ನೇಗಿಲು ಹಿಡಿದು ಉಳುಮೆ ಮಾಡಿದ ಯುವತಿಯರು- ಕೊಟ್ಟ ಮಾತಿನಂತೆ ಟ್ರ್ಯಾಕ್ಟರ್ ನೀಡಿದ ಸೋನು ಸೂದ್

– ನಟನ ಕಾರ್ಯಕ್ಕೆ ಸಿಎಂ ಚಂದ್ರಬಾಬು ನಾಯ್ಡು ಮೆಚ್ಚುಗೆ
– ಹೆಣ್ಣು ಮಕ್ಕಳ ಶಿಕ್ಷಣಕ್ಕೂ ಸಹಾಯ

ಮುಂಬೈ: ನಟ ಸೋನು ಸೂದ್ ಕೊರೊನಾ ಹಿನ್ನೆಲೆಯಲ್ಲಿ ಲಾಕ್‍ಡೌನ್ ಆದಾಗಿನಿಂದಲೂ ಕಷ್ಟದಲ್ಲಿರೋರಿಗೆ ತಮ್ಮ ಕೈಲಾದ ಸಹಾಯ ಮಾಡುತ್ತಿದ್ದಾರೆ. ಇದೀಗ ಸೋನು ಸೂದ್ ಕೊಟ್ಟ ಮಾತಿನಂತೆ ಬಡ ರೈತರೊಬ್ಬರ ಕುಟುಂಬಕ್ಕೆ ಟ್ರ್ಯಾಕ್ಟರ್ ಅನ್ನು ಉಡುಗೊರೆಯಾಗಿ ನೀಡಿದ್ದಾರೆ. ಇದನ್ನೂ ಓದಿ: ‘ಮಹಾ’ ಪೊಲೀಸರಿಗೆ 25 ಸಾವಿರ ಫೇಸ್‍ಶೀಲ್ಡ್ ನೀಡಿದ ನಟ ಸೋನು ಸೂದ್

ಕೆಲ ದಿನಗಳ ಹಿಂದೆ ರೈತರೊಬ್ಬರ ಇಬ್ಬರು ಹೆಣ್ಣುಮಕ್ಕಳು ತಂದೆಗೆ ಕೃಷಿಯಲ್ಲಿ ಸಹಾಯ ಮಾಡಲು ಮುಂದಾಗಿದ್ದರು. ಎತ್ತುಗಳಿಲ್ಲ ಕಾರಣ ಇಬ್ಬರು ಹೆಣ್ಣು ಮಕ್ಕಳಿಂದಲೇ ನೇಗಿಲನ್ನು ಎಳೆಯಿಸಿ, ಭೂಮಿ ಉಳುಮೆ ಮಾಡುತ್ತಿದ್ದರು. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಯ ರೈತ ನಾಗೇಶ್ವರ್ ರಾವ್ ಕುಟುಂಬ ಎಂದು ಗೊತ್ತಾಗಿದೆ. ಇದನ್ನೂ ಓದಿ: 400ಕ್ಕೂ ಹೆಚ್ಚು ವಲಸೆ ಕಾರ್ಮಿಕರ ಕುಟುಂಬಗಳಿಗೆ ಸೋನು ಸೂದ್ ಆರ್ಥಿಕ ನೆರವು

ಈ ವಿಡಿಯೋ ನೋಡಿದ ನಟ ಅವರ ಕುಟುಂಬದ ಪರಿಸ್ಥಿತಿ ಬಗ್ಗೆ ತಿಳಿದುಕೊಂಡಿದ್ದು, ಅವರಿಗೆ ಸಹಾಯ ಮಾಡುವುದಾಗಿ ಭರವಸೆ ನೀಡಿದ್ದರು. ಈ ಬಗ್ಗೆ ಟ್ವೀಟ್ ಮಾಡಿದ್ದ ನಟ, “ಇಬ್ಬರು ಹೆಣ್ಣು ಮಕ್ಕಳು ತಮ್ಮ ವಿದ್ಯಾಭ್ಯಾಸದ ಕಡೆ ಗಮನ ಹರಿಸಲಿ” ಎಂದು ಪೋಸ್ಟ್ ಮಾಡಿದ್ದಾರೆ. ಅಲ್ಲದೇ ಕಷ್ಟದಲ್ಲಿದ್ದ ಕುಟುಂಬಕ್ಕೆ ಮೊದಲು ಎತ್ತುಗಳನ್ನು ಕೊಡಿಸುವುದಾಗಿ ಹೇಳಿದ್ದರು.

