧಿಕಾರಿಗಳ ಜೊತೆ ಅಸಭ್ಯವಾಗಿ ವರ್ತಿಸಿದ್ದಾರೆ. ಕೇಸ್ ಹಾಕುತ್ತೇನೆ ನೋಡ್ಕೊತಿನಿ ಅಂದಿದ್ದೀರಿ, ಅರೆಸ್ಟ್ ಮಾಡಿ, ಎಷ್ಟು ಕೇಸ್ ಮಾಡ್ತೀರಿ ಮಾಡಿ ಎಂದು ಪೊಲೀಸರ ಜೊತೆ ವಾಗ್ವಾದ ನಡೆಸಿದರು.

ನಾವು ನೋಟಿಸ್ ನೀಡಲು ಬಂದಿದ್ದೇವೆ ಎಂದು ಪೊಲೀಸ್ ಅಧಿಕಾರಿಗಳು ಎಷ್ಟೇ ಹೇಳಿದರೂ ಸ್ಪಂದಿಸದ ಕಾಪ್ಪನವರ್, ಸರ್ಚ್ ವಾರಂಟ್ ಇಲ್ಲದೇ ನನ್ನ ಮನೆಗೆ ಆಕ್ರಮವಾಗಿ ನುಗ್ಗಿದ್ದೀರಿ ಎಂದು ಪೊಲೀಸರ ವಿರುದ್ಧವೇ ಆರೋಪ ಮಾಡಿದ್ದಾರೆ. ಅಲ್ಲದೆ ಸ್ಥಳಕ್ಕೆ ಎಸ್‍ಪಿ ಬರಬೇಕು ಎಂದು ಪಟ್ಟುಹಿಡಿದಿರುವ ಕಾಪ್ಪನವರ್, ಮನೆಯಲ್ಲಿ ಬೆಂಬಲಿಗರನ್ನು ಕರೆದುಕೊಂಡು ಕೂತಿದ್ದಾರೆ. ಸ್ಥಳೀಯ ಶಾಸಕ ದೊಡ್ಡನಗೌಡ ಪಾಟೀಲ್ ಕುಮ್ಮಕ್ಕಿನಿಂದ ನಮ್ಮ ಮನೆಗೆ ಬಂದು ದೌರ್ಜನ್ಯ ಮಾಡುತ್ತಿದ್ದೀರಿ ಎಂದು ಆರೋಪಿಸಿ, ಪೊಲೀಸ್ ಅಧಿಕಾರಿಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

Comments

Leave a Reply

Your email address will not be published. Required fields are marked *