ನೋಡನೋಡುತ್ತಲೇ ಹಣ ಎಗರಿಸಿದ ಖತರ್ನಾಕ್ ಕಳ್ಳ – ಸಿಸಿಟಿವಿ ಕ್ಯಾಮೆರಾದಲ್ಲಿ ದೃಶ್ಯ ಸೆರೆ

– ಬೈಕ್ ಸೈಡ್ ಬ್ಯಾಗ್ ನಲ್ಲಿದ್ದ 1 ಲಕ್ಷ ರೂ. ಹಣವನ್ನು ಎಗರಿಸಿ ಪರಾರಿ

ಕೊಪ್ಪಳ: ಹಾಡ ಹಗಲೇ ಜನರ ಮಧ್ಯೆ ಪೆಟ್ರೋಲ್ ಬಂಕ್ ನಲ್ಲಿ ಕಳ್ಳನೊಬ್ಬ ತನ್ನ ಕೈಚಳಕ ತೋರಿಸಿದ್ದಾನೆ. ಬೈಕಿನ ಸೈಡ್ ಬ್ಯಾಗ್ ನಲ್ಲಿದ್ದ ಒಂದು ಲಕ್ಷ ರೂಪಾಯಿ ಹಣವನ್ನು ಎಗರಿಸಿಕೊಂಡು ಪರಾರಿಯಾಗಿದ್ದಾನೆ.

ಕೊಪ್ಪಳದ ಪೆಟ್ರೋಲ್ ಬಂಕ್‍ವೊಂದರಲ್ಲಿ ಈ ಘಟನೆ ನಡೆದಿದ್ದು, ಚಾಲಾಕಿ ಕಳ್ಳನ ಕೈಚಳಕ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಚನ್ನಪ್ಪ ಹನುಮಗೌಡ ಪೊಲೀಸ್ ಪಾಟೀಲ್ ಹಣ ಕಳೆದುಕೊಂಡವರಾಗಿದ್ದಾರೆ.

ಲಾಚನಕೇರಿಯ ಚನ್ನಪ್ಪ ಬುಧವಾರ ಒಂದು ಲಕ್ಷ ರುಪಾಯಿ ಹಣವನ್ನು ಬೈಕ್ ನ ಸೈಡ್ ಬ್ಯಾಗ್ ನಲ್ಲಿಟ್ಟುಕೊಂಡು ಪೆಟ್ರೋಲ್ ಹಾಕಿಸಿಕೊಳ್ಳಲು ಬಂದಿದ್ದರು. ಬ್ಯಾಗ್ ನಲ್ಲಿ ಹಣವಿರುವುದನ್ನು ಆ ಕಳ್ಳ ಹಿಂಬಾಲಿಸಿಕೊಂಡು ಬಂದು ಬೈಕ್ ಸವಾರನಿಗೆ ಗೊತ್ತಾಗದ ರೀತಿಯಲ್ಲಿ ಪೆಟ್ರೋಲ್ ಬಂಕ್ ನಲ್ಲಿ ಹಣ ಕದ್ದೊಯ್ದಿದ್ದಾನೆ.

ಜನರ ನಡುವೆಯೇ ಕಳ್ಳ ಕೈಚಳಕ ತೋರಿಸಿದ್ದು, ಕಳ್ಳನ ಕೈಚಳಕ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಕಳ್ಳರು, ವಂಚಕರಿಂದ ಜಾಗರೂಕರಾಗಿರುವಂತೆ ಪೊಲೀಸರು ಎಚ್ಚರಿಕೆ ನೀಡಿದ ನಂತರವೂ ಜನ ಮೈ ಮರೆಯುತ್ತಿದ್ದಾರೆ ಎಂಬುದಕ್ಕೆ ಇಂತಹ ಘಟನೆ ಸಾಕ್ಷಿಯಾಗಿದೆ. ಸದ್ಯ ಈ ಸಂಬಂಧ ಕೊಪ್ಪಳ ನಗರ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ:ಕಿಡ್ನಿ ವೈಫಲ್ಯದ ನಡುವೆಯೂ SSLCಯಲ್ಲಿ ಟಾಪರ್ ಆದ ವಿದ್ಯಾರ್ಥಿನಿ

Comments

Leave a Reply

Your email address will not be published. Required fields are marked *