ನಂತರ ಮತ್ತೊಂದು ಟ್ವೀಟ್ ಮಾಡಿದ್ದ ಸೋನು, “ಈ ಕುಟುಂಬ ಜೋಡಿ ಎತ್ತುಗಳಿಗೆ ಅರ್ಹವಲ್ಲ, ಆದರೆ ಟ್ರ್ಯಾಕ್ಟರ್‌ಗೆ ಅರ್ಹರಾಗಿದ್ದಾರೆ. ಆದ್ದರಿಂದ ನಿಮಗೆ ಟ್ರ್ಯಾಕ್ಟರ್ ಕಳುಹಿಸುತ್ತೇನೆ. ಸಂಜೆ ಹೊತ್ತಿಗೆ ಟ್ರ್ಯಾಕ್ಟರ್ ಹೊಲವನ್ನು ಉಳುಮೆ ಮಾಡುತ್ತದೆ. ಆಶೀರ್ವದಿಸಿರಿ” ಎಂದು ಹೇಳಿದ್ದರು. ಅದರಂತೆಯೇ ಕೊಟ್ಟ ಮಾತಿನಂತೆ ಸೋನು ಸೂದ್ ಭಾನುವಾರ ಸಂಜೆ ಟ್ರ್ಯಾಕ್ಟರ್ ರೈತನ ಜಮೀನು ಸೇರಿದೆ.

ಟ್ರ್ಯಾಕ್ಟರ್ ನೋಡಿ ಕುಟುಂಬದವರು ಸಂತಸಗೊಂಡಿದ್ದಾರೆ. ಅಲ್ಲದೇ ಬಡವರಿಗೆ, ನಿರ್ಗತಿಕರಿಗೆ ಸಹಾಯ ಮಾಡುತ್ತಿರುವ ಸೋನು ಸೂದ್ ಕೆಲಸಕ್ಕೆ ಆಂಧ್ರ ಪ್ರದೇಶ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಟ್ವೀಟ್ ಮಾಡುವ ಮೂಲಕ ಶ್ಲಾಘಿಸಿದ್ದಾರೆ. ಜೊತೆಗೆ ರೈತರ ಇಬ್ಬರು ಹೆಣ್ಣು ಮಕ್ಕಳ ಶಿಕ್ಷಣದ ಬಗ್ಗೆ ಕಾಳಜಿ ವಹಿಸುವುದಾಗಿ ಹೇಳಿದ್ದಾರೆ.

ನಾವು ಕಳೆದ 15 ವರ್ಷಗಳಿಂದ ಮದನಪಲ್ಲಿನಲ್ಲಿ ವಾಸಿಸುತ್ತಿದ್ದೇವೆ. ಅಲ್ಲಿ ಚಹಾ ಅಂಗಡಿಯೊಂದನ್ನು ಇಟ್ಟುಕೊಂಡು ಜೀವನ ಮಾಡುತ್ತಿದ್ದೆವು. ಆದರೆ ಲಾಕ್‍ಡೌನ್ ಜಾರಿಗೆ ಬಂದ ನಂತರ ನಾವು ನಮ್ಮ ಸ್ಟಾಲ್ ಅನ್ನು ಮುಚ್ಚಿ ಒಂದು ತಿಂಗಳು ನಮ್ಮ ನಿವಾಸದಲ್ಲಿದ್ದೆವು. ಸ್ವಲ್ಪ ಹಣ ಮಾತ್ರ ಉಳಿದಿದೆ. ಹೀಗಾಗಿ ನಮ್ಮ ಗ್ರಾಮಕ್ಕೆ ವಾಪಸ್ ಬಂದಿದ್ದೇವೆ. ಆದರೆ ಭೂಮಿಯನ್ನು ಉಳುಮೆ ಮಾಡಲು ಟ್ರಾಕ್ಟರ್ ಬಾಡಿಗೆಗೆ ತೆಗೆದುಕೊಳ್ಳುವಷ್ಟು ಹಣ ನಮ್ಮಲ್ಲಿ ಇರಲಿಲ್ಲ. ಆದ್ದರಿಂದ ನಾವು ನಮ್ಮ ತಂದೆಗೆ ಸಹಾಯ ಮಾಡಲು ಪ್ರಾರಂಭಿಸಿದ್ದೆವು” ಎಂದು ರೈತನ ಹಿರಿಯ ಮಗಳು ಹೇಳಿದ್ದಾರೆ.

Comments

Leave a Reply

Your email address will not be published. Required fields are marked *