ನೋಟಿಸ್ ಕೊಟ್ಟು ಹೆದರಿಸ್ಬೋದು ಅಂದ್ಕೊಂಡ್ರೆ ಮೂರ್ಖತನ: ಸಿದ್ದರಾಮಯ್ಯ

ಬೆಂಗಳೂರು: ಸರ್ಕಾರದ ವಿರುದ್ಧ 2 ಸಾವಿರ ಕೋಟಿ ರೂ. ಭ್ರಷ್ಟಾಚಾರ ಆರೋಪ ಮಾಡಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಗೆ ಬಿಜೆಪಿ ಲೀಗಲ್ ನೋಟಿಸ್ ನೀಡಿದೆ. ಆದರೆ ಈ ನೋಟಿಸ್‍ಗೆ ನಾವು ಹೆದರಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಈ ಸಂಬಂಧ ಟ್ವೀಟ್ ಮಾಡಿರುವ ಮಾಜಿ ಸಿಎಂ, ಕೊರೊನಾ ಉಪಕರಣಗಳ ಖರೀದಿಯಲ್ಲಿನ ಅಕ್ರಮಗಳನ್ನು ಬಯಲಿಗೆ ಎಳೆದಿದ್ದಕ್ಕಾಗಿ ಸಿಎಂ ಬಿಎಸ್‍ವೈ ಅವರು ವಿಧಾನ ಪರಿಷತ್ ಸದಸ್ಯರೊಬ್ಬರಿಂದ ವಕೀಲರ ಮೂಲಕ ನನಗೆ ಮತ್ತು ಡಿಕೆ ಶಿವಕುಮಾರ್ ಅವರಿಗೆ ನೋಟಿಸ್ ಕೊಡಿಸಿದ್ದಾರೆ, ಸಂತೋಷ.
ಇದಕ್ಕೆ ಕಾನೂನಿನ ಮೂಲಕವೇ ಉತ್ತರ ಕೊಡ್ತೇವೆ ಎಂದು ಬರೆದುಕೊಂಡಿದ್ದಾರೆ.

ಇನ್ನೊಂದು ಟ್ವೀಟ್ ಮಾಡಿ, ಸಿಎಂ, ಸಚಿವರು ಇಲ್ಲವೆ ಮುಖ್ಯಕಾರ್ಯದರ್ಶಿಯವರಿಂದ ಲೀಗಲ್ ನೋಟಿಸ್ ಬರಬಹುದೆಂಬ ನಿರೀಕ್ಷೆ ಇತ್ತು. ಒಬ್ಬ ಎಂಎಲ್‍ಸಿಯಿಂದ ಕೊಡಿಸಿದ್ದಾರೆ. ಈ ರೀತಿ ನಮ್ಮನ್ನು ಹೆದರಿಸಬಹುದೆಂದು ಅವರು ನಿರೀಕ್ಷಿಸಿದ್ದರೆ ಅದು ಸರ್ಕಾರದ ಮೂರ್ಖತನ. ನಮ್ಮ ಹೋರಾಟವನ್ನು ನಾವು ಜನರ ಬಳಿ ಕೊಂಡೊಯ್ಯುತ್ತಿದ್ದೇವೆ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

ಬಿಜೆಪಿ ನೋಟಿಸ್:
ರಾಜ್ಯ ಸರ್ಕಾರದ ವಿರುದ್ಧ ಸುದ್ದಿಗೋಷ್ಠಿ ನಡೆಸಿ ಆರೋಪ ಮಾಡಿದ್ದ ಕಾಂಗ್ರೆಸ್ ನಾಯಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಬಿಜೆಪಿ ಈ ಹಿಂದೆಯೇ ತಿಳಿಸಿತ್ತು. ಅದರಂತೆ ಸದ್ಯ ನೋಟಿಸ್ ಜಾರಿ ಮಾಡಲಾಗಿದ್ದು, ಮಾಹಿತಿಯೇ ಇಲ್ಲದೇ ಹೇಗೆ 2 ಸಾವಿರ ಕೋಟಿ ಆರೋಪ ಮಾಡಿದ್ದೀರಿ ಎಂದು ನೋಟಿಸ್‍ನಲ್ಲಿ ಪ್ರಶ್ನಿಸಿದೆ.

ರಾಜ್ಯ ಸರ್ಕಾರದ ನಾಲ್ಕು ಇಲಾಖೆಗಳಲ್ಲಿ ಕೊರೊನಾ ಹೆಸರಿನಲ್ಲಿ ಭ್ರಷ್ಟಾಚಾರ ನಡೆದಿದೆ. ಸುಮಾರು 2 ಸಾವಿರ ಕೋಟಿ ರೂ. ಹೆಚ್ಚು ಅಕ್ರಮ ನಡೆದಿದೆ. ನಾವು ಸರ್ಕಾರಕ್ಕೆ ಲೆಕ್ಕಕೊಡಿ ಎಂದು ಪತ್ರ ಬರೆದರು ಮಾಹಿತಿ ನೀಡಿಲ್ಲ ಎಂದು ಕಾಂಗ್ರೆಸ್ ನಾಯಕರು ಆರೋಪಿಸಿದ್ದರು. ಸರ್ಕಾರ ಯಾವುದೇ ಮಾಹಿತಿ ನೀಡಿಲ್ಲ ಎಂದಾದರೆ 2 ಸಾವಿರ ಕೋಟಿ ರೂ. ಭ್ರಷ್ಟಾಚಾರ ನಡೆದಿದೆ ಎಂಬ ಬಗ್ಗೆ ಕಾರಣ ಹಾಗೂ ದಾಖಲೆ ನೀಡಿ, ಇಲ್ಲವಾದರೆ ನಿಮ್ಮ ಆರೋಪವನ್ನು ವಾಪಸ್ ಪಡೆಯಿರಿ. ಬೇಷರತ್ ಕ್ಷಮೆ ಯಾಚಿಸಿ ಎಂದು ನೋಟಿಸ್‍ನಲ್ಲಿ ಬಿಜೆಪಿ ಆಗ್ರಹಿಸಿತ್ತು.

Comments

Leave a Reply

Your email address will not be published. Required fields are marked *